EducationKarnataka NewsLatest

*ಕಾಲೇಜು ಜೀವನ ಭವಿಷ್ಯ ರೂಪಿಸಿಕೊಳ್ಳುವ ಪ್ರಮುಖ ಘಟ್ಟ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಇದು ಮನೆಯಲ್ಲಿ ಹೆಣ್ಣು ಜನಿಸಿದರೆ ಸಂಭ್ರಮಿಸುವ ಕಾಲ

ಪ್ರಗತಿವಾಹಿನಿ ಸುದ್ದಿ: ಪ್ರತಿಯೊಬ್ಬ ವಿದ್ಯಾರ್ಥಿಗಳು ತಂದೆ-ತಾಯಿಯ ಕನಸನ್ನು ನನಸು ಮಾಡಬೇಕು. ಇದಕ್ಕೆ ಕಠಿಣ ಶ್ರಮದ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವತಿಯಿಂದ ನಡೆದ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವ ಜನೋತ್ಸವ ‘ಶಕ್ತಿ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಕನ್ನಡದ ಪ್ರಪ್ರಥಮ ಮಹಿಳಾ ಕವಿಯತ್ರಿಯಾದ ಅಕ್ಕಮಹಾದೇವಿ ಅವರು ನಮ್ಮೆಲ್ಲರ ಆದರ್ಶವಾಗಿದ್ದಾರೆ ಎಂದರು.

ನಾನೊಬ್ಬಳು ತಾಯಿಯಾಗಿ, ರೈತನ ಮಗಳಾಗಿ, ಹಲವು ಏಳು ಬೀಳುಗಳ ನಡುವೆ ಇಂದು ಕರ್ನಾಟಕದ ಮಂತ್ರಿಯಾಗಿರುವೆ. ಪುರುಷರಿಗೆ 100 ಮೀಟರ್ ಓಡಿದರೂ ಗೋಲ್ಡ್ ಮೆಡಲ್ ಸಿಗುತ್ತದೆ. ಆದರೆ, ಸಾವಿರ ಮೀಟರ್ ಓಡಿದರೂ ಮಹಿಳೆಯರಿಗೆ ಮೆಡಲ್ ಕೊಡಲು ಹಿಂದೆ ಮುಂದೆ ನೋಡಲಾಗುತ್ತದೆ ಎಂದು ಸಚಿವರು ಹೇಳಿದರು.

ಹೆಣ್ಣು ಮಕ್ಕಳಲ್ಲಿ ಪರಸ್ಪರ ಸಹಕಾರ ಇರಬೇಕು. ಇಂದು ಹೆಣ್ಣು ಮಕ್ಕಳು ತೊಟ್ಟಿಲಿಗೆ ಸೀಮಿತವಿಲ್ಲ. ಇಂದು ಹೆಣ್ಣು ಹುಟ್ಟಿದರೂ ಸಂಭ್ರಮ ಪಡುವ ಸಂದರ್ಭದಲ್ಲಿ ನಾವಿದ್ದೇವೆ. ಸುಂದರ ಸಮಾಜ, ಸಂಸ್ಕೃತಿ ದೇಶದಲ್ಲಿ ನಾವಿದ್ದೇವೆ ಎಂದು ಸಚಿವರು ಹೇಳಿದರು.

ಕಷ್ಟ ಎಲ್ಲರಿಗೂ ಇರುತ್ತದೆ. ಆದರೆ ಗುರಿ ತಲುಪುವುದು ಮುಖ್ಯ, ಗುರಿ ಇಲ್ಲದ ಜೀವನ ಬೋರಗಲ್ಲ ಮೇಲೆ ಮಳೆ ಸುರಿದಂತೆ. ಪ್ರಾಮಾಣಿಕವಾದ ಗುರಿ ಇರಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಪ್ರತಿಯೊಬ್ಬರು ತಂದೆ ತಾಯಿ ಕನಸುಗಳನ್ನು ಈಡೇರಿಸಬೇಕು. ನಾನೂ ಕೂಡ ಹಿಂದುಳಿದ ಪ್ರದೇಶದಿಂದ ಬಂದಿದ್ದೇನೆ. ಕೆಂಪು ಬಸ್ಸಿನಲ್ಲಿ ಓಡಾಡಿದ್ದೇನೆ‌. ಇಂದಿಗೂ ಅದೇ ಛಲ ನನ್ನಲ್ಲಿದೆ ಎಂದರು‌.

ಇರುವೆಗಳಿಗೂ ಸ್ವಾಭಿಮಾನ ಇರುತ್ತದೆ. ಮುಂದಾಲೋಚನೆ ಇರುತ್ತದೆ. ಮನುಷ್ಯರಾದ ನಮಗೆ ಮುಂದಿನ 80 ವರ್ಷಕ್ಕೆ ಜೀವನ ರೂಪಿಸುವ ಪರಿಕಲ್ಪನೆ ಬೇಕಲ್ಲವೇ. ವಿದ್ಯಾರ್ಥಿ ಜೀವನ ಗೋಲ್ಡನ್ ಟೈಮ್ ಇದ್ದಂತೆ. ಜೀವನ ವಿಕಸನ ಮಾಡಿಕೊಳ್ಳಲು ಇದು ಪ್ರಮುಖ ಘಟ್ಟ. ದೇಶ ಎತ್ತರಕ್ಕೆ ಬೆಳೆಯುತ್ತಿದೆ, ಇಂದಿನ
ಸ್ಪರ್ಧಾತ್ಮಕ ಯುಗಕ್ಕೆ ಎಲ್ಲರೂ ಸಜ್ಜಾಗಬೇಕು ಎಂದು ಕರೆ ನೀಡಿದರು.

ಮುಂದೆ ಹುಟ್ಟುವ ನಿಮ್ಮ ಮಕ್ಕಳಿಗೆ ನೀವೇ ಆದರ್ಶವಾಗಿರಿ, ಅರುಣಿಮಾ ಸಿನ್ಹಾ, ಸುಪ್ರಿಯಾ ರಾಯ್ ಅವರಂಥ ಮಹಿಳೆಯರು ಜೀವನದ ಪ್ರತಿಯೊಂದು ಹಂತದಲ್ಲೂ ಸ್ಫೂರ್ತಿಯಾಗಲಿ ಎಂದರು‌.

ಮಹಿಳೆ ಎಂದರೆ ಸಾಧನೆ, ಜೀವನದಲ್ಲಿ ಸಾಧನೆ ಬಹಳ ಮುಖ್ಯ. ಮಹಿಳೆ ಇಲ್ಲದೆ ಮನೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ರಾಜಕೀಯದ ಕೂಡ. ಮಹಿಳಾ ಮೀಸಲಾತಿಯನ್ನು ನಾವೇ ಮಾಡಿದ್ದು, ಆಗ ಬಹುಮತ ಕೊರತೆಯಿಂದ ಲೋಕಸಭೆಯಲ್ಲಿ ಪಾಸ್ ಆಗಲಿಲ್ಲ. ಈಗ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸಮಾರಂಭದಲ್ಲಿ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಮಾತನಾಡಿ, ವಿದ್ಯಾರ್ಥಿನಿಯರು ಛಲಗಾರ್ತಿಯಾಗಬೇಕು. ಜೀವನದಲ್ಲಿ ದುರ್ಬಲರಾದರೆ ನಾವು ಏನನ್ನು ಸಾಧಿಸಲು ಸಾಧ್ಯವಿಲ್ಲ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಯಶಸ್ಸುಗಳಿಸಲು ಸತತ ಪರಿಶ್ರಮ ಅಗತ್ಯ ಎಂದರು.


ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯವಾಗಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 100 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿಸಿಕೊಡಬೇಕು ಎಂದು ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಲ್ಲಿ ಮನವಿ ಮಾಡಿಕೊಂಡರು.


ಮಕ್ಕಳ ಸಾಹಿತಿ ಶಂ.ಗು.ಬಿರಾದಾರ ಅವರು ಬರೆದಿರುವ ನಾವು ಎಳೆಯರು, ನಾವು ಗೆಳೆಯರು ಗೀತೆಯನ್ನು ರಾಜ್ಯದ ಅಧಿಕೃತ ಮಕ್ಕಳ ಗೀತೆಯನ್ನಾಗಿ ಮತ್ತು ಮಹಿಳಾ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಗೀತಾ ಬಾಲಿ ಅವರು ಬರೆದಿರುವ ಮಹಿಳಾ ಗೀತೆಯನ್ನು ರಾಜ್ಯದ ಮಹಿಳಾ ಕಾಲೇಜುಗಳು ಮತ್ತು ರಾಜ್ಯ ಸರ್ಕಾರದ ಮಹಿಳಾ ಕಾರ್ಯಕ್ರಮಗಳಲ್ಲಿ ಧ್ಯೇಯಗೀತೆಯನ್ನಾಗಿ ಹಾಡುವಂತೆ ರಾಜ್ಯ ಸರ್ಕಾರ ಅದೇಶ ಹೊರಡಿಸಬೇಕು ಎಂದು ಬಬಲೇಶ್ವರ ಅವರು ಆಗ್ರಹಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ನಿಮ್ಮಲ್ಲಿರುವ ಉತ್ಸಾಹ, ಸೃಜನಶೀಲತೆ ಹಾಗೂ ಕೌಶಲ್ಯ ಅನಾವರಣಕ್ಕೆ ಇದು ಒಂದು ದೊಡ್ಡ ವೇದಿಕೆಯಾಗಿದೆ. ವಿಶ್ವವಿದ್ಯಾನಿಲಯದ ಮೂಲ ಉದ್ದೇಶ ಶಿಕ್ಷಣದ ಮೂಲಕ ಸಬಲೀಕರಣವಾಗಬೇಕು. ನಿಮ್ಮ ಸಬಲೀಕರಣದ ಮೂಲಕ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಜೀವನವನ್ನು ಕಟ್ಟಿಕೊಂಡು ಈ ಸಮಾಜಕ್ಕೆ ಆದರ್ಶ ಮಹಿಳೆಯಾಗಬೇಕು ಎಂದರು.


ಇಲ್ಲಿ ಸಾಕಷ್ಟು ಸವಾಲುಗಳು ಮತ್ತು ಅವಕಾಶಗಳು ಇದ್ದು ಅದರ ಮಧ್ಯ ಒಂದು ಗಟ್ಟಿ ಜೀವನವನ್ನು ಕಟ್ಟಿಕೊಳ್ಳಲು ವಿಶ್ವವಿದ್ಯಾನಿಲಯ ನಮಗೆ ನೀಡಿರುವ ಅವಕಾಶಗಳನ್ನು ಉಪಯೋಗ ಮಾಡಿಕೊಳ್ಳಬೇಕು. ಇದರ ಜೊತೆಗೆ ವೃತ್ತಿಪರ ಜೀವನವನ್ನು ಕಟ್ಟಿಕೊಳ್ಳಬೇಕು. ವೃತ್ತಿಪರ ಜೊತೆಗೆ ಎಲ್ಲ ಕೌಶಲ್ಯಗಳನ್ನು ಕಲಿಯಬೇಕು. ಈ ಮೂರು ದಿನಗಳ ಕಾಲ ಎಲ್ಲ ಸ್ಪರ್ಧೆಗಳಲ್ಲಿ ನಿಮ್ಮ ಕೌಶಲ್ಯ ಅಭಿವ್ಯಕ್ತವಾಗುತ್ತಿದ್ದು ಅದನ್ನು ಎಲ್ಲ ರೀತಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್ ಹಾಗೂ ತೊರವಿ ಗ್ರಾಮ ಪಂಚಾಯತ ಅಧ್ಯಕ್ಷೆ ಪದ್ಮಾಬಾಯಿ ರೇವಣಸಿದ್ದಪ್ಪ ನಡಗಡಿ ಅವರನ್ನು ವಿಶ್ವವಿದ್ಯಾನಿಲಯದ ಪರವಾಗಿ ಸನ್ಮಾನಿಸಲಾಯಿತು.


ಯುವಜನೋತ್ಸವದ ಆರಂಭಕ್ಕೂ ಮುನ್ನ ವಿವಿಯ ಮುಂಭಾಗದಿಂದ ವೇದಿಕೆಯ ವರೆಗೆ ಸಾಂಸ್ಕೃತಿಕ ಮೆರವಣಿಗೆ ಏರ್ಪಡಿಸಲಾಗಿತ್ತು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಬಿ.ಕೆ.ತುಳಸಿಮಾಲ,
ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ತೊರವಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮಾಬಾಯಿ ನಡಗಡ್ಡಿ, ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ, ಪ್ರೊ.ಶಾಂತಾದೇವಿ, ಸಿಂಡಿಕೇಟ್ ಮತ್ತು ಅಕಾಡೆಮಿ ಕೌನ್ಸಿಲ್ ಸದಸ್ಯರು, ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button