*ಮದುವೆ ಸಮಾರಂಭದಲ್ಲಿ ಒಟ್ಟಾಗಿ ಕಾಣಿಸಿಕೊಂಡ ವಿಜಯ್-ತ್ರಿಷಾ*:*ಮತ್ತೆ ಶುರುವಾಯ್ತು ಡೇಟಿಂಗ್ ವದಂತಿ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡು ರಾಜಕೀಯ ಮತ್ತು ಚಿತ್ರರಂಗದಲ್ಲಿ ಇದೀಗ ವಿಜಯ್ ಹಾಗೂ ನಟಿ ತ್ರಿಷಾ ಮತ್ತೆ ಸುದ್ದಿಯಲ್ಲಿದ್ದಾರೆ. ಚೆನ್ನೈನಲ್ಲಿ ನಡೆದ ಅದ್ಧೂರಿ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದು, ವೇದಿಕೆ ಏರಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಈ ವೇಳೆ ವಿಜಯ್ ಅವರ ತಾಯಿ ಶೋಭಾ ಕೂಡ ಉಪಸ್ಥಿತರಿದ್ದರು. ಸದ್ಯ ಕಾರ್ಯಕ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.
ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಕುಟುಂಬದ ಮದುವೆ ಆರತಕ್ಷತೆ ಸಮಾರಂಭ ಚೆನ್ನೈನ ಪ್ರಸಿದ್ಧ ಲೀಲಾ ಪ್ಯಾಲೇಸ್‌ನಲ್ಲಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ವಿಜಯ್ ಮತ್ತು ತ್ರಿಷಾ ಜೊತೆಯಾಗಿ ಆಗಮಿಸಿದ್ದರು. ಇಬ್ಬರೂ ಕೈಯಲ್ಲಿ ಹೂಗುಚ್ಛ ಹಿಡಿದು ವೇದಿಕೆಗೆ ತೆರಳಿ ನವದಂಪತಿಗಳಿಗೆ ಶುಭ ಹಾರೈಸಿದರು. ಬಳಿಕ ಕುಟುಂಬದವರೊಂದಿಗೆ ಫೋಟೋಗೆ ಪೋಸ್ ನೀಡಿದರು.
ಈ ವೇಳೆ ವಿಜಯ್ ಕಂದು ಬಣ್ಣದ ರಾಯಲ್ ಸೂಟ್ ಧರಿಸಿದ್ದರೆ, ತ್ರಿಷಾ ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದರು. ವಿಜಯ್ ಅವರ ತಾಯಿ ಶೋಭಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೂವರೂ ಒಂದೇ ಕಡೆ ಕುಳಿತು ಸಮಾರಂಭ ವೀಕ್ಷಿಸಿದರು.
ಇನ್ನು, ವಿಜಯ್ ಮತ್ತು ತ್ರಿಷಾ ನಡುವಿನ ಸ್ನೇಹದ ಬಗ್ಗೆ ಕಳೆದ ಕೆಲವು ಸಮಯದಿಂದ ಹಲವು ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಕೂಡ ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿ ಹಿಂಪಡೆದಿದ್ದಾರೆ ಎಂಬ ಸುದ್ದಿ ಬಳಿಕ ಈ ಚರ್ಚೆಗಳು ತಣ್ಣಗಾಗಿದ್ದವು. ಇದೀಗ ಮತ್ತೊಮ್ಮೆ ಇಬ್ಬರೂ ಸಾರ್ವಜನಿಕವಾಗಿ ಜೊತೆಯಾಗಿ ಕಾಣಿಸಿಕೊಂಡಿರುವುದು ಕುತೂಹಲ ಹೆಚ್ಚಿಸಿದೆ.
ಬೆಳ್ಳಿತೆರೆಯಲ್ಲಿ ವಿಜಯ್ ಮತ್ತು ತ್ರಿಷಾ ಜನಪ್ರಿಯ ಜೋಡಿ. ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವ ಈ ಜೋಡಿಯ ಸ್ನೇಹದ ಬಗ್ಗೆ ಅಭಿಮಾನಿಗಳಲ್ಲಿ ಈಗಲೂ ಚರ್ಚೆ ನಡೆಯುತ್ತಿದೆ.




