ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಜ್ಯ ರಾಜಕೀಯ ಮತ್ತೆ ಗೊಂದಲದ ಗೂಡಾಗಿದೆ. ಸಮ್ಮಿಶ್ರ ಸರಕಾರ ಹೋದ ನಂತರ ಬಿಜೆಪಿ ಸರಕಾರ ರಾಜ್ಯದ ರಾಜಕೀಯಕ್ಕೊಂದು ಸ್ಥಿರತೆ ತಂದುಕೊಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಅದು ಸುಳ್ಳಾಗಿದೆ.
ಈಗ ಮೂರೂ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಸಂಘರ್ಷ ನಡೆದಿದೆ. ಆಡಳಿತ ಬಿಜೆಪಿಯಲ್ಲಂತೂ ಏನು ನಡೆಯುತ್ತಿದೆ ಎನ್ನುವುದು ಸ್ವತಃ ಮುಖ್ಯಮಂತ್ರಿ, ಸಚಿವರು, ಶಾಸಕರಿಗೂ ಅರ್ಥವಾಗುತ್ತಿಲ್ಲ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಮತ್ತು ಸಚಿವರು, ಶಾಸಕರ ಮಧ್ಯೆ ಸಮನ್ವಯವಿಲ್ಲದೆ ದಿನದಿಂದ ದಿನಕ್ಕೆ ಗೊಂದಲ ಹೆಚ್ಚಾಗುತ್ತಿದೆ.
ತಪ್ಪು ಮಾಡಿದೆವಾ?
ಈ ಮಧ್ಯೆ ಅನರ್ಹ ಶಾಸಕರ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿರುವುದರಿಂದ ಅವರೂ ಅತಂತ್ರರಾಗಿದ್ದಾರೆ. ಸಮ್ಮಿಶ್ರ ಸರಕಾರ ಕೆಡವಿದ ನಂತರ ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗಿ ಅಧಿಕಾರ ಚಲಾಯಿಸಬಹುದು ಎಂದುಕೊಂಡಿದ್ದ ಶಾಸಕರಿಗೆ ಅನರ್ಹತೆಯ ಶಿಕ್ಷೆ ಶಾಕ್ ನೀಡಿತು. ಈಗ ಈ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿ ಬೇಗ ಇತ್ಯರ್ಥವಾಗದೆ ಅವರಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ. ತಪ್ಪು ಮಾಡಿದೆವಾ ಎಂದು ಅಂದುಕೊಳ್ಳುವಂತಾಗಿದೆ.
ಈ ಮಧ್ಯೆ, ಸರಕಾರ ರಚಿಸಿದ ನಂತ ಭಾರತೀಯ ಜನತಾ ಪಾರ್ಟಿ ಕೂಡ ಅನರ್ಹ ಶಾಸಕರನ್ನು ನಿರ್ಲಕ್ಷಿಸುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಜೊತೆಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡುತ್ತಿರುವುದು ಅವರನ್ನು ಕಂಗೆಡಿಸಿದೆ. ಮುಂದೆ ಭವಿಷ್ಯವೇನು ಎನ್ನುವ ಆತಂಕ ಕಾಡುತ್ತಿದೆ. ಬಿಜೆಪಿ ಉಪಚುನಾವಣೆಯಲ್ಲಿ ತಮಗೆಲ್ಲ ಟಿಕೆಟ್ ನೀಡುತ್ತದೆಯಾ? ಕೊಟ್ಟರೂ ಗೆಲ್ಲಲು ಸಹಾಯ ಮಾಡುತ್ತದೆಯಾ ಎನ್ನುವ ಪ್ರಶ್ನೆ ಅವರನ್ನು ಕಾಡುತ್ತಿದೆ.
ಅವರ ದಾರಿ ಅವರಿಗೆ
ಈ ಮಧ್ಯೆ ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅನರ್ಹ ಶಾಸಕ ಮಹೇಶ ಕುಮಟಳ್ಳಿ ಕುರಿತು ಆಡಿದ ಮಾತುಗಳು ಅವರಿಗೆಲ್ಲ ಮತ್ತಷ್ಟೆ ಶಾಕ್ ನೀಡಿತ್ತು. ಆ ಶಾಕ್ ನಿಂದ ಹೊರಬರುವ ಮುನ್ನವೇ ಶಾಸಕ ಉಮೇಶ ಕತ್ತಿ ಮತ್ತೊಂದು ಗುದ್ದು ನೀಡಿದ್ದಾರೆ.
ಭಾನುವಾರ ಹುಕ್ಕೇರಿಯಲ್ಲಿ ಮಾತನಾಡಿದ ಉಮೇಶ ಕತ್ತಿ, ಅನರ್ಹ ಶಾಸಕರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದಿದ್ದಾರೆ. ಮುಂದಿನ ಉಪಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿಗೆ, ಕಾಗವಾಡ ಕ್ಷೇತ್ರಲ್ಲಿ ರಾಜು ಕಾಗೆಗೆ ಹಾಗೂ ಗೋಕಾಕ ಕ್ಷೇತ್ರದಲ್ಲಿ ಅಶೋಕ ಪೂಜಾರಿಗೆ ಟಿಕೆಟ್ ನೀಡಲಾಗುವುದು ಎಂದು ಸ್ಪಷ್ಪಡಿಸಿದ್ದಾರೆ. ಮೂರೂ ಕಡೆ ಬಿಜೆಪಿ ಅಭ್ಯರ್ಥಿಗಳೇ ಕಣಕ್ಕಿಳಿಯಲಿದ್ದಾರೆ ಎಂದಿದ್ದಾರೆ. ಸಿಗದಿದ್ದರೆ ನೋಡೋಣ ಎಂದು ಸವಾಲಿನ ದಾಟಿಯಲ್ಲಿ ಹೇಳಿದ್ದಾರೆ.
ಸಚಿವಸ್ಥಾನ ಸಿಗದೆ ತೀವ್ರ ಅಸಮಾಧಾನ ಹೊಂದಿರುವ ಉಮೇಶ ಕತ್ತಿಯವರ ಮಾತಿನ ಹಿಂದಿನ ಮರ್ಮವೇನು ಎನ್ನುವುದು ಅರ್ಥವಾಗದೆ ಅನರ್ಹ ಶಾಸಕರು ಕಂಗಾಲಾಗಿದ್ದಾರೆ. ಸಚಿವಸ್ಥಾನ ನೀಡದ ಬಿಜೆಪಿ ಮೇಲಿನ ಸಿಟ್ಟಿನಿಂದ ಈ ರೀತಿ ಮಾತನಾಡಿದ್ದಾರೋ ಎನ್ನುವ ಅನುಮಾನ ಅವರಲ್ಲಿದೆ.
ಏನೇ ಆದರೂ ಅನರ್ಹ ಶಾಸಕರು ತೀರಾ ಅತಂತ್ರ ಸ್ಥಿತಿ ತಲುಪಿದ್ದಂತೂ ಸುಳ್ಳಲ್ಲ. ತಾವು ನಂಬಿರುವ ಬಿಜೆಪಿ ನಾಯಕರೇ ತಲೆಗೊಂದು ಮಾತನಾಡುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ