*545 ಪಿಎಸ್ಐ ಹುದ್ದೆ 3 ತಿಂಗಳಲ್ಲಿ ಭರ್ತಿ: ಮನೆ ಮನೆಗೆ ಪೊಲೀಸ್ ಹಾಗೂ ಅಕ್ಕ ಪಡೆ ಯೋಜನೆಯಿಂದ ಅಪರಾಧ ಕೃತ್ಯಗಳು ಇಳಿಕೆ: ಗೃಹ ಸಚಿವ ಪರಮೇಶ್ವರ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ಈಗಾಗಲೆ ಅಭ್ಯರ್ಥಿಗಳ ತರಬೇತಿ ನಡೆಯುತ್ತಿದೆ. ಮೂರು ತಿಂಗಳ ಒಳಗಾಗಿ ಖಾಲಿ ಇರುವ ಸ್ಥಳಗಳಲ್ಲಿ
ಪಿಎಸ್‌ಐ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಗೃಹ ಸಚಿವರು, ಕಳೆದ ಐದು ವರ್ಷಗಳಿಂದಲೂ ಪಿಎಸ್‌ಐಗಳ ನೇಮಕಾತಿ ಆಗಿಲ್ಲ. ಈ ಹಿಂದೆ 545 ಪಿ.ಎಸ್.ಐ. ಹುದ್ದೆಗಳ ನೇಮಕಾತಿಗಾಗಿ ನಡೆದಂತಹ ಪ್ರಕರಣವನ್ನು ಬಗೆಹರಿಸಿ, ನೇಮಕಾತಿ ಮಾಡಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ತರಬೇತಿಗಾಗಿ ನಿಯೋಜಿಸಲಾಗಿದೆ. ಮೂರು ತಿಂಗಳಲ್ಲಿ ತರಬೇತಿ ಪೂರ್ಣಗೊಳ್ಳಲಿದ್ದು, ಬಳಿಕ ಖಾಲಿ ಇರುವೆಡೆ, ಅಗತ್ಯ ಇರುವ ಕಡೆಗಳಲ್ಲಿ ಪಿಎಸ್‌ಐಗಳ ಹುದ್ದೆಯನ್ನು ಭರ್ತಿ ಮಾಡಲಾಗುವುದು. ಪೊಲೀಸ್ ಕಾನ್ಸ್ಟೇಬಲ್‌ಗಳ ನೇಮಕಾತಿಗಾಗಿಯೂ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿde ಅನುಮೋದನೆಯಾಗಿ ಬಂದ ಬಳಿಕ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.
ಕರಾವಳಿ ಮುಂತಾದೆಡೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯ ಪಡೆಯನ್ನು ನೇಮಿಸಿದ್ದೇವೆ. ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ನಾವು ಜಾರಿ ಮಾಡಿದ್ದು, 50 ಮನೆಗೆ ಒಂದು ಕ್ಲಸ್ಟರ್‌ನಂತೆ ಮಾಡಿ, ಪೊಲೀಸ್ ಕಾನ್ಸ್ಟೇಬಲ್ ಅವರು ಮನೆ ಮನೆಗೆ ಭೇಟಿ ನೀಡಿ, ಆಯಾ ಮನೆಗಳಲ್ಲಿನ ಕುಟುಂಬಗಳಿಂದ ಸಮಸ್ಯೆಗಳ ಬಗ್ಗೆ ನಿಗದಿತ ಪ್ರಶ್ನೆಗಳನ್ನು ಕೇಳಿ ವಿವರ ಪಡೆದು, ಕ್ರಮ ವಹಿಸಿದ್ದು, ಇದು ಜನರಿಂದಲೂ ಪ್ರಶಂಸೆಗೆ ಒಳಗಾಗಿದೆ.
ಇದರ ಜೊತೆಗೆ ಮಹಿಳೆಯರ ಸುರಕ್ಷತೆಗಾಗಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಕ್ಕ-ಪಡೆ ರಚಿಸಲಾಗುತ್ತಿದ್ದು, ಇದೂ ಕೂಡ ಮೆಚ್ಚುಗೆ ಪಡೆದುಕೊಂಡಿದೆ. ರಾಜ್ಯದಲ್ಲಿ ಇದರಿಂದ ಅಪರಾಧಗಳ ಸಂಖ್ಯೆ ಇಳಿಮುಖವಾಗುತ್ತಿದೆ. ವಿಶೇಷವಾಗಿ ಕರಾವಳಿ ಪ್ರದೇಶವನ್ನು ಸುರಕ್ಷಿತ ಪ್ರದೇಶವಾಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಈ ನಿಟ್ಟಿನಲ್ಲಿ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.




