*ಪತಿ, ಅತ್ತೆ ಕಿರುಕುಳ: ವಿಡಿಯೋ ಮಾಡಿಟ್ಟು ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಪತಿ ಹಾಗೂ ಅತ್ತೆಯ ನಿರಂತರ ಕಿರುಕುಳಕ್ಕೆ ನೊಂದ ಮಹಿಳೆ ಒಂದೂವರೆ ವರ್ಷದ ಮಗುವಿನೊಂದಿಗೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರ ಬಳಿ ಈ ದುರಂತ ಸಂಭವಿಸಿದೆ. ಮಹಾದೇವಿ (29) ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು. ಸಾವಿಗೂ ಮುನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಟ್ಟಿದ್ದು, ಪತಿ ಹಾಗೂ ಅತ್ತೆ ನೀಡುತ್ತಿದ್ದ, ಕಿರುಕುಳ, ಹಿಂಸೆಯ ಬಗ್ಗೆ ವಿವರಿಸಿದ್ದಾರೆ.
ಮೂರು ವರ್ಷಗಳ ಹಿಂದಷ್ಟೇ ಸೀಬೇಹಳ್ಳಿಯ ಕುಮಾರ್ ಜೊತೆ ಮಹಾದೇವಿ ವಿವಾಹವಾಗಿದ್ದರು. ಕುಮಾರ್ ಗೆ ಇದು ಎರಡನೇ ಮದುವೆಯಾಗಿತ್ತು. ಕುಮಾರ್ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಮಹಾದೇವಿಯನ್ನು ಎರಡನೇ ಮದುವೆಯಾಗಿದ್ದ. ಅದಾಗ್ಯೂ ಪತಿ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆಗಾಗಿ ಪೀಡಿಸುವುದು, ಬಾಯಿಗೆ ಬಂದಂತೆ ಮಾತನಾಡುವುದು, ಹಿಂಸಿಸುವುದು, ಅನಗತ್ಯ ಆರೋಪ ಮಾಡುವುದು, ಅನುಮಾನಪಡುವುದು ಮಾಡುತ್ತಿದ್ದರಂತೆ.
ಪತಿ, ಅತ್ತೆ ಕಿರುಕುಳ ತಾಳಲಾರದೇ 15 ದಿನಗಳ ಹಿಂದೆ ಮಗುವಿನೊಂದಿಗೆ ತವರು ಮನೆಗೆ ಹೋಗಿದ್ದ ಮಹಾದೇವಿ, ನಿನ್ನೆ ಪೊಲೀಸ್ ಠಾಣೆಗೆ ದೂರು ನೀಡಲು ಮಗುವಿನೊಂದಿಗೆ ಹೋಗಿದ್ದಾಳೆ. ದೂರು ನೀಡಿದ ಬಳಿಕ ಮನೆಗೆ ವಾಪಾಸ್ ಆಗುವಾಗ ಮೊಬೈಲ್ ನಲ್ಲಿ ವಿಡಿಯೋ ಮಾಡಿಟ್ಟು ಪತಿ, ಅತ್ತೆಯ ಕಿರುಕುಳದ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾಲೆ. ಅಲ್ಲದೇ ತನ್ನಿಂದ ತನ್ನ ತಂದೆ-ತಾಯಿ, ತವರು ಮನೆಯವರಿಗೂ ತೊಂದರೆ ಬೇಡ. ತನ್ನ ಪತಿ ಕುಮಾರ್ ತನ್ನ ತಂದೆ-ತಾಯಿ, ತಮ್ಮನಿಗೂ ಕೊಲೆ ಬೆದರಿಕೆ ಹಾಕಿದ್ದಾನೆ. ನನ್ನಿಂದ ಯಾರಿಗೂ ಸಮಸ್ಯೆ ಬೇಡ. ನನ್ನ ಸಾವಿಗೆ ಪತಿ ಹಾಗೂ ಅತ್ತೆಯೇ ಕಾರಣ ಎಂದು ರೆಕಾರ್ಡ್ ಮಾಡಿಟ್ಟು ಮಗುವಿನೊಂದಿಗೆ ಕಾವೇರಿ ನದಿಗೆ ಹಾರಿದ್ದಾರೆ.

