Film & EntertainmentKannada NewsKarnataka NewsLatest

*’ನಿಮ್ಮನ್ನು ತಾಯಿ ಸ್ಥಾನದಲ್ಲಿ ಕಾಣುತ್ತೇವೆ’*: *ದರ್ಶನ್‌ ಬಿಡುಗಡೆಗಾಗಿ ರಾಷ್ಟ್ರಪತಿಗೆ ಪತ್ರ ಬರೆದ ಅಭಿಮಾನಿಗಳು*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ತೂಗುದೀಪ್‌ ಅವರ ಬೆಂಬಲಕ್ಕೆ ಅಭಿಮಾನಿಗಳು ನಿಂತಿದ್ದಾರೆ. ದರ್ಶನ್‌ ಅವರಿಗೆ ಆದಷ್ಟು ಬೇಗ ನ್ಯಾಯ ದೊರೆಯಬೇಕು ಹಾಗೂ ಅವರ ಆರೋಗ್ಯದ ಹಿತದೃಷ್ಟಿಯಿಂದ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕು ಎಂದು ಕೋರಿ ಅಭಿಮಾನಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕನ್ನಡದಲ್ಲೇ ಪತ್ರ ಬರೆದಿದ್ದಾರೆ. ಪತ್ರದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ತಾಯಿ ಸ್ಥಾನದಲ್ಲಿ ಕಾಣುವ ಅಭಿಮಾನಿಗಳು, ಬಡವರು, ಆದಿವಾಸಿಗಳು ಹಾಗೂ ನೊಂದವರ ಪರವಾಗಿ ನಿಲ್ಲುವ ಕರುಣಾಮಯಿ ತಾಯಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಂಕಷ್ಟದಲ್ಲಿರುವ ಕರ್ನಾಟಕದ ನಟ ದರ್ಶನ್‌ ಅವರ ಆರೋಗ್ಯ, ಕುಟುಂಬ ಹಾಗೂ ಅವರನ್ನು ನಂಬಿರುವ ಅಭಿಮಾನಿಗಳ ಭಾವನೆಗಳನ್ನು ಪರಿಗಣಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

ಭಾರತದ ಕಾನೂನು ವ್ಯವಸ್ಥೆ ಹಾಗೂ ನ್ಯಾಯಾಲಯಗಳ ಮೇಲೆ ತಮಗೆ ಸಂಪೂರ್ಣ ನಂಬಿಕೆ ಮತ್ತು ಗೌರವವಿದೆ ಎಂದು ಅಭಿಮಾನಿಗಳು ಪತ್ರದಲ್ಲಿ ತಿಳಿಸಿದ್ದಾರೆ. ಕಾನೂನಿನ ಪ್ರಕಾರವೇ ನ್ಯಾಯ ದೊರೆಯಬೇಕು ಎಂಬುದನ್ನು ಒಪ್ಪಿಕೊಂಡಿರುವ ಅವರು, ದರ್ಶನ್‌ ಅವರ ಪ್ರಕರಣವನ್ನು ಮಾನವೀಯ ದೃಷ್ಟಿಕೋನದಿಂದ ಪರಿಗಣಿಸಿ ಸಾಧ್ಯವಾದಷ್ಟು ಬೇಗ ನ್ಯಾಯ ದೊರೆಯುವ ನಿಟ್ಟಿನಲ್ಲಿ ತಮ್ಮ ಕಡೆಯಿಂದ ಸಾಧ್ಯವಿರುವ ನೆರವು ನೀಡುವಂತೆ ಕೋರಿದ್ದಾರೆ.

ರಾಷ್ಟ್ರಪತಿ ಭವನ, ನವದೆಹಲಿಗೆ ಉದ್ದೇಶಿಸಿ ಬರೆದಿರುವ ಪತ್ರದಲ್ಲಿ, “ನಾವು ಕಾನೂನು ಮತ್ತು ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದೇವೆ. ಕಾನೂನನ್ನು ಗೌರವಿಸುತ್ತೇವೆ” ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ದರ್ಶನ್‌ ಅವರನ್ನು ತಮ್ಮ ಕುಟುಂಬದ ಸದಸ್ಯರಂತೆ ಕಾಣುವ ಅಭಿಮಾನಿಗಳ ಭಾವನೆಗಳನ್ನೂ ಪರಿಗಣಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. “ನಿಮ್ಮ ಮಮತೆಯ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಮೇಡಂ” ಎಂದು ಪತ್ರದ ಕೊನೆಯಲ್ಲಿ ಉಲ್ಲೇಖಿಸಿರುವ ಅಭಿಮಾನಿಗಳು, “ಜೈ ಹಿಂದ್‌, ಜೈ ಕರ್ನಾಟಕ, ಜೈ D Boss” ಎಂದು ಪತ್ರವನ್ನು ಮುಕ್ತಾಯಗೊಳಿಸಿದ್ದಾರೆ.

ದರ್ಶನ್‌ ಅವರು ಜೈಲಿನಲ್ಲಿರುವ ಅವಧಿಯಲ್ಲಿ ಬೆನ್ನುಮೂಳೆ ನೋವಿನಿಂದ ಬಳಲುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದು, ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯಬೇಕು ಎಂಬ ಕಳಕಳಿಯನ್ನೂ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.

ದರ್ಶನ್‌ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಮುಂದುವರಿದಿರುವ ನಡುವೆಯೇ ಅಭಿಮಾನಿಗಳು ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದು ಗಮನ ಸೆಳೆದಿದೆ. ಪತ್ರ ಹಾಗೂ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ದರ್ಶನ್‌ ಪರ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಕರಣದ ಕಾನೂನು ಪ್ರಕ್ರಿಯೆ ನ್ಯಾಯಾಲಯದ ಮುಂದುವರಿದಿರುವ ಸಂದರ್ಭದಲ್ಲಿ ಅಭಿಮಾನಿಗಳ ಈ ಮನವಿ ರಾಷ್ಟ್ರಪತಿ ಭವನದ ಗಮನ ಸೆಳೆಯುತ್ತದೆಯೇ ಎಂಬುದು ಮುಂದಿನ ಬೆಳವಣಿಗೆಯಲ್ಲಿ ಸ್ಪಷ್ಟವಾಗಬೇಕಿದೆ.

Related Articles

Back to top button