ಮತ್ತೆ ಕಲ್ಯಾಣದ ನಿಜ ಉದ್ದೇಶವೇನು?

ಮತ್ತೆ ಕಲ್ಯಾಣದ ನಿಜ ಉದ್ದೇಶವೇನು?

 

ಪ್ರಗತಿವಾಹಿನಿ ಸುದ್ದಿ, ಸಾಣೇಹಳ್ಳಿ-

ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ಆಯೋಜನೆಗೊಂಡಿದ್ದ ಮತ್ತೆ ಕಲ್ಯಾಣ ರಾಜ್ಯಮಟ್ಟದ ಜಿಲ್ಲಾಸಂಘಟಕರ ಸಮಾಲೋಚನಾ ಸಭೆಯನ್ನುದ್ದೇಶಿಸಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.

ಮತ್ತೆ ಕಲ್ಯಾಣ ಕಾರ್ಯಕ್ರಮಗಳ ಸ್ವರೂಪ ಆಯಾ ಜಿಲ್ಲಾ ಸಹಮತ ವೇದಿಕೆಗಳ ಕಾರ್ಯಚಟುವಟಿಕೆಗಳ ಮೇಲೆ ನಿಂತಿದೆ. ಪ್ರತಿ ವರ್ಷ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಚನೆ ನಮಗಿಲ್ಲ. ಮುಂದಿನ ಚಟುವಟಿಕೆಗಳು ನಮ್ಮನ್ನೇ ಅವಲಂಬಿಸದೆ. ಆಯಾ ಜಿಲ್ಲೆಯ ಸಹಮತ ವೇದಿಕೆಯ ಸಂಘಟನೆಗಳು ಮುಂದುವರಿಸಿಕೊಂಡು ಹೋಗಬೇಕು.

ಮತ್ತೆ ಕಲ್ಯಾಣಕ್ಕೆ ಹೊಸ ರೂಪವನ್ನು ಕೊಡಬೇಕು. ಜಿಲ್ಲಾ ಸಂಘಟಕರು ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಸಂಘಟನೆಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು. ಮತ್ತೆ ಕಲ್ಯಾಣವೆಂದರೆ ಬಸವ ತತ್ವ ಪ್ರಚಾರ ಮಾಡುವ ಕೆಲಸವೊಂದೇ ಅಲ್ಲ. ಸಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿ ಅವುಗಳನ್ನು ಬೇರು ಸಹಿತ ಹೋಗಲಾಡಿಸುವುದೇ ಅಗಿದೆ ಎಂದರು.

ಕೆರೆ ಕಟ್ಟೆ ತುಂಬಿಸುವ ಕೆಲಸ

ಸಂಘಟನೆಯ ಮೂಲಕ ಮುಖ್ಯವಾಗಿ ಮಾಡಬೇಕಾದ ಕೆಲಸಗಳು:
೧. ನಮ್ಮ ರಾಜ್ಯದ ಬಹುತೇಕ ಪ್ರದೇಶಗಳು ಪದೇ ಪದೇ ಬರಗಾಲಕ್ಕೆ ತುತ್ತಾಗುವಂತವು. ಹಲವು ಕಡೆ ಕುಡಿಯುವ ನೀರಿಗೂ ಸಮಸ್ಯೆಯಾಗುವುದು. ಈ ಹಿನ್ನೆಲೆಯಲ್ಲಿಯೇ ಹಿಂದೆ ನಮ್ಮ ಹಿರಿಯರು ಕೆರೆ-ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಸರಿಯಾಗಿ ಮಳೆಯಾಗದೆ ಆ ಕೆರೆಕಟ್ಟೆಗಳು ತುಂಬುತ್ತಿಲ್ಲ. ಈಗ ಆಧುನಿಕ ಯಂತ್ರೋಪಕರಣಗಳು ಬಂದಿವೆ.

ಇವುಗಳನ್ನು ಬಳಸಿಕೊಂಡು ಪ್ರತಿಗ್ರಾಮಗಳಲ್ಲಿರುವ ಕೆರೆಕಟ್ಟೆಗಳಿಗೆ ಮಳೆಗಾಲದಲ್ಲಿ ತುಂಬಿ ಹರಿಯುವ ನದಿ-ನಾಲೆಗಳಿಂದ ನೀರು ತುಂಬಿಸುವ ಕೆಲಸಗಳಿಗೆ ಮೊದಲ ಆದ್ಯತೆ ಕೊಡಬೇಕು. ಈ ಕೆಲಸ ಆಗುವ ತನಕ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಕೆರೆಕಟ್ಟೆಗಳು ತುಂಬುವಂತೆ ನೋಡಿಕೊಳ್ಳಬೇಕು.

೨. ದುಶ್ಚಟಗಳಲ್ಲಿ ಮುಖ್ಯವಾದುದು ಕುಡಿತದ ಚಟ. ಇದರಿಂದಾಗಿಯೇ ಸಾವಿರಾರು ಕಟುಂಬಗಳು ಬೀದಿಗೆ ಬೀಳುತ್ತಿವೆ. ಹೆಣ್ಣುಮಕ್ಕಳ ಶೋಷಣೆಯಾಗುತ್ತಿದೆ. ಮದ್ಯಪಾನ ವಿರುದ್ಧದ ಹೋರಾಟ ನಾಡಿನಾದ್ಯಂತ ನಡೆಯಲು ಸಹಮತ ವೇದಿಕೆ ಸಜ್ಜಾಗಬೇಕಿದೆ.

೩. ಕನ್ನಡ ನಮ್ಮ ನೆಲದ ಭಾಷೆ. ಜಗತ್ತಿಗೇ ಬೆಳಕನ್ನು ಕೊಡುವ ವಚನ ಸಾಹಿತ್ಯವಿರುವುದು ಕನ್ನಡದಲ್ಲಿಯೇ. ಇಂಥ ಕನ್ನಡ ಶಾಲೆಗಳೇ ಗಣನೀಯ ಪ್ರಮಾಣದಲ್ಲಿ ಮುಚ್ಚಿಹೋಗುತ್ತಿವೆ. ಕನ್ನಡವೇ ಅಳಿದರೆ ವಚನಗಳು ಉಳಿಯುವುದೆಂತು? ಈ ನಿಟ್ಟಿನಲ್ಲಿ ಹಳ್ಳಿಗಳಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಹಮತ ವೇದಿಕೆಗಳು ಕಾರ್ಯಕ್ರಮ ರೂಪಿಸಿಕೊಳ್ಳಬೇಕು.

ಪ್ರಕೃತಿ ಕಾಳಜಿ

೪. ೨೧ನೆಯ ಶತಮಾನ, ಆಧುನಿಕ ವಿಜ್ಞಾನ, ತಂತ್ರಜ್ಞಾನ ಯುಗದಲ್ಲಿ ನಾವಿದ್ದರೂ ಮೌಢ್ಯಗಳು ಹಿಂದೆಂದಿಗಿಂತಲೂ ಇಂದು ಜನರನ್ನು ದಿಕ್ಕುತಪ್ಪಿಸುತ್ತಿವೆ. ಶೋಷಣೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ವಚನಗಳ ಮೂಲಕ ಜನರಿಗೆ ತಿಳುವಳಿಕೆ ಹೇಳುವ ಕೆಲಸಗಳನ್ನು ಸಹಮತ ವೇದಿಕೆಯವರು ಮಾಡಬೇಕು.

೫. ಶರಣರು ಕೇವಲ ಮಾನವ ಸಂಕುಲದ ಬಗ್ಗೆ ಮಾತ್ರ ಚಿಂತಿಸಲಿಲ್ಲ ‘ಸಕಲ ಜೀವಾತ್ಮರಿಗೆ ಲೇಸ’ ಬಯಸಿದವರು ಅವರು. ಆದರೆ ನಾವು ಇಂದು ಕೇವಲ ಮಾನವರ ಅಭಿವೃದ್ಧಿಯ ಕಡೆ ಗಮನಕೊಟ್ಟು ಪ್ರಕೃತಿಯನ್ನು ಉಪೇಕ್ಷಿಸಿದ್ದೇವೆ ಅಥವಾ ಪ್ರಕೃತಿಯನ್ನು ಒಂದು ಭೋಗದ ವಸ್ತುವಿನ ರೂಪದಲ್ಲಿ ನೋಡುತ್ತಿದ್ದೇವೆ. ಇದರಿಂದಾಗಿಯೇ ಅನೇಕ ಪ್ರಾಕೃತಿಕ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಮುಂದಿನ ಜನಾಂಗ ನೆಮ್ಮದಿಯಿಂದ ಬದುಕಲು ಪ್ರಕೃತಿಯ ಪಾತ್ರ ಅತ್ಯಂತ ಮಹತ್ವದ್ದು. ಪ್ರಕೃತಿಯ ಬಗ್ಗೆ ಹೆಚ್ಚಿನ ಕಾಳಜಿವಹಿಸುವಂತೆ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನೂ ಸಹಮತ ವೇದಿಕೆಯವರು ಮಾಡಬೇಕಾಗಿದೆ.

೬. ಸಾಣೇಹಳ್ಳಿಯಲ್ಲಿ ಪ್ರತಿವರ್ಷ ಯುವಕ-ಯುವತಿಯರಿಗೆ ಬಸವಾದಿ ಶಿವಶರಣರ ತತ್ವ ಸಂದೇಶಗಳನ್ನೂ ಒಳಗೊಂಡಂತೆ ಇಂದಿನ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ೨೦ ದಿನಗಳ ಕಾಲ ತರಬೇತಿ ನೀಡಲಾಗುವುದು.

ನೆರೆ ಸಂತ್ರಸ್ತರಿಗೆ ನೆರವು

ಮತ್ತೆ ಕಲ್ಯಾಣ ಅಭಿಯಾನ ಹೊರಟಾಗ ನೆರೆ-ಬರ ಎರಡೂ ತೀವ್ರವಾಗಿ ಇದ್ದವು. ಸಹಮತ ವೇದಿಕೆಯಿಂದ ಸತ್ರಸ್ಥರಿಗೆ ಕೈಲಾದ ಸಹಾಯ ಮಾಡಲಾಗಿದೆ. ಅಲ್ಲದೆ ಶ್ರೀಮಠದಿಂದ ಐದು ಲಕ್ಷ ಮತ್ತು ಸಾರ್ವಜನಿಕರಿಂದ ಸಂಗ್ರಹವಾದ ಮೂರು ಲಕ್ಷ ಒಟ್ಟು ಎಂಟು ಲಕ್ಷ ರೂಪಾಯಿಗಳನ್ನು ಈಗಾಗಲೇ ನೆರೆ ಸಂತ್ರಸ್ತರಿಗೆ ನೇರವಾಗಿ ನೆರವಾಗುತ್ತಿರುವ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಸ್ವಾಮೀಜಿಯವರ ಮೂಲಕ ಅರ್ಹ ಸಂತ್ರಸ್ತರಿಗೆ ತಲುಪಿಸಲಾಗುವುದು.

ಮತ್ತೆ ಕಲ್ಯಾಣ ಅಭಿಯಾನದಲ್ಲಿ ಬಸವಾನುಯಾಯಿಗಳಷ್ಟೇ ಅಲ್ಲ; ಹಿಂದು, ಮುಸ್ಲಿಂ, ಕ್ರೈಸ್ತರು ಇದು ತಮ್ಮದೇ ಕಾರ್ಯಕ್ರಮ ಎನ್ನುವಂತೆ ಶ್ರಮಿಸಿದ್ದಾರೆ. ಅದರಲ್ಲೂ ಕೆಲ ಸ್ವಾಮಿಜಿಗಳು ತಮ್ಮ ಸ್ಥಾನಮಾನದ ಹಮ್ಮುಬಿಮ್ಮು ಬಿಟ್ಟು ಕಾರ್ಯಕರ್ತರಂತೆ ಓಡಾಡಿಕೊಂಡು ಕೆಲಸ ಮಾಡಿದ್ದಾರೆ. ಸಹಮತ ವೇದಿಕೆ ಆಯೋಜಿಸುವ ಎಲ್ಲ ಜನಮುಖಿ ಕಾರ್ಯಗಳಿಗೆ ನಮ್ಮ ಸಹಕಾರ ಇರುವುದು.

ಆಭಿಯಾನದ ಆರಂಭದಲ್ಲಿ ತಾತ್ವಿಕವಾಗಿ ಮತ್ತು ತಾಂತ್ರಿಕವಾಗಿ ಅನೇಕ ಆತಂಕಗಳು ಎದುರಾಗಿದ್ದವು. ಅವುಗಳಲ್ಲಿ ಮೀಸಲಾತಿ, ಭಡ್ತಿ ಮೀಸಲಾತಿ ಕುರಿತಂತೆ, ಜಯಂತಿಗಳನ್ನು ಆಚರಿಸುವ ಕುರಿತಂತೆ, ವೀರಶೈವ ಲಿಂಗಾಯತ ಕುರಿತಂತೆ, ಸ್ವಾಮಿಗಳೇ ಮೌಡ್ಯಾಚರಣೆಗಳನ್ನು ನಡೆಸುತ್ತಿರುವ ಕುರಿತಂತೆ, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಕುರಿತಂತೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾದ ಪರ-ವಿರೋಧಗಳು ಎದುರಾದವು.

ಭಿನ್ನವಾದ ವರದಿ

ಇದಕ್ಕೆ ಕಾರಣ ಮಾಧ್ಯಮಗಳು ವಾಸ್ತವ ಸ್ಥಿತಿಗಿಂತ ಭಿನ್ನವಾದ ವರದಿಯನ್ನು ಪ್ರಕಟಿಸಿದ್ದು. ಇವುಗಳಿಗೆ ಸ್ಪಷ್ಟೀಕರಣ ಕೊಟ್ಟ ನಂತರ ಈ ಆತಂಕಗಳೆಲ್ಲ ಮಂಜಿನಂತೆ ಕರಗಿ ಪ್ರಶ್ನಿಸಿದವರೂ ನಮ್ಮೊಟ್ಟಿಗೆ ನಿಂತರು. ಒಟ್ಟಾರೆ ಈ ಎಲ್ಲ ಸಂದರ್ಭಗಳು ನಮ್ಮ ಮಾನಸಿಕ ಸ್ಥಿಮಿತತೆಯನ್ನು ಹೇಗೆ ಕಾಪಾಡಿಕೊಳ್ಳುವರು ಎಂದು ಪರೀಕ್ಷಿಸುವಂತಿತ್ತು. ಬಸವಾದಿ ಶಿವಶರಣರ ಮತ್ತು ಹಿರಿಯ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಕೃಪೆಯಿಂದ ಇವೆಲ್ಲವನ್ನು ಧೈರ್ಯವಾಗಿ ಎದುರಿಸಿದ್ದೇವೆ. ಒಟ್ಟಾರೆ ಈ ಅಭಿಯಾನ ನಮಗೆ ಆತ್ಮ ತೃಪ್ತಿಯನ್ನು ನೀಡಿವೆ.

ಯಾರು ಏನೇ ಅಂದರೂ, ಅಡ್ಡಿ ಆತಂಕಗಳನ್ನು ಉಂಟು ಮಾಡಿದರೂ ನಾವು ಮಾಡುವ ಕೆಲಸದಲ್ಲಿ ಜನಹಿತ ಅಡಗಿದ್ದರೆ, ನಮ್ಮ ಕೆಲಸದಲ್ಲಿ ನಾವು ಪ್ರಾಮಾಣಿಕತೆಯಿಂದ ಮುಂದುವರಿದರೆ ವಿಫಲತೆ ಎಂದಿಗೂ ಸಾಧ್ಯವಿಲ್ಲ. ಬಸವ ಕೃಪೆಯಿಂದಾಗಿ ಇಷ್ಟೆಲ್ಲ ನಡೆದಿದೆ ನಾವು ಸಾಧನಗಳು ಮಾತ್ರ. ಮತ್ತೆ ಕಲ್ಯಾಣದ ಯಶಸ್ಸಿಗೆ ಶ್ರಮಿಸಿದವರು ಸಾವಿರಾರು ಜನರಿದ್ದಾರೆ ಎಂದರು.

ಚಿತ್ರದುರ್ಗದ ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮಿಗಳು ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ಕಲಾಋಷಿಗಳಿದ್ದಂತೆ. ಸಮಾಜವನ್ನು ಕಟ್ಟುವಲ್ಲಿ ಸಾವಿರ ಆನೆಗಳನ್ನು ಬಲ ಹೊಂದಿರುವರು. ಯತಿಗಳಾಗಿ ಕೇವಲ ಪೂಜೆ, ಪ್ರಸಾದ, ಪ್ರದರ್ಶನಗಳಷ್ಟೇ ಅಲ್ಲದೆ ಮತ್ತೆ ಕಲ್ಯಾಣದ ಮೂಲಕ ವಿವಿಧ ಮತ(ಅಭಿಪ್ರಾಯ) ಉಳ್ಳವರನ್ನು ಒಂದೆಡೆ ಸೇರಿಸಿ ಅವರಿಗೆ ಸ್ಪಂಧಿಸುವ ಮಹತ್ತರ ಕೆಲಸ ಮಾಡಿದ್ದಾರೆ.

ಹೃದಯದಿಂದ ಆಗಬೇಕು

ಬಸವಣ್ಣನವರು ಮಾಡಿದ್ದೂ ಇದನ್ನೇ. ಶಬ್ದಗಳಿಂದ ಹತ್ತಿರವಾದರೆ ಸಾಲದು; ಹೃದಯದಿಂದ ಆಗಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಮುಂದೆ ಮತ್ತೆ ಕಲ್ಯಾಣವನ್ನು ತಾಲ್ಲೂಕು, ಗ್ರಾಮಗಳಿಗೂ ತಲುಪಿಸುವ ಹೊಣೆಗಾರಿಕೆ ಸಂಘಟಕರ ಮೇಲಿದೆ. ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳು ಎಂಥವರನ್ನೂ ಬೆಚ್ಚಿಬೀಳಿಸುವಂಥವು. ಅವುಗಳಿಗೆ ಪಂಡಿತಾರಾಧ್ಯ ಶ್ರೀಗಳು ಸಮರ್ಥವಾಗಿ ಉತ್ತರಿಸಿದ್ದಾರೆ.

ನೆರಪೀಡಿತರಿಗೂ ಸಹಾಯ ಹಸ್ತ ನೀಡಿದ್ದಾರೆ. ಕೇವಲ ಉಪದೇಶ ಮಾಡದೆ ಹತ್ತಿರ ಕರೆದುಕೊಂಡು. ತಾಯಿ ಸಂತೈಸುವಂತೆ ಸಂತೈಸಿದ್ದಾರೆ. ಪಂಡಿತಾರಾಧ್ಯ ಶ್ರೀಗಳು ಇಡೀ ಸನ್ಯಾಸಿ ವರ್ಗ ಹೆಮ್ಮೆ ಪಡುವ ಕೆಲಸ ಮಾಡಿದ್ದಾರೆ. ಜನಗಳ ಹತ್ತಿರ ಬಸವಣ್ಣನನ್ನು ಕರೆದುಕೊಂಡುವ ಹೋಗುವ ಕೆಲಸವನ್ನು ಪ್ರತಿಬಸವಣ್ಣನವರಂತೆ ಪಂಡಿತಾರಾಧ್ಯ ಶ್ರೀಗಳು ನಿರ್ವಹಿಸಿದ್ದಾರೆ. ಅವರ ಇಂತಹ ಕೆಲಸಗಳ ಹಿಂದೆ ನಾವು ಖಂಡಿತವಾಗಿಯೂ ಇದ್ದೇವೆ. ಇಂಥ ಪವಿತ್ರವಾದ ಕೆಲಸಕ್ಕೆ ಜಾತಿ, ಮತ, ಪಕ್ಷ ಭೇದಗಳನ್ನು ಮರೆತು ಒಗ್ಗೂಡುವ ಅವಶ್ಯಕತೆ ಇದೆ ಎಂದರು.

ಸುದ್ದಿಯೇ ಅಗಲಿಲ್ಲ

ಶ್ರೀನಿವಾಸ್ ಜಿ ಕಪ್ಪಣ್ಣ ಮಾತನಾಡಿ,  ರಾಜಕಾರಣಿಗಳಿಗೆ ಪಕ್ಷ, ಅಧಿಕಾರ, ಭ್ರಷ್ಟಾಚಾರ ಮುಖ್ಯವೇ ಬಸವಣ್ಣನಲ್ಲ. ಬೆಂಗಳೂರಿಗರು ಆತ್ಮ ಕಳೆದುಕೊಂಡಿರುವವರು. ಬೆಂಗಳೂರಿನಲ್ಲಿ ಸೈಕಲ್ ಬಿದ್ದರೂ ನ್ಯಾಷನಲ್ ನ್ಯೂಸ್ ಆಗುವುದು. ಆದರೆ ಮತ್ತೆ ಕಲ್ಯಾಣದಂತಹ ಮಹತ್ತರ ಕಾರ್ಯ ನ್ಯೂಸ್ ಚಾನೆಲ್‌ಗಳಲ್ಲಿ ಸುದ್ದಿಯೇ ಅಗಲಿಲ್ಲ.

ಕರ್ನಾಟಕದ ಅತಿರಥಮಹಾರಥರೆಲ್ಲ ಬೆಂಗಳೂರಿನಲ್ಲಿದ್ದಾರೆ. ಆದರೆ ಅವರೆಲ್ಲ ತಮ್ಮದೇ ಚೌಕಟ್ಟಿನಲ್ಲಿ ಇದ್ದಾರೆ. ಪವಾಡ ಮಾಡುವ ಶಕ್ತಿ ಪಂಡಿತಾರಾಧ್ಯ ಸ್ವಾಮಿಜಿಗಳಿಗಿದೆ. ಪೂರ್ವಯೋಜಿತವಾಗಿ ಹಣಕಾಸು, ಕಾರ್ಯಕರ್ತರ ಪಡೆ ಮುಂತಾದವುಗಳಿಲ್ಲದೆ ತಾವು ಅಂದುಕೊಂಡಿದ್ದನ್ನು ಮಾಡಿ ತೋರಿಸುವ ಸಾಮರ್ಥ್ಯವೇ ಪವಾಡ. ಮೂವತ್ತೂ ಜಿಲ್ಲೆಗಳಲ್ಲಿ ತಾವು ನಿಗದಿಪಡಿಸಿಕೊಂಡ ಸಮಯದಲ್ಲಿ ಯಾವುದೇ ವ್ಯತ್ಯಾಸ ವಿಲ್ಲದೆ ಮಾಡಿ ತೋರಿಸಿದ್ದಾರೆ.

ಸಂವಾದದಲ್ಲಿ ವಿದ್ಯಾರ್ಥಿಗಳು ಸ್ವಾಮಿಗಳನ್ನು ಸೇರಿಸಿದಂತೆ ವೇದಿಕೆಯ ಮೇಲಿರುವ ಎಲ್ಲರೂ ಬೆಚ್ಚಿಬೀಳುವ ಪ್ರಶ್ನೆ ಕೇಳಿದರು. ಪ್ರಶ್ನೆಗಳ ಮೇಲೆ ಪ್ರಶ್ನೆ. ಅವೆಲ್ಲವುಗಳಿಗೂ ವಾಸ್ತವತೆಗೆ ಹಿಡಿದ ಕನ್ನಡಿಯಂತೆ ಸ್ವಾಮಿಜಿಗಳು ಉತ್ತರಿಸಿದ್ದಾರೆ. ರಂಗ ಭೂಮಿ ಕೇವಲ ಮನರಂಜನೆ, ತಮಾಷೆ ಅಲ್ಲ; ಪರಿಣಾಮಕಾರಿಯಾಗಿ ಸಂದೇಶ ಕೊಡಲು ಸಾಧ್ಯ ಎನ್ನುವುದನ್ನು ಸಾಧ್ಯ ಮಾಡಿ ತೋರಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ನಾಟಕ ನೋಡುವಾಗ ನಡುವೆ ಯಾರೊಬ್ಬರೂ ಎದ್ದು ಹೋಗಿಲ್ಲ.

ಕರ್ನಾಟಕಕ್ಕೆ  ಸೀಮಿತವಾಗಬಾರದು

ಒಂದೇ ನಾಟಕವನ್ನು ಮೂವತ್ತೂ ದಿವಸವೂ ನೋಡಿದ ಏಕೈಕ ಸ್ವಾಮಿಗಳು. ೧೨ ನೆಯ ಶತಮಾನದ ವಿಚಾರಗಳನ್ನು ಹೇಳಲು ೨೧ ನೆಯ ಶತಮಾನದ ಎಲ್ಲ ಆಧುನಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಸ್ವಾಮಿಜಿಗಳ ಜೊತೆ ಭಿನ್ನ ಮತವಿಲ್ಲದೆ ಒಪ್ಪಿಕೊಳ್ಳುವುದೇ ಸಹಮತ. ಸ್ವಾಮಿಜಿಗಳು ಮಹಾಸಂಘಟಕರು. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತರ ಕೊಡುವ ಸಿದ್ಧತೆಗಳಾಗಬೇಕು. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಬಾರದು ಎಂದರು.

ರಾಜಶೇಖರ ರಾನಗೊಂಡನಹಳ್ಳಿ: ವಚನಗಳಲ್ಲಿ ಇಂದಿನ ಸಮಸ್ಯೆಗಳಿಗೆ ಇರುವ ಉತ್ತರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತೆ ಕಲ್ಯಾಣದ ಕಾರ್ಯಕ್ರಮಗಳು ರೂಪುಗೊಳ್ಳಬೇಕು.

ಕೆ ಸಿ ಶಿವಮೂರ್ತಿ: ಮಕ್ಕಳಿಗೆ ಶರಣರ ವ್ಯಕ್ತಿತ್ವವನ್ನು ಪರಿಚಯಿಸುವ ಕಾರ್ಯದ ಕಡೆ ಮತ್ತೆ ಕಲ್ಯಾಣ ಯೋಚಿಸಬೇಕು. ಇದಕ್ಕೆ ನಾವೆಲ್ಲ ಮುಂದಾಗಬೇಕು.

ಪನ್ನರಾಜ ಬಳ್ಳಾರಿ: ಪ್ರಜಾಪ್ರಭುತ್ವದ ಮಾದರಿಯಲ್ಲಿ ಅನ್ಯ ಧರ್ಮೀಯರಿಗೂ ವಚನ ಸಾಹಿತ್ಯ ತಲುಪುವಂತೆ ಮಾಡಿದ ಯಶಸ್ಸು ಮತ್ತೆ ಕಲ್ಯಾಣಕ್ಕೆ ಸಲ್ಲುತ್ತದೆ. ಸಾಂವಿಧಾನಿಕವಾಗಿ ಮಾನವೀಯತೆ ನೆಲೆ ನಿಲ್ಲಲು ಯಾವ ರೀತಿಯ ಪ್ರಯತ್ನಗಳನ್ನು ಮಾಡಬೇಕೆನ್ನುವುದರ ಕಡೆ ನಾವು ಮತ್ತೆ ಆಲೋಚಿಸಬೇಕಾಗಿದೆ.

ಬದುಕು-ಬರಹಗಳ ಮಹತ್ವ

ರಾಜು, ಮುಗಳಿಹಳ್ಳಿ: ಮಠದ ಭಕ್ತರು ಇಲ್ಲದ, ಮಠದ ಪರಿಚಯವಿಲ್ಲದ ಜಿಲ್ಲೆಗಳಲ್ಲಿ ಇದು ಎಷ್ಟರ ಮಟ್ಟಿಗೆ ಯಶಸ್ಸು ಆಗುತ್ತದೆ ಎಂಬ ಆತಂಕ ನಮ್ಮೆಲ್ಲರಲ್ಲಿ ಮೂಡಿದ್ದು ಸಹಜ. ಆದರೆ ಈ ಆತಂಕಕ್ಕೆ ಆಸ್ಪದ ಕೊಡದೆ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಕಾಯಕರ್ತರೆಲ್ಲರೂ ಅಭಿನಂದನಾರ್ಹರು.

ಕೆ ಶಾಂತರಾಜು, ಸಂತೇಬೆನ್ನೂರು: ಸಾಮಾನ್ಯ ಜನರಲ್ಲಿಯೂ ವಚನಕಾರರ ಬದುಕು-ಬರಹಗಳ ಮಹತ್ವವನ್ನು ತಿಳಿಸುವ ಅಗತ್ಯವಿದೆ.

ರಾಜಶೇಖರ, ಹಾಸನ: ಇಂದಿನ ಯುವಕ ಯುವತಿಯರನ್ನು ೧೨ನೇ ಶತಮಾನದ ಸಮಸಮಾಜದ ಕಡೆ ಕರೆದುಕೊಂಡು ಹೋಗುವ ಅಗತ್ಯತೆ ಇದ್ದು, ಈ ನಿಟ್ಟಿನಲ್ಲಿ ಮತ್ತೆ ಕಲ್ಯಾಣದ ಹೆಜ್ಜೆ ಮಹತ್ವದ್ದು. ಸರ್ವಧರ್ಮದವರನ್ನು ಒಗ್ಗೂಡಿಸಿಕೊಂಡು ಯಶಸ್ವಿ ಮಾಡಿದ್ದು ಇನ್ನೂ ಮಹತ್ವದ್ದು.

ಬಸವರಾಜ, ಮ್ಯಾಗೇರಿ, ಧಾರವಾಡ; ಯುವಕರಲ್ಲಿ ಜಾತಿಯಿಲ್ಲ, ಅದನ್ನು ಬೆಳಸುತ್ತಿರುವವರು ಹಿರಿಯರು ಅದನ್ನು ನಿವಾರಿಸುವ ಕ್ರಮಗಳನ್ನು ಕಂಡುಕೊಳ್ಳಬೇಕಾಗಿದೆ.

ಅವೀಸ್ಮರಣೀಯ ಕಾರ್ಯಕ್ರಮ

ರಾಜಶೇಖರ, ಮಂಗಳೂರು; ಮತ್ತೆ ಕಲ್ಯಾಣದ ಸಂವಾದ ಮಕ್ಕಳಲ್ಲಿ ಆಸಕ್ತಿ, ಆತ್ಮವಿಶ್ವಾಸವನ್ನು ತುಂಬಿದೆ. ದೇಶದಲ್ಲಿಯೇ ಇದೊಂದು ಅವೀಸ್ಮರಣೀಯ ಕಾರ್ಯಕ್ರಮ.

ವೀರಸಂಗಯ್ಯ, ಬಳ್ಳಾರಿ: ಶಾಲಾ ಕಾಲೇಜು ಮತ್ತು ಯುವಕರಿಗೆ ಇದೊಂದು ಹೊಸ ಸಂಚಲನ ಉಂಟು ಮಾಡಿದೆ. ನಾವು ನಮ್ಮ ಜಿಲ್ಲೆಯಿಂದ ೧೦೦ ಜನ ವಿದ್ಯಾರ್ಥಿಗಳನ್ನು ಇಲ್ಲಿಗೆ ತರಬೇತಿಗೆ ಕಳುಹಿಸಲು ಸಿದ್ಧರಿದ್ದೇವೆ. ಶ್ರೀಗಳು ಮಕ್ಕಳಲ್ಲಿ ಆಸಕ್ತಿಯನ್ನು ಅರಳಿಸಿದ್ದಾರೆ. ನಿರಂತರವಾಗಿ ಪ್ರತಿವರ್ಷವೂ ಈ ಕಾರ್ಯಕ್ರಮ ಮುನ್ನಡೆಸಿಕೊಂಡು ಹೋಗುವ ಅಗತ್ಯವಿದೆ.

ಗೋಪಾಲ್, ಮೈಸೂರು; ತಾಲ್ಲೂಕು ಮಟ್ಟದಲ್ಲಿ ಕಾರ್ಯಕರ್ತರನ್ನು ಸಿದ್ದಗೊಳಿಸಬೇಕಿದೆ. ಸಾಮಾಜಿಕ ಸಮಸ್ಯೆಗಳನ್ನು ಮಕ್ಕಳ ಬಳಿಗೆ ಕೊಂಡೊಯ್ಯಬೇಕಿದೆ. ಕಟ್ಟುವ ಕೆಲಸ ಎಲ್ಲ ಕಡೆ ಆಗಬೇಕಿದೆ.

ನಿತ್ಯ ಕಲ್ಯಾಣವಾಗಬೇಕು

ಹೆಚ್ ಎಸ್ ಮಂಜುನಾಥ ಕುರ್ಕಿ, ದಾವಣಗೆರೆ; ಮೌಢ್ಯ, ಅಜ್ಞಾನದಲ್ಲಿ ಇದ್ದವರನ್ನು ಬಡಿದೆಬ್ಬಿಸಿದವರು ಬಸವಾದಿ ಶಿವ ಶರಣರು. ಜಾತಿ-ಧರ್ಮ-ಪಂಥ ಇವೆಲ್ಲವುಗಳಿಂದ ಹೊರಬಂದು ಮತ್ತೆ ಕಲ್ಯಾಣ ಕಾರ್ಯಕ್ರಮ ಯಶಸ್ವಿಯಾಗಿದೆ. ಇದು ಪ್ರತಿವರ್ಷವೂ ನಡೆದುಕೊಂಡು ಹೋಗಬೇಕು. ಮಕ್ಕಳ ಸಂವಾದ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಮತ್ತೆ ಕಲ್ಯಾಣ ನಿತ್ಯ ಕಲ್ಯಾಣವಾಗಬೇಕು.

ಜಿ ಎಸ್ ಮಂಜುನಾಥ, ಚಿತ್ರದುರ್ಗ; ೨೭ ವಿವಿಧ ಜನಾಂಗದವರು ಸೇರಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದೇವೆ. ಬಸವಣ್ಣನವರನ್ನು ಇನ್ನೂ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ನಾವು ಮೊದಲು ಮನಸ್ಸಿನಿಂದ, ಮನೆಯಿಂದ ಬದಲಾವಣೆ ತಂದುಕೊಳ್ಳಬೇಕಿದೆ. ಸಂವಿಧಾನವೂ ಕೆಟ್ಟು ಹೋಗಿದ್ದು ಸರಿಪಡಿಸಬೇಕಾದ ಅಗತ್ಯವಿದೆ.

ಅನಿಲಕುಮಾರ, ಜನಶಕ್ತಿ ಸಂಘ; ೧೨ನೇ ಶತಮಾನದಲ್ಲಿ ಬಸವಣ್ಣನವರು ಹಾಕಿಕೊಟ್ಟ ಧರ್ಮದಂತೆ ನಡೆಯುವುದರಲ್ಲಿ ಇಂದು ತಪ್ಪಾಗಿದೆ. ತಪ್ಪನ್ನು ತಿದ್ದಿಕೊಂಡು ಹೋಗುವ ಕಡೆ ಮತ್ತೆ ಕಲ್ಯಾಣ ಮಹತ್ತರ ಹೆಜ್ಜೆ.

ಪ್ರಶ್ನಿಸುವಂತಾಗಿದೆ

ಪ್ರಕಾಶ ಅಸುಂಡಿ; ಅನೇಕ ಶರಣ ಸಂಘಟನೆಗಳಿವೆ ನಿಜ. ಆದರೆ ಅವು ಆ ಶರಣ ಆಶಯದಂತೆ ನಡೆದುಕೊಂಡು ಹೋಗುತ್ತಿವೆಯೇ ಎಂದು ಪ್ರಶ್ನಿಸುವಂತಾಗಿದೆ. ಯುವಕರಿಗೆ ತರಬೇತಿ ಶಿಬಿರಗಳ ಅವಶ್ಯಕತೆಯಿದ್ದು ತಿಂಗಳಿಗೊಮ್ಮೆ ಆಯಾ ತಾಲ್ಲೂಕುಗಳಲ್ಲಿ ನಡೆದುಕೊಂಡು ಹೋಗಬೇಕು.

ಶ್ರೀನಿವಾಸ ಪಿಚ್ಚಳ್ಳಿ, ಕೋಲಾರ; ಇದು ನಮ್ಮವೇ ಕೆಲಸ ಎಂದು ಮಾಡಿದಾಗ ನಾವು ಮುಂದೆ ಸಾಗಲು ಸಾಧ್ಯ. ಎಲ್ಲ ಚಳುವಳಿ ಮಿತ್ರರು ಇದು ನಮ್ಮದೇ ಎನ್ನುವ ರೀತಿಯಲ್ಲಿ ಮಾಡಿದ ಫಲವೇ ಯಶಸ್ವಿಗೆ ಸಾಧ್ಯವಾಯಿತು. ಶಾಲಾ-ಕಾಲೇಜು ಮಕ್ಕಳನ್ನು ದಾರಿ ತಪ್ಪಿಸುವಂತೆ ಮಾಡುತ್ತಿರುವ ಸಂಘಟನೆಗಳಿಗೆ ಮತ್ತೆ ಶ್ರೀಮಠ ದಾರಿದೀಪವಾಗಬೇಕು. ಜಾನಪದ ಮತ್ತು ಬಸವತತ್ವಗಳಿಂದ ಮಾತ್ರ ಸಮಾನತೆ ಸಾಧಿಸಲು ಸಾಧ್ಯ. ನಾವು ನಿಮ್ಮೊಟ್ಟಿಗೆ ಇದ್ದೇವೆ. ಸಹಮತ ವೇದಿಕೆಯಲ್ಲಿರುವ ಕಾರ್ಯಕರ್ತರನ್ನು ತಾವು ಬಲಗೊಳಿಸಿಬೇಕಿದೆ.

ನಜೀರ್ ಪಾಷಾ, ಬಳ್ಳಾರಿ; ಅಭೂತಪೂರ್ವವಾದ ಕಾರ್ಯಕ್ರಮ. ನಮ್ಮನ್ನೆಲ್ಲ ೧೨ನೇ ಶತಮಾನಕ್ಕೆ ಕರೆದುಕೊಂಡು ಹೋದ ಅನುಭವ ಉಂಟುಮಾಡಿದೆ. ಇದಕ್ಕೆ ಮತೀಯ ಚೌಕಟ್ಟನ್ನು ನೀಡದೆ ಮುಂದುವರೆಯುವ ಅಗತ್ಯವಿದೆ. ನನ್ನನ್ನು ನಾನು ಅರಿಯುವ ಮೂಲಕ ಬದಲಾವಣೆಗೆ ಪ್ರಯತ್ನಿಸಬೇಕಿದೆ.

ಕಾರ್ಯಾಗಾರಗಳಾಗಬೇಕು

ಅನಂತ ನಾಯಕ್, ಬೆಂಗಳೂರು; ಉಪನ್ಯಾಸ ಕಾರ್ಯಕ್ರಮಗಳ ಮಾತುಗಳನ್ನು ಪುಸ್ತಕ ರೂಪದಲ್ಲಿ ಹೊರತರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ಜಿಲ್ಲೆಯ ಕಾರ್ಯಕ್ರಮಗಳ ವಿಡಿಯೋ ಸಿಗುವಂತೆ ವ್ಯವಸ್ಥೆ ಮಾಡಬೇಕು. ಆಯ್ದ ವಿದ್ಯಾರ್ಥಿಗಳಿಗೆ ತರಬೇತಿ, ಕಾರ್ಯಗಾರಗಳಾಗಬೇಕು. ಇದು ನಿತ್ಯ ಕಲ್ಯಾಣವಾಗಬೇಕು.

ಆರ್ ಜಿ ಹಳ್ಳಿ ನಾಗರಾಜ; ನನ್ನ ಅನೇಕ ವರ್ಷಗಳ ಕನಸು ಮತ್ತೆ ಕಲ್ಯಾಣದ ಮೂಲಕ ನನಸಾಗಿದೆ. ಬಸವ ಅನುಯಾಯಿಗಳ ಸೃಷ್ಠಿ ಮತ್ತೆ ಕಲ್ಯಾಣದ ಮೂಲಕ ನಡೆದಿದೆ. ಅನೇಕ ಜಿಲ್ಲೆಗಳಲ್ಲಿ ಸಹಮತದ ಮೂಲಕ ಯಶಸು ಕಂಡಿದೆ. ಮುಖ್ಯವಾಗಿ ಇದು ಇನ್ನೂ ಹೆಚ್ಚಿನದಾಗಿ ವಿದ್ಯಾರ್ಥಿಗಳಿಗೆ ತಲುಪಬೇಕಾಗಿದೆ.

ಹೆಚ್ ಕೆ ರಾಮಚಂದ್ರಪ್ಪ, ದಾವಣಗೆರೆ; ಕಾರ್ಯಕ್ರಮ ಎಲ್ಲ ಕಡೆ ಯಶಸ್ವಿಯಾಗಿದೆ. ಮತ್ತೆ ಕಲ್ಯಾಣ ಕಾರ್ಯಕ್ರಮ ಕಾರ್ಯಕರ್ತರಲ್ಲಿ ನಿಸ್ವಾರ್ಥತೆಯಿಂದ ಕೆಲಸ ಮಾಡುವ ಗುಣವನ್ನು ಬೆಳೆಸಿದೆ. ನಾನು ಮಾರ್ಕ್ಸ ವಾದಿಯಾಗಿ ಬಸವಣ್ಣನನ್ನು ಒಪ್ಪಿಕೊಳ್ಳುತ್ತೇನೆ. ನಮ್ಮಲ್ಲಿರುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಮತ್ತೆ ಕಲ್ಯಾಣ ಅವಕಾಶ ಮಾಡಿಕೊಟ್ಟಿದೆ.

ಬಸವಣ್ಣನವರ ವಚನದಿಂದ ಸಂವಿಧಾನವನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಶಾಲಾ ಕಾಲೇಜು ಮಕ್ಕಳಲ್ಲಿ ಮೌಡ್ಯವನ್ನು ದೂರವಿರಿಸುವ ಮೂಲಕ ನವಸಮಾಜವನ್ನು ಸೃಷ್ಟಿ ಮಾಡಲು ಸಾಧ್ಯವಾಗಬಹುದು. ಯುವಜನರಿಗೆ ಶ್ರೀಗಳ ಮೂಲಕ ತರಬೇತಿ ನೀಡಬೇಕಾಗಿದೆ.

ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಆಡಿದರು. ಶಾಲಾ ಮಕ್ಕಳು ಆಕರ್ಷಕ ವಚನ ನೃತ್ಯರೂಪಕವನ್ನು ನೀಡಿದರು. ಹೆಚ್ ಎಸ್ ದ್ಯಾಮೇಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button