LatestUncategorized

*ರಾಜ್ಯದ ಅತೀ ದೊಡ್ಡ ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆ ಯಶಸ್ವಿ*

ಜಿಲ್ಲಾಧಿಕಾರಿಗಳ ಶ್ರಮ; ಅಧಿಕಾರಿ, ಸಿಬ್ಬಂದಿಗಳ ಅನವರತ ಪರಿಶ್ರಮದ ಫಲ!

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಹದಿನೆಂಟು ಮತಕ್ಷೇತ್ರಗಳಿವೆ. ಬೆಂಗಳೂರು ಹೊರತುಪಡಿಸಿದರೆ ಅತೀ ಹೆಚ್ಚು ಕ್ಷೇತ್ರಗಳಿರುವುದು ಇಲ್ಲಿಯೇ. ಈ ಜಿಲ್ಲೆಯಲ್ಲಿ ಚುನಾವಣಾ ನಡೆಸುವುದು ಹೆಚ್ಚುಕಡಿಮೆ ಒಂದು ಚಿಕ್ಕ ರಾಜ್ಯದ‌ ಚುನಾವಣೆ ನಡೆಸುವುದಕ್ಕೆ ಸಮ!

ಈ ಜಿಲ್ಲೆಯ ಹದಿನೆಂಟು ಮತಕ್ಷೇತ್ರಗಳಲ್ಲಿ ಚುನಾವಣೆ ನಡೆಸುವುದು ಅತ್ಯಂತ ಸವಾಲಿನ ಕೆಲಸ. ಈ ಸವಾಲನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಗೆ ಸಲ್ಲುತ್ತದೆ.

ಮತದಾರರ ಪಟ್ಟಿ ಸಿದ್ಧಪಡಿಸುವುದರಿಂದ ಹಿಡಿದು ಮತ ಎಣಿಕೆ ಪೂರ್ಣಗೊಳಿಸುವವರೆಗೆ ಪ್ರತಿಯೊಂದು ಕೆಲಸವೂ ಮಹತ್ತದ್ದಾಗಿರುತ್ತದೆ.
22 ಸಾವಿರಕ್ಕೂ ಅಧಿಕ ಅಧಿಕಾರಿಗಳು/ಸಿಬ್ಬಂದಿಯನ್ನು ಬಳಸಿಕೊಂಡು ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಸಮರ್ಪಕವಾಗಿ ಹಾಗೂ ಅಚ್ಚುಕಟ್ಟಾಗಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನಿರ್ವಹಿಸಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ.

ಇಂತಹ ದೊಡ್ಡ ಸವಾಲು ಸಮರ್ಪಕವಾಗಿ ನಿರ್ವಹಿಸಲು ಸಾಥ್ ನೀಡಿದವರು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು.

ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಜತೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಚೆಕ್ ಪೋಸ್ಟ್ ಸ್ಥಾಪನೆ, ಭದ್ರತೆ ನಿಯೋಜನೆ ಕೂಡ ಅಷ್ಟೇ ಸವಾಲಿನ ಕೆಲಸವಾಗಿದ್ದು, ಇಬ್ಬರೂ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸುವ ನ್ಯಾಯಸಮ್ಮತ ಹಾಗೂ ಸುಗಮ ಚುನಾವಣೆ ನಡೆಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಒಂದು ತಿಂಗಳಿನಿಂದ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಚುನಾವಣಾ ಪ್ರಕ್ರಿಯೆಯಲ್ಲಿ ಜನರು ಭಾಗವಹಿಸಲು ಪ್ರೇರಪಣೆ ನೀಡಿದವರು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯತ ಸಿಇಓ ಹರ್ಷಲ್ ಭೋಯರ್ ಅವರ ಪಾತ್ರ ಕೂಡ ಅಭಿನಂದನೀಯವಾಗಿದೆ.
ಇದಲ್ಲದೇ ಕಂದಾಯ, ಪೊಲೀಸ್, ಗ್ರಾಮೀಣಾಭಿವೃದ್ಧಿ, ಅಬಕಾರಿ, ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಇಡೀ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ಹಗಲಿರುಳು ಶ್ರಮಿಸುರುವುದು ಉಲ್ಲೇಖನೀಯವಾಗಿದೆ.
ಒಟ್ಟಾರೆ ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ‌ ನಡೆಸಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಶಾಂತಿಯುತ ಮತದಾನ; ಜಿಲ್ಲಾಧಿಕಾರಿ ಕೃತಜ್ಞತೆ:

ಬೆಂಗಳೂರು ನಗರ ಹೊರತುಪಡಿಸಿದರೆ ಅತೀ ವಿಧಾನಸಭಾ ಮತಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯು ರಾಜ್ಯದ ದೊಡ್ಡ ಜಿಲ್ಲೆಯಾಗಿದೆ.
ಇಂತಹ ದೊಡ್ಡ ಜಿಲ್ಲೆಯಲ್ಲಿ ಪಾರದರ್ಶಕ, ನ್ಯಾಯಸಮ್ಮತ ಮತ್ತು ಸುಗಮ ರೀತಿಯಲ್ಲಿ ಮತದಾನ ಮತ್ತು ಮತ ಎಣಿಕೆ ನಡೆಸಲು ಕಂದಾಯ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತಿ ಸೇರಿದಂತೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದಲ್ಲದೇ ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಮತ್ತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ ಅವರು ಸೂಕ್ತ ಭದ್ರತೆ ಒದಗಿಸುವುದರ ಜತೆಗೆ ನಾಗರಿಕರು ನಿರ್ಭೀತಿಯಿಂದ ಮತಚಲಾಯಿಸುವ ಅವಕಾಶ ಕಲ್ಪಿಸಿಕೊಟ್ಟಿರುತ್ತಾರೆ. ಮತ ಎಣಿಕೆ ಕೂಡ ಸುಗಮವಾಗಿ ನಡೆದಿರುತ್ತದೆ.

ಜಿಲ್ಲೆಯಲ್ಲಿ ಒಟ್ಟಾರೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸಹಕರಿಸಿದ ಎಲ್ಲ ಇಲಾಖೆಯ ಅಧಿಕಾರಿ ಸಿಬ್ಬಂದಿ, ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button