23 ತಿಂಗಳಿನಿಂದ ಆಗಿಲ್ಲ ಗೌರವ ವನ್ಯಜೀವಿ ಪರಿಪಾಲಕರ ನೇಮಕ
ಎಂ.ಕೆ.ಹೆಗಡೆ, ಬೆಳಗಾವಿ – 23 ತಿಂಗಳಿನಿಂದ ರಾಜ್ಯದ ಬಹುಪಾಲು ಜಿಲ್ಲೆಗಳಿಗೆ ಗೌರವ ವನ್ಯಜೀವಿ ಪರಿಪಾಲಕರ ನೇಮಕವಾಗಿಲ್ಲ.
ಕೆಲವೇ ಕೆಲವು ಜಿಲ್ಲೆಗಳಿಗೆ ಗೌರವ ವನ್ಯಜೀವಿ ಪರಿಪಾಲಕರನ್ನು ನೇಮಿಸಲಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 4 (1) (bb) ಅಡಿಯಲ್ಲಿ ಮುಖ್ಯ ವನ್ಯಜೀವಿ ಪರಿಪಾಲಕರ ಶಿಫಾರಸ್ಸಿನ ಮೇರೆಗೆ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೆ ಗೌರವ ವನ್ಯಜೀವಿ ಪರಿಪಾಲಕರನ್ನು ನೇಮಕ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರವಿದೆ.
ಅಂದಾಜು ಪ್ರತಿ ಎರಡು ವರ್ಷಕ್ಕೊಮ್ಮೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಗೌರವ ವನ್ಯಜೀವಿ ಪರಿಪಾಲಕರನ್ನು ಎಲ್ಲ ರಾಜ್ಯ ಸರಕಾರಗಳು ನೇಮಿಸುತ್ತ ಬಂದಿವೆ. ಆದರೆ ಈಗಿರುವ ಸರಕಾರ ಮಾತ್ರ ಎಲ್ಲ ಜಿಲ್ಲೆಗಳಿಗೆ ಗೌರವ ವನ್ಯಜೀವಿ ಪರಿಪಾಲಕರನ್ನು ನೇಮಿಸುವ ಗೋಜಿಗೆ ಹೋಗಿಲ್ಲ. ಬದಲಿಗೆ ಕೆಲವೇ ಕೆಲವು ಜಿಲ್ಲೆಗಳಿಗೆ ಗೌರವ ವನ್ಯಜೀವಿ ಪರಿಪಾಲಕರನ್ನು ನೇಮಕ ಮಾಡಿ ಕೈ ತೊಳೆದುಕೊಂಡಿದೆ.
ಈ ಹಿಂದೆ ಆಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರಕಾರ ಎಲ್ಲ ಜಿಲ್ಲೆಗಳಿಗೆ ಗೌರವ ವನ್ಯಜೀವಿ ಪರಿಪಾಲಕರನ್ನು ನೇಮಕ ಮಾಡಿ ಜುಲೈ 2019 ರಲ್ಲಿ ಆದೇಶ ಹೊರಡಿಸಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಈ ಆದೇಶವನ್ನು ಸೆಪ್ಟೆಂಬರ್ 2019 ರಲ್ಲಿ ರದ್ದುಗೊಳಿಸಿತು. ನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲ್ಲ ಜಿಲ್ಲೆಗಳಿಗೆ ಗೌರವ ವನ್ಯಜೀವಿ ಪರಿಪಾಲಕರನ್ನು ನೇಮಿಸುವ ಬದಲು ಕೆಲವೇ ಕೆಲವು ಜಿಲ್ಲೆಗಳಿಗೆ ಅಂದರೆ ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಬೆಂಗಳೂರು ನಗರ ಜಿಲ್ಲೆಗಳಿಗೆ ಬೇರೆ ಬೇರೆ ದಿನಾಂಕಗಳಂದು ಅಂದರೆ ಅಕ್ಟೋಬರ್ 2019, ನವೆಂಬರ್ 2019, ಡಿಸೆಂಬರ್ 2019, ಜನೆವರಿ 2020, ಡಿಸೆಂಬರ್ 2020 ರಲ್ಲಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಆದರೆ ಇತರೆ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಅಷ್ಟೇ ಅಲ್ಲದೇ ಕೇವಲ ಈ ಜಿಲ್ಲೆಗಳಿಗೆ ಮಾತ್ರ ಗೌರವ ವನ್ಯಜೀವಿ ಪರಿಪಾಲಕರನ್ನು ನೇಮಿಸಿರುವ ಉದ್ದೇಶವೇನೆಂಬುದು ಅರ್ಥವಾಗುತ್ತಿಲ್ಲ.
ಗೌರವ ವನ್ಯಜೀವಿ ಪರಿಪಾಲಕರು ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಳ್ಳಬೇಟೆ ತಡೆ, ವನ್ಯಜೀವಿ ಆವಾಸಸ್ಥಾನಗಳಿಗೆ ಹಾನಿಯಾಗುವುದನ್ನು ತಪ್ಪಿಸುವುದು, ಸೂಕ್ತ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳನ್ನು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳನ್ನಾಗಿ ಘೋಷಿಸುವುದು ಹಾಗೂ ಮಾನವ ವನ್ಯಜೀವಿ ಸಂಘರ್ಷ ಪ್ರಕರಣಗಳಲ್ಲಿ ಪರಿಹಾರ ವಿತರಣೆ ಮತ್ತಿತರ ವಿಷಯಗಳಲ್ಲಿ ರಾಜ್ಯ ಸರಕಾರಕ್ಕೆ ಸಹಕಾರ ನೀಡುವುದು ಗೌರವ ವನ್ಯಜೀವಿ ಪರಿಪಾಲಕರ ಆದ್ಯ ಕರ್ತವ್ಯ.
ಆದ್ದರಿಂದ ವನ್ಯಜೀವಿ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆ ಹಾಗೂ ರಾಜ್ಯ ಸರಕಾರಕ್ಕೆ ಗೌರವ ವನ್ಯಜೀವಿ ಪರಿಪಾಲಕರ ಸಹಕಾರ ಅತ್ಯಗತ್ಯ. ಆದರೆ ಇಂತಹ ಪ್ರಮುಖ ಹುದ್ದೆಗಳನ್ನು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಖಾಲಿ ಬಿಟ್ಟಿರುವ ರಾಜ್ಯ ಸರಕಾರದ ನಡೆ ಅತ್ಯಂತ ದುರದೃಷ್ಟಕರ ಹಾಗೂ ಸರಕಾರದ ಈ ನಿರ್ಲಕ್ಷ್ಯತನ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಆಶಯವನ್ನೇ ಬಲಹೀನಗೊಳಿಸುತ್ತಿದೆ.
ಯಾವುದೇ ವ್ಯಕ್ತಿಯನ್ನು ಗೌರವ ವನ್ಯಜೀವಿ ಪರಿಪಾಲಕ ಎಂದು ನೇಮಕ ಮಾಡುವ ಸಮಯದಲ್ಲಿ ಕೆಲವು ಮಾನದಂಡಗಳನ್ನು ಅನುಸರಿಸಬೇಕಿರುವುದು ಕಡ್ಡಾಯವಾಗಿದೆ.
1) ವನ್ಯಜೀವಿ ಸಂರಕ್ಷಣೆಯ ಬಗ್ಗೆ ನಿಜವಾದ ಕಾಳಜಿ ಇರಬೇಕು
2) ಪ್ರಕೃತಿ ಹಾಗೂ ವನ್ಯಜೀವಿ ಸಂರಕ್ಷಣೆ ಹಿತಾಸಕ್ತಿಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿರಬಾರದು
3) ಅಧಿಕಾರಿ ವರ್ಗಕ್ಕೆ ಸಹಾಯ ಮಾಡುವಂತಹ ಸಾಮರ್ಥ್ಯ ಹೊಂದಿರಬೇಕು
4) ಸ್ಥಳೀಯ ಮಟ್ಟದಲ್ಲಿ ಸಂರಕ್ಷಣೆ ಸಂದೇಶವನ್ನು ತಿಳಿಸುವಂತಹ ಸಾಮರ್ಥ್ಯ ಹೊಂದಿರಬೇಕು.
ಇನ್ನಾದರೂ ಸರಕಾರವು ಎಚ್ಚೆತ್ತುಕೊಂಡು ರಾಜ್ಯದ ಉಳಿದ ಜಿಲ್ಲೆಗಳಿಗೆ ಗೌರವ ವನ್ಯಜೀವಿ ಪರಿಪಾಲಕರನ್ನು ತಕ್ಷಣವೇ ನೇಮಕ ಮಾಡಬೇಕಿರುವುದು ಅತ್ಯವಶ್ಯವಾಗಿದೆ. ವನ್ಯಜೀವಿ ಸಂರಕ್ಷಣೆಯ ಬಗ್ಗೆ ನಿಜವಾದ ಕಾಳಜಿ ಇರುವ ವ್ಯಕ್ತಿಗಳನ್ನೇ ಗೌರವ ವನ್ಯಜೀವಿ ಪರಿಪಾಲಕರ ಹುದ್ದೆಗೆ ನೇಮಿಸುವ ಕೆಲಸ ಆದ್ಯತೆಯ ಮೇಲೆ ಆಗಬೇಕಿದೆ.
ಬಹುತೇಕ ಜಿಲ್ಲೆಗಳಲ್ಲಿ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್; ಸಧ್ಯಕ್ಕಿಲ್ಲ ಲಾಕ್ ಡೌನ್ – ಬೊಮ್ಮಾಯಿ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ