Kannada NewsKarnataka NewsLatest

ತಹಸಿಲ್ದಾರರನ್ನು ರಾತ್ರೋರಾತ್ರಿ ಹೊರದಬ್ಬಿದ್ಯಾರು?; ಶಾಸಕರ ಮೇಲೆ ಗಂಭೀರ ಆರೋಪ

 

ಪ್ರಗತಿವಾಹಿನಿ ಸುದ್ದಿ, ರಾಯಬಾಗ – ಇಲ್ಲಿಯ ತಹಸಿಲ್ದಾರ ಮತ್ತು ಶಾಸಕರ ನಡುವಿನ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ. ಜೊತೆಗೆ ಮಧ್ಯ ರಾತ್ರಿ ತಹಸಿಲ್ದಾರರೂ ಬೀದಿಗೆ ಬಿದ್ದಿದ್ದಾರೆ.

ತಾಲೂಕಿನ ಕಂಕಣವಾಡಿ ಗಾಯರಾಣ ಜಮೀನು ವಿವಾದ ಸಂಬಂಧ ಶಾಸಕ ದುರ್ಯೋಧನ ಐಹೊಳೆ ಮತ್ತು ತಹಸಿಲ್ದಾರ ಚಂದ್ರಕಾಂತ ಬಜಂತ್ರಿ ಮಧ್ಯೆ ವಿವಾದ ಆರಂಭವಾಗಿತ್ತು. ಅದು ವಿಕೋಪಕ್ಕೆ ಹೋಗಿ ತಹಸಿಲ್ದಾರರನ್ನು ವರ್ಗಾವಣೆ ಮಾಡುವಲ್ಲಿ ಶಾಸಕರು ಯಶಸ್ವಿಯಾಗಿದ್ದರು. ಇದನ್ನು ಪ್ರಶ್ನಿಸಿ ತಹಸಿಲ್ದಾರರು ಕೆಎಇಟಿ ಮೊರೆ ಹೋಗಿದ್ದಾರೆ.

ತಹಸಿಲ್ದಾರರು ಸ್ಥಳೀಯ ಸಮಾಜ ಕಲ್ಯಾಣ ಇಲಾಖೆ ವಸತಿ ಗೃಹದಲ್ಲಿ ವಾಸವಾಗಿದ್ದರು. ಅವರು ಕೆಎಟಿ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದರು.  ಆದರೆ ಸಮಾಜ ಕಲ್ಯಾಣ ಇಲಾಖೆ ವಸತಿ ಗೃಹದಿಂದ ಮನೆಯನ್ನು ಕಾಲಿ ಮಾಡುವಂತೆ ತಹಸಿಲ್ದಾರರಿಗೆ ತಿಳಿಸಲಾಗಿತ್ತು. ಅದರಂತೆ ಅವರು ಬಾಡಿಗೆ ಮನೆಯೊಂದನ್ನು ಸಹ ನೋಡಿದ್ದರು.

ಆದರೆ ಸ್ಥಳಾಂತರವಾಗುವ ಮೊದಲೇ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಬಂದು ರಾತ್ರಿ 11 ಗಂಟೆಗೆ ತಹಸಿಲ್ದಾರರ ಸಾಮಾಗ್ರಿಗಳನ್ನೆಲ್ಲ ಹೊರಗೆ ಹಾಕಿ ಅವರನ್ನೂ ಹೊರಗೆ ಕಳಿಸಿ ಕೊಠಡಿಗೆ ಬೀಗ ಹಾಕಿದ್ದಾರೆ. ಇದರಿಂದ ಕಂಗಾಲಾದ ತಹಸಿಲ್ದಾರರು ಮಧ್ಯರಾತ್ರಿ ಹಾಸ್ಟೆಲ್ ಹೊರಗಡೆಯೇ ಕುಳಿತುಕೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಸಿಲ್ದಾರ ಬಜಂತ್ರಿ, ಸ್ಥಳೀಯ ಶಾಸಕ ದುರ್ಯೋಧನ ಐಹೊಳೆ ಇದಕ್ಕೆಲ್ಲ ಕಾರಣ. ಮಧ್ಯರಾತ್ರಿ ನಾನು ಎಲ್ಲಿಗೂ ಹೊಗಲು ಸಾಧ್ಯವಿಲ್ಲ. ಕೆಎಟಿ ತೀರ್ಪಿನವರೆಗೆ ನಾನು ಇಲ್ಲಿರಬೇಕೆಂದಿದ್ದೆ. ಸ್ಥಳೀಯ ಬಾಡಿಗೆ ಮನೆ ನೋಡಿದ್ದೆ. ಆದರೆ ಅದನ್ನೂ ನನಗೆ ನೀಡದಂತೆ ಮಾಲಿಕರನ್ನು ಬೆದರಿಸಿದ್ದಾರೆ. ಈ ರಾತ್ರಿ ನಾನು ಇಲ್ಲೇ ಹೊರಗಡೆ ಮಲಗುತ್ತೇನೆ ಎಂದು ತಿಳಿಸಿದರು.

ಶಾಸಕರು ಉದ್ದೇಶಪೂರ್ವಕವಾಗಿ ನನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಐಹೊಳೆ, ಹಾಸ್ಟೆಲ್ ನ್ನು ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ. ಹಾಗಾಗಿ ತಹಸಿಲ್ದಾರರನ್ನು ಅಲ್ಲಿಂದ ಕಾಲಿ ಮಾಡಿಸಲಾಗಿದೆ. ಇದರಲ್ಲಿ ನನ್ನದೇನೂ ಕೈವಾಡವಿಲ್ಲ ಎಂದಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ್ ನಿರ್ದೇಶನದಂತೆ ನಾವು ತಹಸಿಲ್ದಾರರ ಮನೆ ಕಾಲಿ ಮಾಡಿಸಿದ್ದಾಗಿ ಸಿಬ್ಬಂದಿ ಹೇಳುತ್ತಿದ್ದಾರೆ.

ಒಬ್ಬ ತಹಸಿಲ್ದಾರರನ್ನು ರಾತ್ರೋರಾತ್ರಿ ಬೀದಿಗೆ ಹಾಕಿದ್ದು ವಿಪರ್ಯಾಸವಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button