“ವಿಕಸಿತ್ ವೈಬ್ರಂಟ್ ವಿಲೇಜ್-2026: ಯುವ ಜನತೆಯೊಂದಿಗೆ ಸಂವಾದ ನಡೆಸಿದ ಪ್ರಧಾನಿ

ಪ್ರಗತಿವಾಹಿನಿ ಸುದ್ದಿ: “ವಿಕಸಿತ್ ವೈಬ್ರಂಟ್ ವಿಲೇಜ್-2026” ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಯುವ ಜನತೆಯೊಂದಿಗೆ ಸಂವಾದ ನಡೆಸಿದರು.
ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುವ ಆಯ್ದ 400ಕ್ಕೂ ಹೆಚ್ಚು ಯುವ ಜನರು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದರು. ದೇಶಾದ್ಯಂತ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಸಿ, ಇದರಲ್ಲಿ ಪಾಲ್ಗೊಂಡಿದ್ದ 3 ಲಕ್ಷಕ್ಕೂ ಅಧಿಕ ಯುವಜನರ ಪೈಕಿ ಅಂತಿಮವಾಗಿ 400 ಅರ್ಹ ವಿದ್ಯಾರ್ಥಿ-ಯುವಜನರನ್ನು ಆಯ್ಕೆ ಮಾಡಲಾಗಿತ್ತು.
ಜೂನ್ 4ರಿಂದ ಜೂನ್ 30ರವರೆಗೆ ʼವಿಕಸಿತ್ ವೈಬ್ರಂಟ್ ವಿಲೇಜ್ ಪ್ರೋಗ್ರಾಂ-2026ʼ ಆಯೋಜಿಸಿ ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ 74 ವೈಬ್ರಂಟ್ ಗಡಿ ಗ್ರಾಮಗಳನ್ನು ಸಂಪರ್ಕಿಸುವ ಅರ್ಹ ಯುವಕರನ್ನು ಆಯ್ಕೆ ಮಾಡಲಾಗಿತ್ತು. ಭಾರತದ ಗಡಿ ಪ್ರದೇಶಗಳ ಸಾಮಾಜಿಕ-ಆರ್ಥಿಕ, ಭೂದೃಶ್ಯ, ಸಾಂಸ್ಕೃತಿಕ ಪರಂಪರೆ ಮತ್ತು ಅಭಿವೃದ್ಧಿ ಆಕಾಂಕ್ಷೆಗಳಿಗೆ ನೇರವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಂದು ನಡೆದ ಪ್ರಧಾನಿ ಮೋದಿಯವರೊಂದಿಗೆ ಸಂವಾದದ ವೇಲೆ ವಿದ್ಯಾರ್ಥಿಗಳು ಜೂನ್ 4ರಿಂದ 30ರವರೆಗೆ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಕಾರ್ಯಕ್ರಮವು ಸಮುದಾಯದ ಭಾಗವಹಿಸುವಿಕೆ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಂತೆ ರಾಷ್ಟ್ರೀಯ ಏಕೀಕರಣ, ಗಡಿ ಗ್ರಾಮಗಳ ಕಾರ್ಯತಂತ್ರದ ಪ್ರಾಮುಖ್ಯತೆಗೆ ನಿದರ್ಶನವಾಗಿದೆ.


