ಬೆಳಗಾವಿಯಲ್ಲಿ ನೀರಿನ ಸಮಸ್ಯೆ ಗಂಭೀರ: ಶಾಲೆ ಮುಚ್ಚಿ, ಆನ್ ಲೈನ್ ಪಾಠಕ್ಕೆ ಚಿಂತನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೂನ್ ತಿಂಗಳು ಅರ್ಧ ಕಳೆದರೂ ಮಳೆ ಆರಂಭವಾಗದಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಬಹುತೇಕ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ಹಿಡಕಲ್ ಜಲಾಶಯ ಮತ್ತು ರಕ್ಕಸಕೊಪ್ಪ ಜಲಾಶಯಗಳಲ್ಲಿ ಈಗಾಗಲೆ ನೀರಿನ ಸಂಗ್ರಹ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನೀರಿನ ಸಮಸ್ಯೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆಲವು ಶಾಲೆ, ಕಾಲೇಜುಗಳನ್ನು ಬಂದ್ ಮಾಡಿ ಆನ್ ಲೈನ್ ಪಾಠಕ್ಕೆ ಯೋಚಿಸಲಾಗುತ್ತಿದೆ.
ನೀರಿನ ಸಮಸ್ಯೆ ತೀವ್ರವಾಗಿದ್ದು, ಇನ್ನೂ ಒಂದು ವಾರ ಮಳೆಯಾಗದಿದ್ದಲ್ಲಿ ಹಾಸ್ಟೆಲ್ ಗಳನ್ನು ಮುಚ್ಚಿ ವಿದ್ಯಾರ್ಥಿಗಳನ್ನು ಮನೆಗೆ ಕಳಿಸುವ ಅನಿವಾರ್ಯತೆ ಬರಲಿದೆ ಎಂದು ಬಿಮ್ಸ್ ವೈದ್ಯಕೀಯ ನಿರ್ದೇಶಕ ಅಶೋಕ ಕುಮಾರ ಶೆಟ್ಟಿ ತಿಳಿಸಿದ್ದಾರೆ. ಸಧ್ಯ ಅತ್ಯಂತ ಕಡಿಮೆ ನೀರು ಸರಬರಾಜಾಗುತ್ತಿದೆ. ನೀರು ಪೂರೈಸುವ ಎಲ್ ಆ್ಯಂಡ್ ಟಿ ಯವರಿಗೆ ವಿನಂತಿಸಿ ಟ್ಯಾಂಕರ್ ಮೂಲಕ ನೀರು ಪಡೆಯಲಾಗುತ್ತಿದೆ. ಆಸ್ಪತ್ರೆಗೆ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ನೀರಿನ ಸಮಸ್ಯೆ ತೀವ್ರವಾದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿ, ಆನ್ ಲೈನ್ ಮೂಲಕ ಪಾಠ ಮಾಡುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ನಗರದ ಸೆಂಟ್ ಪಾಲ್ಸ್ ಶಾಲೆಯಲ್ಲೂ ನೀರಿನ ಸಮಸ್ಯೆ ತೀವ್ರವಾಗಿದ್ದರಿಂದ ಶಾಲೆಯನ್ನು ಬಂದ್ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಡಿಡಿಪಿಐಗೆ ಪತ್ರ ಬರೆಯಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಆನ್ ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡುವ ಅನಿವಾರ್ಯತೆ ಬರಬಹುದು ಎಂದು ಶಾಲೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ನಗರದ ಬಹುತೇಕ ಎಲ್ಲ ಕಡೆಯ ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ. ಅನೇಕ ಖಾಸಗಿ ಸಂಸ್ಥೆಗಳ ನೆರವಿನಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಇದರಿಂದ ನೀರಿನ ದಾಹ ನೀಗಿಸಲು ಸಾಧ್ಯವಾಗುತ್ತಿಲ್ಲ. 2 ದಿನಗಳ ಹಿಂದೆ ಮುಂಗಾರು ಆರಂಭವಾದ ಲಕ್ಷಣ ಕಂಡು ಬಂದಿತ್ತಾದರೂ ನಂತರದಲ್ಲಿ ಮಳೆ ಮುಂದುವರಿದಿಲ್ಲ. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದಲ್ಲಿ ಎಲ್ಲೆಡೆ ಪರಿಸ್ಥಿತಿ ಗಂಭೀರವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ