*ಬೆಳಗಾವಿಯಲ್ಲಿ ಯಾವೆಲ್ಲ ಪ್ರತಿಭಟನೆ ನಡೆಯಿತು..? ಇಲ್ಲಿದೆ ಸಂಪೂರ್ಣ ಮಾಹಿತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಳಿಗಾಲದ ಅಧಿವೇಶನದ ಎರಡನೇ ದಿನ ನಡೆದ ಸಾಲು ಸಾಲು ಪ್ರತಿಭಟನೆಗಳ ಬಿಸಿ ರಾಜ್ಯ ಸರ್ಕಾರಕ್ಕೆ ತಟ್ಟಿತು. ಇಂದು ಒಟ್ಟು 8 ಸಂಘಟನೆಗಳು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿವೆ. ಹಾಗಾದರೆ, ಯಾವ್ಯಾವ ಸಂಘಟನೆ, ಏನೆಲ್ಲಾ ಬೇಡಿಕೆ ಇಟ್ಟಿವೆ ಎಂಬ ಕುರಿತು ಇಲ್ಲಿದೆ ಸಮಗ್ರ ವರದಿ.
ಸದನದ ಒಳಗೆ ವಿರೋಧ ಪಕ್ಷಗಳು ಚಾಟಿ ಬೀಸುತ್ತಿದ್ದರೆ ಇತ್ತ ಹೊರಗಡೆ ಪ್ರತಿಭಟನಾಕಾರರಿಂದ ಸುವರ್ಣ ವಿಧಾನಸೌಧ ಸಮೀಪದ ಸುವರ್ಣ ಗಾರ್ಡನ್ ಟೆಂಟ್ ನಲ್ಲಿ ಇಂದು ಪ್ರತಿಭಟನೆಗಳ ಕಾವು ಜೋರಾಗಿತ್ತು. ಒಂದೆಡೆ ಸದನದೊಳಗೆ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿದ್ದರೆ ಪಕ್ಷಗಳು ಮುಗಿಬಿದ್ದಿದ್ದರೆ ಮತ್ತೊಂದೆಡೆ ಹೊರಗಡೆ ವಿವಿಧ ಸಂಘಟನೆಗಳ ಹೋರಾಟಗಾರರು ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಚಳಿ ಬಿಡಿಸಿದ್ದಾರೆ.
ಸರ್ವೀಸ್ ರಸ್ತೆ ತಡೆದು ರೈತರ ಪ್ರತಿಭಟನೆ
ರಾಜ್ಯ ಸರ್ಕಾರ ರೈತರಿಗೆ ಮಾರಕವಾಗಿರುವ ಮೂರು ಕೃಷಿ ಮಸೂದೆಯನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಹಲಗಾ ರಾಷ್ಟ್ರೀಯ ಹೆದ್ದಾರಿಯ ಬಳಿಯ ಸರ್ವೀಸ್ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಸಂಚಾರ ವ್ಯತ್ಯಯ ಉಂಟಾಗಿ ಕೆಲಕಾಲ ಪರದಾಡಿದರು.
ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಮಸೂದೆಯನ್ನು ಈಗಾಗಲೇ ಅದು ಹಿಂಪಡೆದಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಹಿಂಪಡೆಯುತ್ತಿಲ್ಲ. ಇದರಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಂತಾಗಿದೆ. ರೈತರಿಗೆ ನ್ಯಾಯ ಸಮ್ಮತ ಬೆಲೆ ನಿಗದಿ ಮಾಡಲು ಸ್ವಾಮಿನಾಥನ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸರ್ಕಾರ ರೈತರ ಬೇಡಿಕೆಯನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಡಿ.23 ರೈತ ದಿನ ಅಂತಾ ಘೋಷಿಸಿ:
ಡಿ.23ನ್ನು ರೈತ ದಿನ ಎಂದು ಆಚರಿಸಲು ಸರಕಾರ ಆದೇಶ ಮಾಡುವುದು, ಮನುಷ್ಯರಂತೆ ಜಾನುವಾರುಗಳಿಗೂ ಆಸ್ಪತ್ರೆ ಆರಂಭಿಸುವ ಮೂಲಕ ದಿನದ 24 ಗಂಟೆಗಳು ಕಾಲ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಪ್ರತಿ ಗ್ರಾಮಗಳಲ್ಲಿ ಜಾನುವಾರಗಳನ್ನು ಮೇಯಿಸಲು ಗೋವಾಳ ಜಾಗ ಮೀಸಲಿಡಬೇಕು. ಪ್ರತಿ ತಾಲೂಕುನಿಲ್ಲಿ ರೈತ ವೃತ್ತ ನಿರ್ಮಿಸಬೇಕು. ಈ ಕೂಡಲೇ ಸರ್ಕಾರ ರೈತ ದಿನ ಆಚರಣೆಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಬೇಕು ಹಾಗೂ ರೈತರು ರಸ್ತೆಗಳಲ್ಲಿಯೇ ಒಕ್ಕಲುತನ ಮಾಡುತ್ತಿದ್ದು, ಇದನ್ನು ನಿಯಂತ್ರಿಸಲು ಸರಕಾರದ ವತಿಯಿಂದ ಪ್ರತಿ ಗ್ರಾಮಗಳಲ್ಲಿ ಕಲ್ಲಿನ ಹಾಸಿಗೆ ಕಣವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಹಿತರಕ್ಷಣ ಹೋರಾಟ ಸಮಿತಿ ಟ್ರಸ್ಟ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ದ್ವಿಭಾಷಾ ನೀತಿ ಕೈಬಿ, ತ್ರಿಭಾಷಾ ನೀತಿ ಮುಂದುವರಿಸಿ

ದೇಶೀಯ ಭಾಷೆಗಳ ಹಿತರಕ್ಷಣೆ ಒಕ್ಕೂಟ ವತಿಯಿಂದ ರಾಜ್ಯ ಸರ್ಕಾರ ಜಾರಿಗೊಳಿಸಲು ಹೊರಟಿರುವ ದ್ವಿಭಾಷಾ ನೀತಿಯನ್ನು ಕೈಬಿಟ್ಟು, ತ್ರಿಭಾಷಾ ನೀತಿ ಮುಂದುವರಿಸಬೇಕು. ಖಾಲಿ ಇರುವ ತೃತೀಯ ಭಾಷಾ ಶಿಕ್ಷಕ ಹುದ್ದೆಗಳನ್ನು ತುಂಬಬೇಕು, ಹಳೆಯ ನಿವೃತ್ತಿ ವೇತನ ಪದ್ಧತಿಯನ್ನು (OPS) ಜಾರಿಗೆ ತರಬೇಕು, ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೂ ವಿಸ್ತರಿಸಬೇಕು. ಪ್ರೌಢಶಾಲೆಗಳ ಅರ್ಹ ಶಿಕ್ಷಕರನ್ನು ಪದವಿಪೂರ್ವ ಉಪನ್ಯಾಸ ಹುದ್ದೆಗೆ ಬಡ್ತಿ ನೀಡಬೇಕು, 2024ರವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಖಾಲಿ ಇರುವ ಹುದ್ದೆಗಳನ್ನು ಅನುದಾನಕ್ಕೆ ಒಳಪಡಿಸುವುದು ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ವಿಸ್ತರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಲಾಯಿತು.
ಮಡಿವಾಳ ಜನಾಂಗ ಎಸ್ಟಿಗೆ ಸೇರಿಸಿ
ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ಮಡಿವಾಳರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಹಿಂದಿನ ರಾಜ್ಯ ಸರ್ಕಾರ ಕುಲಶಾಸ್ತ್ರ ಅಧ್ಯಯನ ಮಾಡಲು ಡಾ. ಅನ್ನಪೂರ್ಣ ಅವರನ್ನು ರಾಜ್ಯ ಸರ್ಕಾರದಿಂದ 2009ರಲ್ಲಿ ನೇಮಕ ಮಾಡಿತ್ತು. ಅವರು ನೀಡಿದ್ದ ವರದಿಯನ್ನು 2011ರಲ್ಲಿ ಸರ್ಕಾರ ಸ್ವೀಕರಿಸಿದೆ. ಆದರೆ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಈ ಬಾರಿಯ ಅಧಿವೇಶನದಲ್ಲಿ ಚರ್ಚೆ ಮಾಡಿ ವಿಧಾನಸಭೆಗೆ ತಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಾಲ ಮರುಪಾವತಿಗೆ ಅವಕಾಶ ಕೊಡಿ:
ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಠಿ, ಬೆಲೆ ಕುಸಿತ, ಬೆಳೆ ನಷ್ಟ ಸೇರಿದಂತೆ ಇತರೆ ಕಾರಣಗಳಿಂದ ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ಸಾಲ ಮರುಪಾವತಿಯನ್ನು ಮುಂದಿನ ವರ್ಷದವರೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು. ರೈತರಿಗೆ ಪ್ರಸ್ತುತ ನೀಡುವ ಸಾಲದ ಮೊತ್ತವನ್ನು ದ್ವಿಗುಣಗೊಳಿಸಬೇಕು. ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ರೈತರ ಗೋ-ಸಾಗಾಣಿಕೆ ನಿರ್ಭಂದ ಕಾಯ್ದೆಗಳನ್ನು ಹಿಂಪಡೆದು ರೈತರ ಮೇಲಿರುವ ತೂಗುಗತ್ತಿಯ ಆತಂಕವನ್ನು ತಪ್ಪಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಇವೆಲ್ಲಾ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಪ್ರತಿ ತಾಲೂಕು, ಜಿಲ್ಲೆಗಳಲ್ಲಿ ರೈತ ಭವನ ನಿರ್ಮಿಸಬೇಕು. ಜೊತೆಗೆ ರೈತರಿಗೆ ಅನುಕೂಲವಾಗುವಂತೆ ದಿನದ 24 ಗಂಟೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗುತ್ತಿಗೆ ನೌಕರರನ್ನು ಕೈ ಬಿಡಬೇಡಿ:
ಗುತ್ತಿಗೆ ನೌಕರರನ್ನು ಕೈ ಬಿಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಗುತ್ತಿಗೆ ನೌಕರರು ಪ್ರತಿಭಟಿಸಿದರು. ಇನ್ನು ರಾಜ್ಯದಲ್ಲಿ ಆರೋಗ್ಯ ನಿಗಮ ಮಂಡಳಿಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಳೆದ 20 ವರ್ಷಗಳಿಂದ ಹೊರ ಹಾಗೂ ಒಳ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರನ್ನ ಕೈ ಬಿಡುವ ನಿರ್ಧಾರ ಹಿಂಪಡೆಯಬೇಕು. ಈಗಾಗಲೇ ಕೆಲಸ ಮಾಡುವ ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶೀಘ್ರವೇ ಗ್ರಾ.ಪಂ. ಚುನಾವಣೆ ನಡೆಸಿ:
ಅದೇರೀತಿ 15ನೇ ಹಣಕಾಸು ಆಯೋಗದ ಹಣ ಬಿಡುಗಡೆ, ಶೀಘ್ರವೇ ಗ್ರಾಮ ಪಂಚಾಯತಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಉದ್ಯೋಗ ಖಾತ್ರಿ ಯೋಜನೆಯ ಸಾಮಾಗ್ರಿ ವೆಚ್ಚ ಬಿಡುಗಡೆ ಮಾಡಬೇಕು. ಗ್ರಾಮ ಪಂಚಾಯತಿಗೆ ಹೊರೆಯಾಗುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ, ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಜೀವಿನಿ ಸಂಘದ ಮಹಿಳೆಯರ, ಕೂಸಿನ ಮನೆ ಕಾರ್ಯಕರ್ತೆಯರ ಮಾಸಿಕ ವೇತನವನ್ನು ಸರ್ಕಾರವೇ ಭರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇನ್ನು ಪ್ರತಿಭಟನೆ ನಡೆಯುತ್ತಿದ್ದ ಸುವರ್ಣ ಗಾರ್ಡನ್ ಬಳಿ ಕೃಷಿ ಸಚಿವ ಚಲುವರಾಯ ಸ್ವಾಮಿ ಆಗಮಿಸಿ ಪ್ರತಿಭಟನಾಕಾರರ ಬೇಡಿಕೆ ಆಲಿಸಿದರು. ಪ್ರತಿಯೊಂದು ಟೆಂಟ್ ಗೆ ತೆರಳಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರೈತರು, ಕಾರ್ಮಿಕರು, ಶಿಕ್ಷಕರು ತಮ್ಮ ಹಲವಾರು ಸಮಸ್ಯೆ ಹೇಳಿಕೊಂಡಿದ್ದಾರೆ. ಇವೆಲ್ಲವುಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದರು.
ವಿಜಯೇಂದ್ರ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು:
ರಾಜ್ಯ ಸರ್ಕಾರ ಸತ್ತು ಹೋಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದ ಚಲುವರಾಯಸ್ವಾಮಿ, ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಬಿಜೆಪಿಯವರು ಐದು ವರ್ಷ ಹೇಗೆ ಅಧಿಕಾರ ನಡೆಸಿದರು ಅಂತಾ ಗೊತ್ತಿದೆ. 50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಅನುಮತಿ ಕೊಟ್ಟಿದ್ದು ನಾವು. ಕನಿಷ್ಟ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡುವಂತೆ ಪ್ರಧಾನಿ ಮೋದಿ ಮುಂದೆ ವಿಜಯೇಂದ್ರಗೆ ಪ್ರತಿಭಟನೆ ಮಾಡುವಂತೆ ಹೇಳಿ. ಸುಮ್ಮನೆ ಇಲ್ಲಿ ಮಾತಾಡೋದಲ್ಲ ಎಂದು ತಿರುಗೇಟು ಕೊಟ್ಟರು.
ಬಿಜೆಪಿ ರೈತ ವಿರೋಧಿ:
ಬಿಜೆಪಿಯವರಿಂದ ಹೇಳಿಸಿಕೊಂಡು ನಾವು ಮಾಡುವುದು ಏನಿಲ್ಲ. ಐದು ಗ್ಯಾರಂಟಿ ಕೊಟ್ಟಿದ್ದೇವೆ. ಇಷ್ಟು ಬೆಳೆ ಹಾನಿ ಪರಿಹಾರ ನೀಡಿದ್ದೇವೆ. ನಾವು ರೈತರ ಪರವಾಗಿ ಇದ್ದೇವೆ. ಅವರ ಹಾಗೆ ನಾವು ರೈತ ವಿರೋಧಿ ಅಲ್ಲ. ಬಿಜೆಪಿ ಉದ್ಯಮಿಗಳ ಪರ ಇದೆ. 3 ಲಕ್ಷ ಕೋಟಿ ಅದಾನಿ, ಅಂಬಾನಿ ಸಾಲ ಮನ್ನಾ ಮಾಡಿದ್ದು ಅವರು. ಹಾಗೇ ರೈತರ ಸಾಲವನ್ನೂ ಮನ್ನಾ ಮಾಡಲಿ. ನಾವು ಮೂರು ಬಾರಿ ಕೇಂದ್ರಕ್ಕೆ ಹೋಗಿ ಪ್ರಧಾನಿ ಮೋದಿ ಅವರಿಗೆ ಮನವಿ ಕೊಟ್ಟು ಬಂದಿದ್ದೇವೆ ಎಂದು ಚಲುವರಾಯಸ್ವಾಮಿ ಕಿಡಿಕಾರಿದರು.




