ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನಾರಾಯಣ ನೇತ್ರಾಲಯವು ತನ್ನ ಡಾ.ರಾಜ್‌ಕುಮಾರ್ ನೇತ್ರ ಬ್ಯಾಂಕ್ ಮೂಲಕ 1994ರಿಂದ ನೇತ್ರದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತ ಬಂದಿದೆ. ಪ್ರಸ್ತುತ ನೇತ್ರದಾನ ಮಾಡಲು ಇಚ್ಛಿಸುವವರಿಗೆ ಎಕ್ಸ್ ಕ್ಲೂಸಿವ್ ನಂಬರ್ (8884018800) ಸೇವೆ ಆರಂಭಿಸಿದ್ದು, ನೇತ್ರದಾನ ಮಾಡಲು ಇಚ್ಛಿಸುವವರು ಈ ನಂಬರ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ ಕೆ ಭುಜಂಗ ಶೆಟ್ಟಿ ತಿಳಿಸಿದರು.
ನೇತ್ರದಾನದ ಹೆಸರು ನೋಂದಣಿಗಾಗಿ ಇರುವ ಎಕ್ಸ್ ಕ್ಲೂಸಿವ್ ಸಂಖ್ಯೆಯನ್ನು ಖ್ಯಾತ ಚಿತ್ರ ನಟರಾದ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಭುಜಂಗ ಶೆಟ್ಟಿ, ನೇತ್ರದಾನಕ್ಕೆ ಹೆಸರು ನೋಂದಾಯಿಸುವ ಪ್ರಕ್ರಿಯೆ ಎಂದರೆ ಮೃತಪಟ್ಟ ಬಳಿಕ ಕಣ್ಣುಗಳನ್ನು ಬೇರೆಯವರಿಗೆ ದಾನ ಮಾಡುವ ಬಗ್ಗೆ ಔಪಚಾರಿಕ, ಸ್ವಯಂಪ್ರೇರಿತ ಒಪ್ಪಂದವಾಗಿದೆ. ನೇತ್ರದಾನಕ್ಕೆ ಹೆಸರು ನೋಂದಾಯಿಸಲು ಇಚ್ಛಿಸುವವರು 8884018800 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ ನೇತ್ರದಾನದ ಒಪ್ಪಂದದ ಫಾರ್ಮ್ ಲಿಂಕ್ ಅನ್ನು ಕಳುಹಿಸಲಾಗುತ್ತದೆ. ಒಮ್ಮೆ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ, ಉದ್ದೇಶಿತ ದಾನಿಗಳು ತಕ್ಷಣವೇ ನೇತ್ರದಾನ ಪ್ರತಿಜ್ಞೆ ಪ್ರಮಾಣಪತ್ರ ಮತ್ತು ನೇತ್ರದಾನದ ಕುರಿತ ವಿವರವಾದ ಸೂಚನೆಗಳನ್ನು ಸ್ವೀಕರಿಸುತ್ತಾರೆ ಎಂದು ಅವರು ತಿಳಿಸಿದರು.
ಈ ಮಿಸ್ಡ್ ಕಾಲ್ ಸೌಲಭ್ಯವನ್ನು ಪ್ರಾರಂಭಿಸಲು ಮುಖ್ಯ ಕಾರಣವೆಂದರೆ ಯಾರೇ ಆಗಲಿ ಮತ್ತು ಯಾವುದೇ ಸ್ಥಳದಲ್ಲಿರಲಿ. ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬರೂ ಯಾವುದೇ ತೊಂದರೆಗಳಿಲ್ಲದೆ ತಮ್ಮ ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞೆ ಮಾಡಲು ಅವಕಾಶವಾಗುತ್ತದೆ. ಇದರಿಂದ ನೇತ್ರದಾನದ ಬಗ್ಗೆ ಬೃಹತ್ ಆಂದೋಲನವನ್ನು ನಡೆಸಲು ಅವಕಾಶವಾಗಿದೆ ಎಂದು ಅವರು ವಿವರಿಸಿದರು.
ಎರಡು ತಿಂಗಳ ಹಿಂದೆ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರು ತಮ್ಮ ಕಿರಿಯ ಸಹೋದರ, ಜನಪ್ರಿಯ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿದ್ದು, ಪುನೀತ್ ರಾಜ್‌ಕುಮಾರ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಹೊಸ ತಂತ್ರಜ್ಞಾನದಿಂದಾಗಿ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲು ನಾರಾಯಣ ನೇತ್ರಾಲಯವು ಯಶಸ್ವಿಯಾಗಿದೆ. ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಸಹೋದರರು ಪುನೀತ್ ಅವರ ಸಮಾಧಿಗೆ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲು ಆಗಮಿಸಿದ್ದ ಸಂದರ್ಭದಲ್ಲಿ ನೇತ್ರದಾನ ನೋಂದಣಿಯ ಎಕ್ಸ್ ಕ್ಲೂಸಿವ್ ನಂಬರ್‌ಅನ್ನು ಲೋಕಾರ್ಪಣೆಗೊಳಿಸಿದ್ದಾರೆ ಎಂದರು.
ನಾರಾಯಣ ನೇತ್ರಾಲಯವು ಕಳೆದ 25 ವರ್ಷಗಳಿಂದ ನೇತ್ರದಾನ ಪ್ರತಿಜ್ಞೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಪುನೀತ್ ರಾಜ್‌ಕುಮಾರ್ ಅವರ ನೇತ್ರದಾನದ ನಂತರ ನೇತ್ರದಾನದ ದೊಡ್ಡ ಅಲೆಯೇ ಉಂಟಾಗಿದೆ. ನಾರಾಯಣ ನೇತ್ರಾಲಯವು ಪುನಿತ್ ಅವರ ಕಣ್ಣನಿಂದ ನಾಲ್ಕು ಜನರಿಗೆ ದೃಷ್ಟಿಯನ್ನು ಸರಿಪಡಿಸಿದ್ದರಿಂದಾಗಿ ಪ್ರತಿಯೊಬ್ಬರಲ್ಲೂ ತಮ್ಮ ಕಣ್ಣುಗಳನ್ನು ದಾನಮಾಡುವ ಪ್ರತಿಜ್ಞೆ ಮಾಡಬೇಕೆನ್ನುವ ಅರಿವು ಉಂಟಾಗಿದೆ ಎಂದು ಅವರು ತಿಳಿಸಿದರು.
ಆಫ್‌ಲೈನ್ ಮೂಲಕ ನೇತ್ರದಾನದ ಪ್ರತಿಜ್ಞೆ ಮಾಡುವ ಪ್ರಕ್ರಿಯೆ ತೊಡಕಿನಿಂದ ಕೂಡಿದೆ. ಅನೇಕ ಜನರು ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದರೂ ನೇತ್ರದಾನದ ಒಪ್ಪಂದವನ್ನು ಎಲ್ಲಿ ಮತ್ತು ಹೇಗೆ ಮಾಡಬೇಕೆಂಬ ಅರಿವು ಅವರಿಗೆ ಇರುವುದಿಲ್ಲ. ನಾವು ಆರಂಭಿಸಿರುವ ಈ ಎಕ್ಸ್ ಕ್ಲೂಸಿವ್ ನಂಬರ್ ಹೆಚ್ಚಿನ ಜನರನ್ನು ನೇತ್ರದಾನ ಮಾಡಲು ಉತ್ತೇಜಿಸುತ್ತದೆ ಎಂದು ಅಭಿಪ್ರಾಯಪಟ್ಟರು.
7 ಲಕ್ಷ ಜನರು ಪ್ರತಿಜ್ಞೆ ಮಾಡುವ ನಿರೀಕ್ಷೆ
2021ರ ನವೆಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ12 ಸಾವಿರ ಜನ ನೇತ್ರದಾನ ಮಾಡಲು ಹೆಸರು ನೋಂದಾಯಿಸಿದ್ದು ದಾಖಲೆಯಾಗಿದೆ. ಮುಂದಿನ ದಿನಗಳಲ್ಲಿ ಕನಿಷ್ಠ 7 ಲಕ್ಷ ಜನರು ಈ ಮಿಸ್ಡ್ ಕಾಲ್ ಸೌಲಭ್ಯದಿಂದಾಗಿ ತಮ್ಮ ಕಣ್ಣುಗಳ ದಾನದ ಪ್ರತಿಜ್ಞೆ ಮಾಡುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಡಾ ಶೆಟ್ಟಿ ಹೇಳಿದರು.
2021ರ ನವೆಂಬರ‍್ನಲ್ಲಿ ದಾನಿಗಳಿಂದ 234 ಕಣ್ಣುಗಳನ್ನು ಸಂಗ್ರಹಿಸಲಾಗಿದೆ. ಡಿಸೆಂಬರ್ ತಿಂಗಳಲ್ಲಿ 27ನೇತಾರೀಖಿನವರೆಗೆ 209 ಕಣ್ಣುಗಳನ್ನು ಸಂಗ್ರಹಿಸಲಾಗಿದೆ. ಈ ಹಿಂದೆ, ತಿಂಗಳಲ್ಲಿ ನೇತ್ರ ಬ್ಯಾಂಕ್‌ನಲ್ಲಿ ತಿಂಗಳಿಗೆ 100 ರಿಂದ 200 ಜನ ಮಾತ್ರ ನೇತ್ರದಾನಕ್ಕೆ ಒಪ್ಪಂದ ಮಾಡಿಕೊಳ್ಳುತ್ತಿದ್ದರು ಪ್ರಸಕ್ತ ತಿಂಗಳಿನಲ್ಲಿ ಇದುವರೆಗೆ, 2 ಸಾವಿರಕ್ಕೂ ಹೆಚ್ಚು ಜನರು ಈಗಾಗಲೇ ತಮ್ಮ ಕಣ್ಣುಗಳನ್ನು ದಾನ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.
ನೇತ್ರದಾನದ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ. 9845010204 ನಂಬರ್‌ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಂಪೂರ್ಣ ಸಹಕಾರ – ರಾಘವೇಂದ್ರ ರಾಜಕುಮಾರ್
ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ನನ್ನ ಸಹೋದರ ಪುನಿತ್ ಯಾವ ರೀತಿಯ ಸಮಾಜ ಸೇವೆ ಕಾರ್ಯವನ್ನು ಮಾಡಿದ್ದಾರೆ ಎಂಬುದು ಅವರ ನಿಧನದ ನಂತರವೇ ನಮಗೆ ಅರಿವಾಯಿತು. ಅವರ ಈ ರೀತಿಯ ಕಾರ್ಯದಿಂದಾಗಿ ಪುನೀತ್ ರಾಜ್‌ಕುಮಾರ್ ಅವರನ್ನು ಅವರ ನಟನೆಗಿಂತ ಹೆಚ್ಚಾಗಿ ಸಮಾಜದ ಒಬ್ಬ ಆದರ್ಶ ವ್ಯಕ್ತಿಯನ್ನಾಗಿ ನೋಡುವಂತಾಯಿತು ಎಂದು ಹೇಳಿದರು.
ಡಾ.ಭುಜಂಗ ಶೆಟ್ಟಿಯವರು ಕೆಲವು ಅಮೂಲ್ಯ ಸಂದೇಶಗಳನ್ನು ರಚಿಸಿ ಕೊಟ್ಟರೆ ತಾವು ತಮ್ಮ ಮನೆ ಮತ್ತು ಕಚೇರಿಗಳನ್ನು ಅದನ್ನು ಪ್ರದರ್ಶಿಸುವುದಾಗಿ ತಿಳಿಸಿದ ರಾಘವೇಂದ್ರ ರಾಜಕುಮಾರ, ಇದರಿಂದ ಸಾರ್ವಜನಿಕರಿಗೆ ಪ್ರೇರಣೆಯಾಗಲಿದೆ ಎಂದರು.
ನನ್ನ ತಂದೆ ಯಾವಾಗಲೂ ‘ವೈದ್ಯೋ ನಾರಾಯಣೋ ಹರಿಹಿ’ ಎಂದು ಹೇಳುತ್ತಿದ್ದರು. ಅಂದರೆ ವೈದ್ಯರನ್ನು ನಾರಾಯಣನ ಸ್ವರೂಪವಾಗಿ ಕಾಣಬೇಕು ಎಂದು ಅವರು ಹೇಳುತ್ತಿದ್ದರು. ನಾನು ಕೂಡ ಇದನ್ನು ನಂಬುತ್ತೇನೆ ಮತ್ತು ಡಾ. ಭುಜಂಗ ಶೆಟ್ಟಿ ಮತ್ತು ನಾರಾಯಣ ನೇತ್ರಾಲಯ ಇದನ್ನು ಒಂದು ಜನಾಂದೋಲನವನ್ನಾಗಿ ಮಾಡಲು ಮತ್ತು ಇಂತಹ ಸಂದೇಶವನ್ನು ಹರಡಲು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯವಾಗಿದ್ದು, ನಾನು ಕೂಡ ಎಲ್ಲ ರೀತಿಯ ನೆರವು ನೀಡುತ್ತೇನೆ ಎಂದು ಹೇಳಿದರು.
*ಡಾ. ರಾಜ್‌ಕುಮಾರ್ ಐ ಬ್ಯಾಂಕ್*
ಡಾ. ರಾಜ್‌ಕುಮಾರ್ ಐ ಬ್ಯಾಂಕ್ 1994ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರ ಹೆಸರಿನಲ್ಲಿ ಸ್ಥಾಪನೆಗೊಂಡಿದೆ. ಈ ನೇತ್ರ ಬ್ಯಾಂಕ್‌ಗೆ ಡಾ. ರಾಜ್‌ಕುಮಾರ್ ಅವರು ತಮ್ಮ ಹೆಸರನ್ನಷ್ಟೇ ನೀಡಿಲ್ಲ, ಬದಲಿಗೆ ಐ ಬ್ಯಾಂಕ್‌ನ ಉದ್ಘಾಟನೆಯ ಸಂದರ್ಭದಲ್ಲಿಯೇ ನೇತ್ರದಾನವನ್ನು ಸಹ ಮಾಡಿದ್ದಾರೆ. ಡಾ. ರಾಜ್‌ಕುಮಾರ್ ಅವರು 2006ರಲ್ಲಿ ನಿಧನರಾದ ಬಳಿಕ ಅವರ ಕಣ್ಣುಗಳನ್ನು ಕುಟುಂಬದವರು ಒಪ್ಪಂದದ ಪ್ರಕಾರ ಐ ಬ್ಯಾಂಕ್‌ಗೆ ದಾನ ಮಾಡಿದ್ದರು. ಇದರಿಂದ ಹಲವಾರು ಜನರಿಗೆ ನೇತ್ರದಾನ ಮಾಡಲು ಉತ್ತೇಜನ ದೊರೆತಿದೆ. ಬಳಿಕ ಡಾ. ರಾಜ್‌ಕುಮಾರ್ ಅವರ ಪತ್ನಿ ಪಾರ್ವತಮ್ಮ ಅವರು 2017ರಲ್ಲಿ ನಿಧನರಾದಾಗ ಅವರ ಕಣ್ಣುಗಳನ್ನು ಸಹ ದಾನ ಮಾಡಲಾಯಿತು.