*ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಆಪ್ತನ ಹತ್ಯೆ ಕೇಸ್: ಮೂವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಆಪ್ತ ಚಂದ್ರನಾಥ್ ಥರ್ ಅವರ ಭೀಕರ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಹಂತಕರು ಚಂದ್ರನಾಥ್ ರಥ್ ಅವರು ಕಾರಿನಲ್ಲಿ ಎಲ್ಲಿ ಕುಳಿತುಕೊಳ್ಳುತ್ತಾರೆ ಎಂಬ ನಿಖರ ಮಾಹಿತಿ ಪಡೆದೇ ಈ ಕೃತ್ಯ ಎಸಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊಲೆ ಮಾಡಿದ ನಂತರ ಪರಾರಿಯಾಗಿದ್ದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಒಂದು ಸಣ್ಣ ಯುಪಿಐ ಪಾವತಿ ಪೊಲೀಸರಿಗೆ ದೊಡ್ಡ ಸುಳಿವು ನೀಡಿದೆ. ಹಂತಕರು ಕೊಲೆ ಮಾಡಿ ಪರಾರಿಯಾಗುವಾಗ ಕೋಲ್ಕತ್ತಾ ಸಮೀಪದ ಬಾಲಿ ಎಂಬಲ್ಲಿನ ಟೋಲ್ ಗೇಟ್‌ನಲ್ಲಿ ಯುಪಿಐ ಮೂಲಕ ಹಣ ಪಾವತಿಸಿದ್ದರು. ಈ ಡಿಜಿಟಲ್ ಪಾವತಿಯನ್ನು ಬೆನ್ನಟ್ಟಿದ ಪೊಲೀಸರು, ಆರೋಪಿಗಳ ಮೊಬೈಲ್ ಲೊಕೇಶನ್ ಹಾಗೂ ಬ್ಯಾಂಕ್ ವಿವರಗಳ ಆಧಾರದ ಮೇಲೆ ಅವರ ಬೆನ್ನತ್ತಿದ್ದರು. ಕೊನೆಗೆ ಉತ್ತರ ಪ್ರದೇಶ ಮತ್ತು ಬಿಹಾರದ ವಿವಿಧೆಡೆ ಅಡಗಿದ್ದ ಮೂವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕೊಲೆಯ ಹಿಂದೆ ಯಾರ ಕೈವಾಡವಿದೆ ಮತ್ತು ಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ಈಗ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪಶ್ಚಿಮ ಬಂಗಾಳಕ್ಕೆ ಕರೆತರಲಾಗುತ್ತಿದೆ.




