ಪ್ರಗತಿವಾಹಿನಿ ಸುದ್ದಿ, ಗೋಕಾಕ: ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆಯೇ ಹೊರತು ಇದರಲ್ಲಿ ಯಾವುದೇ ವ್ಯೆಯಕ್ತಿಕ ಸ್ವಾರ್ಥವಿಲ್ಲ. ಒಂದು ವೇಳೆ ಮೈತ್ರಿ ಸರ್ಕಾರದಲ್ಲಿ ನಾನು ಮುಂದುವರೆದಿದ್ದರೆ ನನ್ನನ್ನು ರಾಜಕೀಯವಾಗಿ ನಿರ್ನಾಮ ಮಾಡುವ ಹುನ್ನಾರ ನಡೆದಿತ್ತು ಎಂದು ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಹೇಳಿದರು.
ಶುಕ್ರವಾರ ಗೋಕಾಕ ಕ್ಷೇತ್ರದ ಪಾರನಟ್ಟಿ, ಮಕ್ಕಳಗೇರಿ, ಪುಡಕಲಕಟ್ಟಿ, ಶಿಲ್ತಿಭಾಂವಿ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಉದ್ಭವಿಸುತ್ತಿರುವ ಬಿಕ್ಕಟ್ಟನ್ನು ಶಮನ ಮಾಡುವಂತೆ ಕಾಂಗ್ರೇಸ್ ಪಕ್ಷದ ಹಲವು ನಾಯಕರಲ್ಲಿ ಕೋರಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಹೀಗಾಗಿ ಸ್ವಾಭಿಮಾನಕ್ಕೆ ಚ್ಯುತಿ ಬಂದಿದ್ದರಿಂದ ಅನಿವಾರ್ಯವಾಗಿ ಬಿಜೆಪಿಗೆ ಸೇರ್ಪಡೆಯಾಗಬೇಕಾಯಿತು ಎಂದು ಹೇಳಿದರು.
ಮೈತ್ರಿ ಸರ್ಕಾರದಿಂದ ನಮ್ಮ ಕ್ಷೇತ್ರಕ್ಕೇನೂ ಲಾಭವಾಗಲಿಲ್ಲ. ಅಭಿವೃದ್ಧಿ ಕಾರ್ಯಗಳಂತೂ ಮರೀಚಿಕೆಯಾದವು. ನಮ್ಮ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗದಿದ್ದರಿಂದ ನಾವು ಸರ್ಕಾರದಿಂದ ಹೊರಬರಬೇಕಾಯಿತು. ಆಂತರಿಕ ಕಚ್ಚಾಟದಲ್ಲಿಯೇ ಕಾಲಹರಣ ಮಾಡಿದ ಮೈತ್ರಿ ಸರ್ಕಾರ ಇಡೀ ನಾಡಿನ ಜನತೆಗೆ ಮಾಡಿದ ದ್ರೋಹವಾಗಿದೆ ಎಂದು ಅವರು ದೂರಿದರು.
ದೇಶದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ರೈತನಾಯಕ ಯಡಿಯೂರಪ್ಪ ಅವರ ಸಮರ್ಥ ನಾಯಕತ್ವ ನಮ್ಮ ಮೇಲೆ ಗಾಢವಾದ ಪ್ರಭಾವ ಬೀರಿತು. ರಾಜ್ಯದ ಒಳಿತಿಗಾಗಿ ಹಾಗೂ ಕ್ಷೇತ್ರದ ಅಭಿವೃದ್ದಿಗಾಗಿ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡೆವು. ಒಮ್ಮೆಲೇನೂ ಬಿಜೆಪಿಗೆ ಸೇರಲಿಲ್ಲ, ಸಾಕಷ್ಟು ಬಾರಿ ವಿಚಾರ ಮಾಡಿ ಬೆಂಬಲಿಗರು, ಅಭಿಮಾನಿಗಳೊಂದಿಗೆ ಚರ್ಚಿಸಿ ಒಮ್ಮತದ ನಿರ್ಣಯ ಕೈಗೊಂಡಿರುವುದಾಗಿ ಅವರು ಹೇಳಿದರು.
ಕಳೆದ ೨೦ ವರ್ಷಗಳಿಂದ ಈ ಭಾಗದ ಶಾಸಕನಾಗಿ, ಸಚಿವನಾಗಿ ಸಾವಿರಾರು ಕೋಟಿ ರೂಗಳ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಪರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ನನ್ನ ಅವಧಿಯಲ್ಲಿ ನಡೆದಿರುವ ಪ್ರಗತಿಪರ ಕಾರ್ಯಗಳು ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಗಳನ್ನು ಗಮನಿಸಿ ಡಿಸೆಂಬರ್-೫ ರಂದು ನಡೆಯುವ ಉಪಚುನಾವಣೆಯಲ್ಲಿ ೬ನೇ ಬಾರಿಗೆ ಮತ್ತೆ ವಿಧಾನಸಭೆಗೆ ಆಯ್ಕೆ ಮಾಡಿ ಜನಸೇವೆಗೆ ಅವಕಾಶ ನೀಡುವಂತೆ ಮತದಾರರಲ್ಲಿ ಕೋರಿದರು.
ಬಿಜೆಪಿ ಎಲ್ಲ ಸಮುದಾಯಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಡೆಸುತ್ತಿದೆ. ಕ್ಷೇತ್ರದ ಎಲ್ಲ ಸಮುದಾಯಗಳು ಬಿಜೆಪಿಯತ್ತ ಆಕರ್ಷಿತವಾಗಿವೆ, ಎಲ್ಲ ಕಡೆಗಳಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಅರಭಾವಿ ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡುತ್ತಿರುವ ಜನಬೆಂಬಲದ ಮಾದರಿಯಲ್ಲಿ ಗೋಕಾಕ ಕ್ಷೇತ್ರದಲ್ಲಿಯೂ ಮುಸ್ಲಿಂ ಸಮುದಾಯ ನಮಗೆ ಹೆಚ್ಚಿನ ಮತ ನೀಡಿದರೆ ನಮ್ಮ ಗೆಲುವಿನ ಅಂತರ ಇನ್ನೂ ಹೆಚ್ಚಾಗುತ್ತದೆ. ಅಲ್ಪ-ಸಂಖ್ಯಾತರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಮಾನಂದ ಪೂಜಾರಿ ಮಾತನಾಡಿ, ರಮೇಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿದರೆ ಉಪಮುಖ್ಯಮಂತ್ರಿಯಾಗಿ ಜನಸೇವೆ ಮಾಡುವ ಅವಕಾಶ ನಮ್ಮ ಕ್ಷೇತ್ರಕ್ಕೆ ಲಭಿಸುತ್ತದೆ. ಅದಕ್ಕಾಗಿ ಸರ್ವಾಂಗೀಣ ಅಭಿವೃದ್ದಿಗಾಗಿ ಬಿಜೆಪಿಯನ್ನು ಆಶೀರ್ವದಿಸುವಂತೆ ಕೋರಿದರು.
ಗೋಕಾಕ ಗ್ರಾಮೀಣ ಅಧ್ಯಕ್ಷ ವೀರುಪಾಕ್ಷ ಯಲಿಗಾರ, ಮುಖಂಡ ಮಹಾಂತೇಶ ತಾವಂಶಿ, ಲಕ್ಕಪ್ಪ ಮಾಳಗಿ, ವಿಠ್ಠಲ ಗುಂಡಿ, ಲಕ್ಕಪ್ಪ ದುರದುಂಡಿ, ಸಿದ್ರಾಯಿ ದಂಡಿನ, ಸತ್ತೆಪ್ಪ ನಾಯಿಕ, ಇಕ್ಬಾಲ ಶಿವಾಪೂರ, ಮಲ್ಲಿಕಸಾಬ ಸನದಿ, ಸೈಯ್ಯದ ಹೂಲಿಕಟ್ಟಿ, ಭೀಮಶೆಪ್ಪ ದುರದುಂಡಿ, ಸಿದ್ದಪ್ಪ ಗೋದಿ, ಮಲ್ಲಪ್ಪ ತಲೆಪ್ಪಗೋಳ, ಮುತ್ತೇಪ್ಪ ಖಿಲಾರಿ, ಉದ್ದಪ್ಪ ಖಿಲಾರಿ, ಬಾಳವ್ವ ಕುರಿ, ಶಿವಾನಂದ ಪೂಜೇರಿ, ಬಸವರಾಜ ಉಜ್ಜನಕೊಪ್ಪ, ಅಪ್ಪಯ್ಯಪ್ಪ ತೊಕಲನ್ನವರ, ಹಾಲಪ್ಪ ಅಕ್ಕಿ, ಸಿದ್ದಲಿಂಗ ಹೊಸಮನಿ, ಉಮೇಶ ಉಜ್ಜನಕೊಪ್ಪ, ರಾಮನಗೌಡ ಪಾಟೀಲ, ಈಶ್ವರ ಭಾಗೋಜಿ, ಬಸಪ್ಪ ಖಣಗಾರ, ಶಿವನಪ್ಪ ಬೆಣಕಟ್ಟಿ, ವಾಸುದೇವ ಹಿರಿಯಾಲ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಮೇಶ ಜಾರಕಿಹೊಳಿ ಅವರು ನಂತರ ಜಮನಾಳ, ಹಿರೇಹಟ್ಟಿ, ಚಿಕ್ಕನಂದಿ, ಪಂಚನಾಯಕನಹಟ್ಟಿ, ದುಂಡಾನಟ್ಟಿ ಗ್ರಾಮಗಳಿಗೆ ತೆರಳಿ ಮತಯಾಚಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ