Belagavi NewsBelgaum NewsKannada NewsKarnataka NewsPolitics

*ಕೌಟುಂಬಿಕ ಜವಾಬ್ದಾರಿಯ ಜೊತೆಗೆ ಕೃಷಿ ಚಟುವಟಿಕೆಗೂ ಮಹಿಳೆ ಸಕ್ರಿಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್* 

ಪ್ರಗತಿವಾಹಿನಿ ಸುದ್ದಿ: ಭಾರತದ ಗ್ರಾಮೀಣ ಭಾಗದಲ್ಲಿ ಶೇಕಡ 80% ರಷ್ಟು ಮಹಿಳೆಯರು ಜೀವನೋಪಾಯಕ್ಕಾಗಿ ಕೃಷಿಯನ್ನೆ ಅವಲಂಬಿಸಿದ್ದು, ತನ್ನ ಹೆಸರಿಗೆ ಒಂದಿಂಚೂ ಭೂಮಿ ಇಲ್ಲದಿದ್ದರೂ ಕೌಟುಂಬಿಕ ಜವಾಬ್ದಾರಿಯ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾಳೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕೃಷಿಯಲ್ಲಿ ಮಹಿಳೆ: ಸುಸ್ಥಿರ ಅಭಿವೃದ್ಧಿ ಮತ್ತು ಆಹಾರ ಭದ್ರತೆ ಕುರಿತು ಕೃಷಿ ವಿಚಾರ ಸಂಕಿರಣವನ್ನು  ಉದ್ಘಾಟಿಸಿ ಸಚಿವರು ಮಾತನಾಡಿದರು. 

ನಮ್ಮ ದೇಶದಲ್ಲಿ ಮಹಿಳೆಯರು ಕೃಷಿಯ ಎಲ್ಲಾ ಹಂತಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೇವಲ ಕೃಷಿ ಕ್ಷೇತ್ರ ಅಷ್ಟೇ ಅಲ್ಲ, ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ ಎಂದರು. 

Home add -Advt

ಸರ್ಕಾರಕ್ಕೆ ಮಠ ಮಾನ್ಯಗಳ ಕಾರ್ಯವೇ ಸ್ಫೂರ್ತಿ

ಅಕ್ಷರ ದಾಸೋಹ ಹಾಗೂ ಅನ್ನ ದಾಸೋಹದ ಮೂಲಕ ಬಡಜನರಿಗೆ ನೆರವಾಗುತ್ತಿರುವ ಮಠ ಮಾನ್ಯಗಳ ಸೇವಾ ಕಾರ್ಯ ಸರ್ಕಾರಕ್ಕೆ ಸ್ಫೂರ್ತಿ. ಯಾವುದೇ ಸರ್ಕಾರಗಳು ಬಂದರೂ ಮಠಗಳ ಕಾರ್ಯವನ್ನು ಅನುಕರಣೆ ಮಾಡುತ್ತವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಅನ್ನ ದಾಸೋಹ ಮತ್ತು ಜ್ಞಾನದಾಸೋಹಗಳನ್ನು ಒಟ್ಟೊಟ್ಟಿಗೆ ನೀಡುವ ಮೂಲಕ ಬಡ ಮಕ್ಕಳಿಗೂ ಕಲಿಯುವ ಅವಕಾಶವನ್ನು ಕಲ್ಪಿಸಿದ್ದು ನಮ್ಮ ಮಠಗಳು. ಸರ್ಕಾರದಿಂದ ಮಾಡಲಾಗದಂತಹ ಮಹತ್ಕಾರ್ಯವನ್ನು ಮಠಗಳು, ಧಾರ್ಮಿಕ ಸಂಸ್ಥೆಗಳು ಮಾಡುತ್ತ ಬಂದಿವೆ. ಮಠ ಮಾನ್ಯಗಳು, ಧಾರ್ಮಿಕ ಸಂಸ್ಥೆಗಳು ಸರಕಾರಕ್ಕೆ ಸಮಾನಾಂತರವಾಗಿ ಶೈಕ್ಷಣಿಕ ಸೇವೆಯನ್ನು ನೀಡುತ್ತ ಬಂದಿವೆ. ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸುವ ಕಾರ್ಯ ಮಠಗಳಿಂದ ಆಗುತ್ತಿದೆ ಎಂದು ಹೇಳಿದರು. 

ಜೆಎಸ್ ಎಸ್ ಮಠ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಕೇವಲ ಮೈಸೂರು ಭಾಗದ ಮಕ್ಕಳಿಗೆ ಸೀಮಿತವಾಗದೆ ವಿವಿಧ ರಾಜ್ಯಗಳ ಮಕ್ಕಳು ಇಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಮಾಜಿಕ ಬದ್ಧತೆ ಹೊಂದಿರುವ ಜೆಎಸ್ ಎಸ್ ಸಂಸ್ಥೆ ಅಕ್ಷರ, ಅನ್ನದ ಜೊತೆಗೆ ಸಂಸ್ಕೃತಿಯನ್ನು ಕಲಿಸುತ್ತಿದೆ ಎಂದರು‌. 

ಪ್ರಶಸ್ತಿ ಪ್ರದಾನ ಮಾಡಿದ ಸಚಿವರು

ಈ ವೇಳೆ ಸಚಿವರು ಪ್ರಗತಿಪರ ರೈತರಿಗೆ ಹಾಗೂ ಪ್ರಗತಿಪರ ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಕ್ರಾಪ್ ಇಂಪ್ರುಮೆಂಟ್, ಕ್ರಾಪ್ ಪ್ರೊಡಕ್ಷನ್, ಕ್ರಾಪ್ ಪ್ರೊಟೆಕ್ಷನ್ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಈ ವೇಳೆ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದರೆ, ವಾಟಾಳು ಸೂರ್ಯಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಕನಕಪುರದ ಶ್ರೀ ದೇಗುಲ ಮಠದ ಡಾ.ಶ್ರೀ ಚನ್ನಬಸವ ಸ್ವಾಮಿಗಳು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸಚಿವರಾದ ಡಾ.ಎಚ್.ಸಿ.‌ಮಹದೇವಪ್ಪ, ಡಾ.ಶರಣ್ ಪ್ರಕಾಶ್ ಪಾಟೀಲ್, ಡಾ.ಎಂಸಿ ಸುಧಾಕರ್, ಶಾಸಕರಾದ ಎ.ಆರ್.ಕೃಷ್ಣ ಮೂರ್ತಿ ಮಂಥರ್ ಗೌಡ, ಡಿ.ರವಿ ಶಂಕರ್, ಗಣೇಶ್ ಪ್ರಸಾದ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಪುಷ್ಪ ಅಮರ್ ನಾಥ್, ಮಾಜಿ ಶಾಸಕಿ ಗೀತಾ ಮಹದೇವ ಪ್ರಸಾದ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Related Articles

Back to top button