ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಖಾನಾಪುರ ತಾಲೂಕಿನ ನಂದಗಡ-ಖಾನಾಪುರ ನಡುವಿನ ಕೌಂದಲ್ ಗ್ರಾಮದ ಹತ್ತಿರ ಹೆದ್ದಾರಿ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾನಾಪುರ ವಲಯ ಅರಣ್ಯ ಇಲಾಖೆ ನಿರ್ಮಿಸಿದ ಟ್ರೀ ಪಾರ್ಕಗೆ ವರ್ಷ ಕಳೆದರೂ ಅರಣ್ಯ ಇಲಾಖೆ ನಿರ್ಲಕ್ಷದಿಂದ ಇನ್ನು ಉದ್ಘಾಟನೆ ಭಾಗ್ಯ ಕಂಡಿಲ್ಲ. ಯಾಕೆ ಉದ್ಘಾಟನೆಗೆ ಮೀನಾ-ಮೇಷ ಎಣಿಸುತ್ತಿರುವರು ಎಂಬುದು ಯಕ್ಷಪ್ರಶ್ನೆಯಾಗಿದೆ.
ಅರಣ್ಯ ಇಲಾಖೆ ಇದನ್ನು ಲೋಕಸಭೆ ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ಮುಂದೂಡಿತ್ತು. ಚುನಾವಣೆ ಮುಗಿದ ನಂತರ ಲೋಕಾರ್ಪಣೆಗೊಳಿಸಬೇಕಾಗಿತ್ತು. ಆದರೆ ಇವತ್ತಿಗೂ ಯಾವ ಅಧಿಕಾರಿಗಳೂ ಇದನ್ನು ಉದ್ಘಾಟಿಸಬೇಕು ಎನ್ನುವತ್ತ ಗಮನ ಹರಿಸುತ್ತಿಲ್ಲ. ಅರಣ್ಯ ಇಲಾಖೆ ನೀಡಿದ ಅನುದಾನ ಬಳಿಕೆಯಾಗಿದೆ. ಆದರೆ ಸಾರ್ವಜನಿಕರಿಗೆ ಅದನ್ನು ಮುಕ್ತ ಗೊಳಿಸಿಲ್ಲ. ಬಿಡುಗಡೆ ಭಾಗ್ಯ ಕಾಣದೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಹಲವು ಸಾಮಗ್ರಿಗಳು ತುಕ್ಕು ಹಿಡಿದು ಹಾಳಾಗುವ ಹಂತ ತಲುಪಿವೆ.
ಇಲ್ಲಿ 41 ಹೆಕ್ಟರ್ ಅಂದರೆ ಕನಿಷ್ಟ 102 ಏಕರೆ ಅರಣ್ಯ ಭೂಮಿ ಇಲಾಖೆಯ ಸ್ವಾಧೀನದಲ್ಲಿದೆ. ಇನ್ನಷ್ಟು ವಿಸ್ತೀರ್ಣ ಭೂಮಿಯಲ್ಲಿ ವಿಸ್ತರಿಸಬಹುದಿತ್ತು. ಆದರೆ ಕೇವಲ 5 ಎಕರೆ ವಿಸ್ತೀರ್ಣ ಮಾತ್ರ ಬಳಿಸಿ ಟ್ರೀ ಪಾರ್ಕ ನಿರ್ಮಾಣ ಮಾಡಲಾಗಿದೆ.
ಈ ಯೋಜನೆಗೆ ಅರಣ್ಯ ಇಲಾಖೆಯ ಹಿಂದಿನ ಹಿರಿಯ ಆಧಿಕಾರಿ ಎಸಿಎಫ್ ಸಿ.ಬಿ.ಪಾಟೀಲ ಮತ್ತು ಹಿಂದಿನ ಆರ್ ಎಫ್‍ಒ ಎಸ್.ಎಸ್.ನಿಂಗಾಣಿ ಅವರ ಪರಿಶ್ರಮ ಬಹಳ ಇದೆ. ಈ ಯೋಜನೆಗೆ ಇಲಾಖೆ ಅನುದಾನ ಮಾತ್ರ ದೊರಕಿದ್ದು ಕೇವಲ 20 ಲಕ್ಷ ರೂಪಾಯಿಗಳಲ್ಲಿ ಇದಕ್ಕೊಂದು ಒಳ್ಳೆಯ ರೂಪ ನೀಡಿದ್ದಾರೆ. ಇಲಾಖೆ ಯೋಜನೆಗಳಿಗೆ ಬಳಿಸಿ ಉಳಿಸಿದ ಹಣ ಕೂಡ ಇಲ್ಲಿ ಬಳಿಸಿ ಇನ್ನಷ್ಟು ಮೆರಗು ನೀಡಲಾಗಿದೆ. ಇದಕ್ಕೆ ಚಾಲನೆ ನೀಡಿದ ಎಸಿಎಫ್ ನಿವೃತ್ತರಾದರೂ ಟ್ರೀ ಪಾರ್ಕ್ ಕನಸು ಕಟ್ಟಿ ಕೊಟ್ಟಿದ್ದಾರೆ. ಈ ಕನಸಿಗೆ ರೂಪ ನೀಡಿದ ಆರ್ ಎಫ್‍ಒ ನಿಂಗಾಣಿ ಲೋಂಡಾಕ್ಕೆ ವರ್ಗಾವಣೆಯಾದರು. ಇದರಿಂದ ಟ್ರೀ ಪಾರ್ಕ್ ಕೆಲಸಗಳು ನಿಧಾನ ಗತಿಯಲ್ಲಿ ಸಾಗಿದವು ಎನ್ನಬಹುದು.
ಇಲ್ಲಿ ಏನೇನಿದೆ ?
ಟ್ರೀ ಪಾರ್ಕ್ ಒಳಗಡೆ ಕಾಲಿಟ್ಟರೆ ದಟ್ಟ ಅರಣ್ಯ ಪರಿಸರ ಅನುಭವವಾಗುತ್ತದೆ. ಟ್ರೀ ಪಾರ್ಕನಲ್ಲಿ ಹಲವು ವಿಧದ ಆಯುರ್ವೇದ ದಿವ್ಯ ಜೌಷಧಿಗಳ ಸಸಿಗಳನ್ನು ಬೆಳಿಸಿ ಪೋಷಣೆ ಮಾಡಲಾಗಿದೆ. ಒಳಗೆ ಕಾಲಿಟ್ಟರೆ ಹಲವು ದಿವ್ಯ ಜೌಷಧಿಗಳ ಪರಿಚಯ ಜನರಿಗೆ ಆಗುತ್ತದೆ. ಟ್ರೀ ಪಾರ್ಕನಲ್ಲಿ ಬರುವ ಮಕ್ಕಳು ಸಾಹಸದಲ್ಲಿ ತೊಡಗಿಕೊಳ್ಳಲು ಹಲವು ರೋಚಕ ಆಟದ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇದರಲ್ಲಿ ಪ್ರಮುಖವಾಗಿ ಹಗ್ಗ ನಡಿಗೆ ಮತ್ತು ಕಟ್ಟಿಗೆ ತುಂಡಿನ ಮೇಲಿನ ಸಾಹಸಗಳು ರೋಚಕವಾಗಿವೆ. ಮಕ್ಕಳಿಗೆ ಮಜವಾಗಿ ಆಡಲು ಜೋಕಾಲಿ ತಿರುಗುಣಿ ಮತ್ತು ಜಾರು ಬಂಡಿ ಕೂಡ ನಿರ್ಮಿಸಲಾಗಿದೆ. ಕುಟುಂಬ ಸಮೇತ ತೆರಳಿದರೆ ಮಜವಾಗಿ ಸಮಯ ಕಳೆಯಬಹುದಾಗಿದೆ. ಮಕ್ಕಳಂತು ಇಲ್ಲಿ ಬಂದರೆ ಅವರಿಗೆ ಅದು ಸ್ವರ್ಗವೆ ಸರಿ.
ನಿತ್ಯ ಪರಿಸರ ಮಾಲಿನ್ಯದಲ್ಲಿ ಸಂಚರಿಸುವರಿಗೆ ಶುದ್ಧ ಆಮ್ಲಜನಕ ಸೇವನೆ ಇಲ್ಲಿ ಮಾಡಬಹುದು. ಪಾರ್ಕ ಒಳಗಡೆ ಒಂದು ಬಂಡೆಯನ್ನು ಸುತ್ತಲಿನ ಗ್ರಾಮಗಳ ಜನರು ಹೊಂಡ ದೇವರು ಎಂದು ಪೂಜಿಸುತ್ತಾರೆ. ಇಲ್ಲಿ ಗ್ರಾಮೀಣ ಜನಪದ ಸೊಬಗಿನ ಸೊಗಡು ತೋರಿಸುವ ರಾಕ್ ಗಾರ್ಡನ್ ನಿರ್ಮಾಣ ಮಾದರಿ ಮಾಡಿದರೆ ಇದು ಇನ್ನೂ ಹೆಚ್ಚು ಆಕರ್ಷಣೆಯಾಗುತ್ತದೆ.
ನೂತನವಾಗಿ ಆಗಮಿಸಿರುವ ಎಸಿಎಫ್ ಶಶಿಧರ ಇದಕ್ಕೆ ಮುತುವರ್ಜಿ ವಹಿಸಿದ್ದಾರೆ. ಸರಕಾರದ ಹಣ ಇದಕ್ಕೆ ಸದ್ಬಳಕೆಯಾಗಿದೆ. ಈಗಿನ ಅಧಿಕಾರಿಗಳು ಉದ್ಘಾಟನೆಗೆ ಯಾಕೆ ಮುಂದಾಗುತ್ತಿಲ್ಲ. ಇವರಿಗೆ ಯಾವುದಾದರೂ ರಾಜಕೀಯ ಒತ್ತಡವಿದೆಯೋ? ಬೆಳಗಾವಿ ಹಿರಿಯ ಅಧಿಕಾರಿಗಳಾದ ಸಿಸಿಎಫ್ ಮತ್ತು ಡಿಎಫ್‍ಒ ಇದರತ್ತ ಚಿತ್ತ ಹರಿಸಬೇಕಿದೆ.
ಆದಷ್ಟು ಬೇಗ ಈ ಪಾರ್ಕ್ ಗೆ ಉದ್ಘಾಟನೆ ಭಾಗ್ಯ ದೊರೆಯಲಿ ಎಂದು ಜನರು ಆಶಿಸುತ್ತಾರೆ.
ಟ್ರೀ ಪಾರ್ಕನಲ್ಲಿ ಟಿಕೇಟ್, ಪುಡ್ ಕೋರ್ಟ್ ತಾಯಾರಿಸಲಾಗುತ್ತಿದೆ. ಕೆಲಸಗಳು ನಡೆಯುತ್ತಿವೆ. ಸಧ್ಯದಲ್ಲಿಯೇ ಟ್ರೀ ಪಾರ್ಕ ಉದ್ಘಾಟಿಸಲಾಗುವುದು
– ಶಶಿಧರ, ಖಾನಾಪುರ ವಲಯ ಎಸಿಎಫ್
ಟ್ರೀ ಪಾರ್ಕ್ ನಿರ್ಮಾಣವಾಗಿದ್ದರೂ ಅರಣ್ಯ ಇಲಾಖೆ ಉದ್ಘಾಟನೆಗೆ ಯಾಕೆ ಮುಂದಾಗುತ್ತಿಲ್ಲ. ತಕ್ಷಣ ಟ್ರೀ ಪಾರ್ಕ್ ಲೋಕಾರ್ಪಣೆಗೊಳಿಸಿ ಸಾರ್ವಜನಿಕರಿಗೆ ವಾಯು-ವಿಹಾರ ಕೈಗೊಳ್ಳಲು ಅನುವು ಮಾಡಿಕೊಡಬೇಕು.
-ಈಶ್ವರ.ಜಿ.ಸಂಪಗಾವಿ, ಗೌರವ ಅಧ್ಯಕ್ಷರು ಕಸಾಪ ಖಾನಾಪುರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ