Kannada News

ಸಮಾಜಕ್ಕೆ ಮಾರಕವಾದ ಪ್ಲ್ಯಾಸ್ಟಿಕ್ ಗೆ ಕಡಿವಾಣ ಅಗತ್ಯ -ಲಕ್ಷ್ಮಿ ಹೆಬ್ಬಾಳಕರ್

ಸಮಾಜಕ್ಕೆ ಮಾರಕವಾದ ಪ್ಲ್ಯಾಸ್ಟಿಕ್ ಗೆ ಕಡಿವಾಣ ಅಗತ್ಯ -ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ದಿನ ನಿತ್ಯ ನಾವು ತಿಳಿದೋ ತಿಳಿಯದೆಯೋ ಶೇ.60ರಷ್ಟು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. ಇದರಿಂದ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಭಾನುವಾರ ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ಲಾಸ್ಟಿಕ್ ಮುಕ್ತ ಬೆಳಗಾವಿ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮುದ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ಬೀಳುತ್ತಿರುವುದರಿಂದ ಜಲಚರ ಜೀವಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸೇರಿ ಮೃತಪಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಹೇಳಿದರು.

ಒಳ್ಳೆಯ ಕೆಲಸ ಮಾಡಲು ಜನರನ್ನು ಎಲ್ಲರೂ ಎಬ್ಬಿಸಬೇಕು. ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಸಂಕಲ್ಪ ಮಾಡಿದ್ದಾರೆ. ಅದಕ್ಕೆ ಎಲ್ಲರೂ ಕೈ ಜೋಡಿಸುವ ಅಗತ್ಯವಿದೆ. ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.

ಮನೆಯಿಂದಲೇ ಸಂಕಲ್ಪ

ಸಾನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣ ಮಾಡಲು ಜನರು ಸಂಕಲ್ಪ ಮಾಡಬೇಕು. ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜನ ಪ್ಲಾಸ್ಟಿಕ್ ಬಳಸುವುದನ್ನು ತ್ಯಜಿಸಿದಾಗ ಮಾತ್ರ ಹಂತ ಹಂತವಾಗಿ ಪ್ಲಾಸ್ಟಿಕ್ ಮುಕ್ತವಾಗುವುದು ಎಂದರು.

ಮನೆಯಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ಬಳಕೆಯ ತ್ಯಾಜ್ಯದಿಂದ ಸಾವಿರಾರು ಪ್ರಾಣಿ ಸಂಕುಲಗಳು ನಶಿಸುತ್ತಿವೆ. ಪ್ರವಾಹದಲ್ಲಿ ಹರಿದು ಬಂದಿದ್ದು ಅತೀ ಹೆಚ್ಚು ಪ್ಲಾಸ್ಟಿಕ್ ಚೀಲಗಳು. ಇದಕ್ಕೆ ನೇರ ಹೊಣೆ ನಾವುಗಳೆ. ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಮೊದಲು ಮನೆಯಿಂದಲೇ ಸಂಕಲ್ಪ ಪ್ರಾರಂಭವಾಗಬೇಕು. ಬಳಿಕ ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕೆಂದು ಶ್ರೀಗಳು ಕರೆ ನೀಡಿದರು.

ಬೆಳಗಾವಿಯಿಂದ ಪ್ರಾರಂಭವಾಗಿರುವ ಪಾಸ್ಟಿಕ್ ಮುಕ್ತ ಅಭಿಯಾನ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿದೆ. ಜನರು ಮೊದಲು ಸಂಕಲ್ಪ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಹೇಳಿದರು.

ಬೆಳಗಾವಿಯ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೇವಲ ಒಬ್ಬ ಶಾಸಕಿಯಾಗಿ ಒಂದೇ ವರ್ಷದಲ್ಲಿ ಗ್ರಾಮೀಣ ಕ್ಷೇತ್ರಕ್ಕೆ ನೂರಾರು ಕೋಟಿ ರು.  ಸರಕಾರದಿಂದ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕುಮಾರಸ್ವಾಮಿ ಬಡಾವಣೆಗೇ ಐದುವರೆ ಕೋಟಿ ರು. ಅನುದಾನ ನೀಡಿದ್ದು ಹೆಮ್ಮೆಯ ಸಂಗತಿ ಎಂದರು.

ಬೆಳಗಾವಿ ನ್ಯಾಯಾಧೀಶ ಮಹಾದೇವಯ್ಯ , ಬಿ.ಐ. ಪಾಟೀಲ, ಅರವಿಂದ ಜೋಶಿ, ವೀರುಪಾಕ್ಷಯ್ಯ ನೀರಲಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button