ಪ್ರಗತಿವಾಹಿನಿ ಸುದ್ದಿ, ಮುಂಬೈ:
ಭಾಷಾವಾರು ಪ್ರಾಂತ್ಯದ ರಚನೆ ವೇಳೆ ನಮಗೆ ಅನ್ಯಾಯವಾಗಿದೆ. ಇದನ್ನು ಇನ್ನೆಷ್ಟು ಕಾಲ
ಸಹಿಸಿಕೊಳ್ಳುವುದು ಎಂದು ಪ್ರಶ್ನೆ ಮಾಡಿದ ಠಾಕ್ರೆ ನಮ್ಮವರ ಮೇಲೆ ನಡೆಯುತ್ತಿರುವ
ಅನ್ಯಾಯ, ದೌರ್ಜನ್ಯಗಳನ್ನು ಕಂಡು ಸುಮ್ಮನಿರುವಷ್ಟು ಹೇಡಿಗಳು ನಾವಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿದ್ದಾರೆ.
ಮುಂಬೈನ ಮಲಬಾರ್ ಹಿಲ್‌ನಲ್ಲಿರುವ ಸಹ್ಯಾದ್ರಿ ರಾಜ್ಯ ಅತಿಥಿ ಗೃಹದಲ್ಲಿ ಗಡಿವಿವಾದ
ಕುರಿತ ಮಹಾರಾಷ್ಟ್ರ ಕರ್ನಾಟಕ ಸೀಮಾ ವಿವಾದ ಸಂಘರ್ಷ ಆನಿ ಸಂಕಲ್ಪ ಪುಸ್ತಕ ಬಿಡುಗಡೆ
ಮಾಡಿ ಅವರು ಮಾತನಾಡಿದರು.
ಭಾಷಾವಾರು ಪ್ರಾಂತ್ಯದ ರಚನೆ ವೇಳೆ ನಮಗೆ ಅನ್ಯಾಯವಾಗಿದೆ. ಇದನ್ನು ಇನ್ನೆಷ್ಟು ಕಾಲ
ಸಹಿಸಿಕೊಳ್ಳುವುದು ಎಂದು ಪ್ರಶ್ನೆ ಮಾಡಿದ ಠಾಕ್ರೆ ನಮ್ಮವರ ಮೇಲೆ ನಡೆಯುತ್ತಿರುವ
ಅನ್ಯಾಯ, ದೌರ್ಜನ್ಯಗಳನ್ನು ಕಂಡು ಸುಮ್ಮನಿರುವಷ್ಟು ಹೇಡಿಗಳು ನಾವಲ್ಲ; ಹಿಂದೆ
ಬೆಳಗಾವಿಯಲ್ಲಿ ನಮ್ಮದೇ ಭಾಷಿಕರು ಗೆದ್ದು ಬರುತ್ತಿದ್ದರು. ಮಹಾನಗರ ಪಾಲಿಕೆಯೂ
ನಮ್ಮದೇ ಆಗಿತ್ತು. ಆದರೆ ಈಗ ಮಾತೃಭಾಷೆಗಾಗಿ ಹೋರಾಟ ನಡೆಸುವವರನ್ನು ದೇಶದ್ರೋಹಿಗಳಂತೆ
ಕಾಣಲಾಗುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವ
ಕೆಲಸವಾಗುತ್ತಿದೆ. ಇದು ದೌರ್ಜನ್ಯವಲ್ಲದೆ ಇನ್ನೇನು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಕರ್ನಾಟಕ ಆಕ್ರಮಿತ ಪ್ರದೇಶವನ್ನು ಮರಳಿ ಸೇರಿಸುವ ತನಕ ವಿಶ್ರಮಿಸುವುದಿಲ್ಲ. ನ್ಯಾಯಾಲಯದ ತೀರ್ಪು ನಮ್ಮ ಪರವಾಗಿಯೇ ಬರಲಿದೆ ಎಂಬ ವಿಶ್ವಾಸವಿದೆ ಎಂದೂ ಹೇಳಿದರು.
ಮಾತೃಭಾಷೆಗಾಗಿ ಹೋರಾಟ ಮಾಡುವವರನ್ನು ನಾಡದ್ರೋಹಿಗಳೆಂದು ಬಿಂಬಿಸುವ ಕರ್ನಾಟಕದವರಿಂದ ಯಾವ ನ್ಯಾಯವನ್ನು ನಿರೀಕ್ಷೆ ಮಾಡಲು ಸಾಧ್ಯ? ಎಂದು ಕುಟುಕಿದ ಅವರು, ಈಗ ಹಳೆಯ ಒಡಕುಗಳನ್ನೆಲ್ಲಾ ಮರೆತು ನಾಡಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ನಿಂತರೆ ಮಾತ್ರವೇ ನಮ್ಮ
ರಾಜ್ಯದ ಹಿತಾಸಕ್ತಿ ಕಾಯಲು ಸಾಧ್ಯ. ಇಲ್ಲವಾದರೆ ನಮ್ಮ ನಡುವಿನ ಒಡಕುಗಳನ್ನೇ
ಕರ್ನಾಟಕದವರು ಬಂಡವಾಳ ಮಾಡಿಕೊಂಡು ಅಲ್ಲಿರುವ ಮರಾಠಿ ಭಾಷಿಕರನ್ನು ಹೊಸಕಿ
ಹಾಕುವುದಕ್ಕೆ ಹುನ್ನಾರ ನಡೆಸುತ್ತಾರೆ ಎಂದು ಅವರು ಹೇಳಿದರು.
ಬೆಳಗಾಂವ್ ಅನ್ನು ಬೆಳಗಾವಿ ಎಂದು ನಾಮಕರಣ ಮಾಡಿದ್ದಾರೆ. ಬೆಳಗಾಂವ್ ನಲ್ಲಿ ಸುವರ್ಣ
ಸೌಧ ಕಟ್ಟಿ ಅಧಿವೇಶನ ಮಾಡುತ್ತಾರೆ. ೨ನೇ ರಾಜಧಾನಿ ಎಂದೂ ಘೋಷಿಸುತ್ತಾರೆ. ಮರಾಠಿ
ಭಾಷಿಕರ ಪ್ರದೇಶವನ್ನು ಈ ರೀತಿ ಮಾಡುವುದು ನ್ಯಾಯಾಂಗ ನಿಂದನೆಯಲ್ಲವೇ? ಕರ್ನಾಟಕ
ಸರ್ಕಾರ ಮರಾಠಿಗರ ಮೇಲೆ ನಿರಂತರ ದೌರ್ಜನ್ಯವೆಸಗುತ್ತಿದೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.
ಈಗ ಮರಾಠಿಗರು ನಮ್ಮ ತಾಕತ್ತು ತೋರಿಸುವ ಕಾಲ ಸನ್ನಿಹಿತವಾಗಿದೆ. ಮುಂದಿನ ದಿನಗಳು
ಆಶಾದಾಯವಾಗಿದ್ದು, ಸುಪ್ರೀಂ ಕೋರ್ಟಿನಲ್ಲಿರುವ ದಾವೆ ನಮ್ಮ ಪರವಾಗಿಯೇ ಬರಲಿದ್ದು,
ವಿಜಯ ಸಾಧಿಸಿಯೇ ತೀರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆ ಪುಸ್ತಕದಲ್ಲೇನಿದೇ?
ಡಾ. ದೀಪಕ ಪವಾರಸಂಪಾದಕತ್ವದಲ್ಲಿ ರಚಿಸಲಾಗಿರುವ ಈ ಪುಸ್ತಕದಲ್ಲಿ ಗಡಿವಿವಾದ ಬಗ್ಗೆ
ಮಹಾರಾಷ್ಟ್ರದ ನಿಲುವು, ೧೯೫೬-೨೦೨೧ವರೆಗೆ ನಡೆದ ಘಟನಾವಳಿ, ಕರ್ನಾಟಕ ಮಹಾರಾಷ್ಟ್ರ
ಗಡಿ ಸಂಘರ್ಷ, ಬೆಳಗಾವಿಯಲ್ಲಿ ಹುತಾತ್ಮ ದಿನ, ಕರಾಳ ದಿನಾಚರಣೆ, ಕರ್ನಾಟಕ
ಸರ್ಕಾರದಿಂದ ಮರಾಠಿಗರ ಮೇಲೆ ನಿರಂತರ ದೌರ್ಜನ್ಯ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್
ಬೆಳಗಾವಿ ಭೇಟಿ ವೇಳೆ ನಡೆದ ಘಟನೆ, ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ರಚಿಸಿರುವ
ವಿವಾದಿತ ವ್ಯಂಗ್ಯಚಿತ್ರ ಸೇರಿದಂತೆ ಹಲವಾರು ಅಂಶಗಳನ್ನು ಉಲ್ಲೇಖಿಸಲಾಗಿದೆ.
ಮುಂಬೈ ಕೇಂದ್ರಾಡಳಿತವಾಗಲಿ
ಮುಂಬೈ ನಮ್ಮದು. ಅದನ್ನು ಕರ್ನಾಟಕಕ್ಕೆ ಸೇರಿಸಬೇಕು. ವಿವಾದ ಬಗೆಹರಿಯುವವರೆಗೆ ಮುಂಬೈಯನ್ನು ಕೇಂದ್ರಡಾಳಿತ ಪ್ರದೇಶ ಮಾಡಬೇಕಿದೆ.
-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ
ಬಿಟ್ಟುಕೊಡುವ ಪ್ರಶ್ನೆ ಇಲ್ಲ
ಕರ್ನಾಟಕದ ಒಂದಿಂಚು ನೆಲವನ್ನೂ ಬಿಟ್ಟುಕೊಡುವ ಪ್ರಶ್ನೆ ಬರುವುದಿಲ್ಲ. ವಿವಾದ ನ್ಯಾಯಲಯದಲ್ಲಿರುವುದರಿಂದ ನಾವು ಹೆಚ್ಚು ಮಾತಾನಡುತ್ತಿಲ್ಲ. ಉದ್ಧವ್ ಠಾಕ್ರೆ ಅನಗತ್ಯವಾಗಿ ವಿವಾದ ಕೆದಕುವ ಕೆಲಸ ಮಾಡುತ್ತಿದ್ದಾರೆ.
-ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
ಮರಾಠಿಗರನ್ನು ಓಲೈಸುವ ಕೆಲಸ:
ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುವಲ್ಲಿ ಶಿವಸೇನೆ ಸರ್ಕಾರ ಸಂಪೂರ್ಣ ಮುಗ್ಗರಿಸಿದೆ.
ಹಾಗಾಗಿ ಜನರ ಮನಸ್ಸನ್ನು ಬೇರೆಡೆ ಸೆಳೆಯುವುದಕ್ಕಾಗಿಯೇ ಇದೀಗ ಗಡಿವಿವಾದ ವಿಷಯವನ್ನು
ಮುಂದಿಟ್ಟುಕೊಂಡು ಪೋಸ್ ಕೊಡುತ್ತಿದೆ. ಮುಂಬೈನಲ್ಲಿ ಬುಧವಾರ ಪುಸ್ತಕ ಬಿಡುಗಡೆ ಮಾಡುವ
ಮೂಲಕ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮರಾಠಿಗರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ.
ನಾವು ಈ ವಿಷಯಕ್ಕೆ ಹೆಚ್ಚಿನ ಪ್ರಚಾರ ಕೊಡುವ ಅಗತ್ಯವಿಲ್ಲ. ನಮ್ಮ ರಾಜ್ಯದ ಹಿತಾಸಕ್ತಿ
ಕಾಯುವುದಕ್ಕೆ ನಾವೆಲ್ಲಾ ಸದಾ ಸಿದ್ಧರಿದ್ದೇವೆ. ನಾವು ಗಡಿಸಚಿವರನ್ನು ನೇಮಿಸುವ
ಅವಶ್ಯಕತೆ ಇಲ್ಲ.
-ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು.
ಅದೆಲ್ಲಾ ಮುಗಿದ ಅಧ್ಯಾಯ
ಪದೇ ಪದೇ ಕಾಲು ಕೆದರಿಕೊಂಡು ಏನಾದರೊಂದು ಗಡಿ ವಿಚಾರದಿಂದ ತನ್ನ ರಾಜಕೀಯ ಬೇಳೆ
ಬೇಯಿಸಿಕೊಳ್ಳುತ್ತಿರುವ ಮಹಾರಾಷ್ಟ್ರದ ರಾಜಕಾರಣಿಗಳಿಗೆ ನಮ್ಮ ಮಾಧ್ಯಮಗಳು ಹೆಚ್ಚಿನ
ಪ್ರಚಾರ ನೀಡದಿರುವುದೇ ಅವರಿಗೆ ಮಾಡುವ ಶಾಸ್ತಿ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ.
ಇದರಲ್ಲಿ ಮಹಾಜನ ವರದಿಯೇ ಅಂತಿಮ. ಎಂಇಎಸ್ ಎಲ್ಲಾ ಈಗ ಮುಗಿದ ಅಧ್ಯಾಯ ಆ ಬಗ್ಗೆ ತಲೆ
ಕೆಡಿಸಿಕೊಳ್ಳುವುದೇ ಬೇಡ
-ಶ್ರೀಮಂತ ಪಾಟೀಲ, ಜವಳಿ ಸಚಿವರು
ಅಲ್ಲಿನವರದ್ದು ಗಡಿ ವಿಚಾರದಲ್ಲಿ ರಾಜಕೀಯ
ಮಹಾರಾಷ್ಟ್ರದಲ್ಲಿ ಗಡಿವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಹಿಂದಿನಿಂದಲೂ
ರೂಢಿಯಲ್ಲಿದೆ. ಅವರ ನೆಲದಲ್ಲಿ ಅವರು ಪುಸ್ತಕ ಬಿಡುಗಡೆ ಮಾಡಿದರೆ ಅದಕ್ಕೆ ನಾವ್ಯಾಕೆ
ಪ್ರಚಾರ ಕೊಡಬೇಕು? ಬೆಳಗಾವಿ ನಮ್ಮದು. ನಾಡು ನುಡಿ ವಿಚಾರಕ್ಕೆ ಬಂದಾಗ ನಮ್ಮಲ್ಲಿ
ಕೂಡಾ ಪಕ್ಷ ಮರೆತು ಒಗ್ಗಟ್ಟಾಗಿ ನಾವೆಲ್ಲಾ ನಿಂತಿದ್ದೇವೆ. ಮುಂದೆಯೂ ನಿಲ್ಲುತ್ತೇವೆ
-ಈರಣ್ಣ ಕಡಾಡಿ, ಸಂಸದರು
ಉದ್ಧವ ಠಾಕ್ರೆ ಸರ್ಕಾರ ಫೇಲ್
ನಮ್ಮದು ಅಭಿವೃದ್ಧಿ ರಾಜಕೀಯವಾದರೆ ಅಲ್ಲಿ ಮಹಾರಾಷ್ಟ್ರದಲ್ಲಿ ಗಡಿವಿವಾದವನ್ನೇ
ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಉದ್ಧವ ಠಾಕ್ರೆ ಸರ್ಕಾರ ಫೇಲ್ ಆಗಿದ್ದು,
ಮರಾಠಿ ಜನರನ್ನು ಒಲಿಸಿಕೊಳ್ಳುವುದಕ್ಕೆ ಈ ವಿಷಯವನ್ನು ಹೆಚ್ಚು ಹೆಚ್ಚಾಗಿ
ಬಳಸಿಕೊಳ್ಳಲಾಗುತ್ತಿದೆ. ಅದಕ್ಕೆ ವಿಶೇಷ ಪ್ರಚಾರ ನೀಡದೆ ಇರುವುದೇ ನಾವು ಮಾಡಬೇಕಾದ
ಕೆಲಸ
-ಮಹೇಶ ಕುಮಟಳ್ಳಿ, ಅಧ್ಯಕ್ಷ, ಕೊಳಚೆ ನಿರ್ಮೂಲನೆ ಮಂಡಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ