Kannada NewsKarnataka News
ಬೇರೆಯವರ ಬೆಳವಣಿಗೆಗೆ ಸಂಕಟಪಡದೆ, ಹಾರೈಸುತ್ತ ನಾಲ್ಕು ದಿನ ಬದುಕುವುದೇ ಜೀವನ – ಲಕ್ಷ್ಮೀ ಹೆಬ್ಬಾಳಕರ್
ಅಥಣಿಯ ಗಚ್ಚಿನ ಮಠದ ಮಹಿಳಾ ಸಮಾವೇಶ
ಪ್ರಗತಿವಾಹಿನಿ ಸುದ್ದಿ, ಅಥಣಿ – ರಾಜಕೀಯ, ಸಾಮಾಜಿಕ, ಸಾರ್ವಜನಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ನನ್ನ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಬಸವಾದಿ ಶಿವಶರಣರ ಪ್ರೇರಣೆಯಿಂದ ಎಲ್ಲವನ್ನೂ ಸಮರ್ಥವಾಗಿ ಎದುರಿಸಿ ಮುಂದೆ ಬಂದಿರುವೆ ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಅಥಣಿಯ ಗಚ್ಚಿನ ಮಠದ ಶ್ರೀ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಹಾಗೂ ಶ್ರೀಮಠದ ಶ್ರೀ ಶಿವಬಸವ ಸ್ವಾಮಿಗಳ ನಿರಂಜನ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಾಮಾಜಿಕ, ರಾಜಕೀಯ ಜೀವನದಲ್ಲಿರುವವರಿಗೆ ಆರೋಪಗಳು ಬರುವುದು ಸಾಮಾನ್ಯ ಆರೋಪಗಳಿಗೆ ಹೆದರಿ ಹಿಂದೆ ಸರಿಯದೆ ಅವುಗಳನ್ನು ಸಮರ್ಥವಾಗಿ ಎದುರಿಸಿ ಮುಂದೆ ಬರಬೇಕು ಎಂದ ಅವರು, ನಾನು ರಾಜಕೀಯ ಜೀವನದಲ್ಲಿ ಮುಂದೆ ಬರಬೇಕಾದರೆ ಇಂತಹ ಸಾಕಷ್ಟು ಸವಾಲುಗಳನ್ನು ಸಮರ್ಥವಾಗಿ ಎದರಿಸಿದ್ದೇನೆ ಹೊರತು ಸವಾಲುಗಳಿಗೆ ಹೆದರಿ ಹಿಂದೆ ಸರಿಯಲಿಲ್ಲ ಎಂದರು. ಯಾವುದೇ ಕ್ಷೇತ್ರದಲ್ಲಿ ಆಸಕ್ತಿ ಇರಲಿ, ಧೈರ್ಯದಿಂದ ಮುನ್ನುಗ್ಗಿ ಆಗ ಮಾತ್ರ ಸಾಧಕರಾಗಲು ಸಾಧ್ಯ ಎಂದು ಸಮಾವೇಶದಲ್ಲಿ ಉಪಸ್ಥಿತರಿದ್ದ ಮಹಿಳೆಯರಿಗೆ ಸಲಹೆ ನೀಡಿದರು.
ತಮ್ಮ ವ್ಯಯಕ್ತಿಕ ಜೀವನ, ಆಸೆ, ಆಕಾಂಕ್ಷಿಗಳನ್ನು ಬದಿಗೊತ್ತಿ, ಹುಟ್ಟೂರು, ಸ್ವಂತ ಮನೆ, ತಂದೆ, ತಾಯಿ, ಬಂಧುಗಳನ್ನು ಬಿಟ್ಟು ಬಸವಾದಿ ಶಿವಶರಣರ ಕಾರ್ಯಗಳ ಅನುಷ್ಠಾನಕ್ಕಾಗಿ ಶ್ರೀ ಮರುಘಾ ಶರಣರು ಹೇಳಿದ ಮಠಕ್ಕೆ ಸ್ವಾಮೀಜಿಯಾಗಿ ದೀಕ್ಷೆ ಸ್ವೀಕರಿಸುತ್ತಿರುವ ಶ್ರೀ ಶಿವಬಸವ ಸ್ವಾಮಿಗಳ ನಿರ್ಧಾರ ನಾವೆಲ್ಲರೂ ಮೆಚ್ಚುವಂತಹದ್ದು ಎಂದರು.
ನನಗೂ ಮಗನಿದ್ದಾನೆ ಆದರೆ ನಾನೆಂದು ಸ್ವಾಮೀಜಿ ಆಗಲು ನಾನು ಒಪ್ಪುವುದಿಲ್ಲ ಇದೇ ರೀತಿ ಇಲ್ಲಿರುವ ಸಾವಿರಾರು ತಾಯಂದಿರುಗಳಿಗೂ ಕೂಡ ಒಬ್ಬರು, ಇಬ್ಬರು ಅಥವಾ ಮೂರು ಗಂಡು ಮಕ್ಕಳಿದ್ದರೂ ಕೂಡ ನಾವ್ಯಾರೂ ಮಠದ ಸ್ವಾಮಿಗಳಾಗಲು ಒಪ್ಪುವುದಿಲ್ಲ ಎಂದ ಅವರು ಇಲ್ಲಿರುವ ಸ್ವಾಮಿಗಳು ಕೂಡ ಅವರ ತಾಯಂದಿರಗೆ ಮುದ್ದಿನ ಮಕ್ಕಳೆ ಆಗಿದ್ದರೂ ಕೂಡ ಸಮಾಜ ಸುಧಾರಣೆಗೆ ತಮ್ಮ ಮಕ್ಕಳನ್ನು ಮಠಕ್ಕೆ ಬಿಟ್ಟು ಕೊಟ್ಟಿದ್ದಾರೆ ಇಂತಹ ತಾಯಂದಿರುಗಳಿಗೆ ನನ್ನ ನಮಸ್ಕಾರ ಎಂದರು.
ಸ್ವಾಮಿಗಳ ಪಾದ ನಮ್ಮ ತಲೆಯ ಮೇಲಿದ್ದಾಗ ಅದು ಸ್ವರ್ಗಕ್ಕೆ ಸಮಾನ. ಸ್ವಾಮಿಜಿಗಳು ಸಮಾಜ ಸುಧಾರಣೆಗಾಗಿ ದೀಕ್ಷೆ ತೆಗೆದುಕೊಂಡು ಬಂದಿದ್ದಾರೆ. ಇಂತವರ ಪಾದಸ್ಪರ್ಶದಿಂದ ನಮ್ಮ ನಾಡು ಪಾವನವಾಗಿದೆ. ಇಂತವರು ಇರೋದ್ರಿಂದಲೇ ನಮ್ಮ ನಾಡು ಪುಣ್ಯ ಭೂಮಿಯಾಗಿ ಉಳಿದಿದೆ. ನಾವು ಸಾಧ್ಯವಾದಷ್ಟು ನಿಸ್ವಾರ್ಥದಿಂದ ಬದುಕೋಣ ಎಂದು ಹೆಬ್ಬಾಳಕರ್ ಹೇಳಿದರು.
ಸಾಧಿಸುವ ಛಲ ಇದ್ದರೆ ಸಾಕು ಸಾಕಷ್ಟು ಅವಕಾಶಗಳು ನಮ್ಮ ಮುಂದೆ ಬರುತ್ತವೆ. ಪ್ರಾರಂಭದಲ್ಲಿ ಸ್ವಲ್ಪ ಹಿನ್ನಡೆಯಾದರೂ ಕೂಡ ಸಾಧಿಸುವ ಛಲ ನಮ್ಮನ್ನು ಸಾಧನೆ ಹಾದಿಗೆ ಕೊಂಡೋಯ್ಯುತ್ತದೆ ಎಂದ ಅವರು ಕೃಷಿ, ಸಾಮಾಜಿಕ, ಶೈಕ್ಷಣಿಕ, ಸೇವಾ, ವೈದ್ಯಕೀಯ, ವ್ಯಾಪಾರ, ಉದ್ಯಮದಂತಹ ಅನೇಕ ಕ್ಷೇತ್ರಗಳಿದ್ದು, ಮಹಿಳೆಯರು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹೆಣ್ಣು ಎಂದರೆ ಸಂಘರ್ಷ. ಹುಟ್ಟಿನಿಂದ ಸಾವಿನವರೆಗೂ ನಗುತ್ತಲೇ ಮಕ್ಕಳಿಗಾಗಿ, ಗಂಡನಿಗಾಗಿ, ಅಕ್ಕಂದಿರಿಗಾಗಿ, ಅಣ್ಣ ತಮ್ಮಂದಿರಿಗಾಗಿ, ತಂದೆ, ತಾಯಂದಿರಿಗಾಗಿ ನಿಸ್ವಾರ್ಥತೆಯಿಂದ ಜೀವನ ಪೂರ್ತಿ ದುಡಿಯುತ್ತಾಳೆ. ಶಾರೀರಿಕವಾಗಿ ನಾವು ದುರ್ಬಲರಿದ್ದರೂ ಮಾನಸಿಕವಾಗಿ ಪುರುಷರಿಗಿಂತ 10 ಪಟ್ಟು ನಾವು ಶಕ್ತಿಯುತವಾಗಿದ್ದೇವೆ. ಕಿತ್ತೂರು ರಾಣಿ ಚನ್ನಮ್ಮ ಅಂದು ಮೊಟ್ಟ ಮೊದಲು ಹೋರಾಡದಿದ್ದರೆ ಇಂದಿಗೂ ನಮಗೆ ಸ್ವಾತಂತ್ರ್ಯ ಕನಸಾಗಿಯೇ ಇರುತ್ತಿತ್ತು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನನಗೆ 10-12 ವರ್ಷದಿಂದ ಕಣ್ಣಲ್ಲಿ ನೀರು ಬರುತ್ತಲೇ ಇಲ್ಲ. ರಾಜಕಾರಣದಲ್ಲಿ ದಿನನಿತ್ಯ ಸಂಘರ್ಷ, ದಿನನಿತ್ಯ ಆರೋಪ, ದಿನನಿತ್ಯ ಸವಾಲು ಯಾವುದೇ ಕ್ಷೇತ್ರವೇ ಇರಲಿ ಪ್ರತಿ ಕ್ಷೇತ್ರದಲ್ಲಿ ಮಹಿಳೆ ಸಂಘರ್ಷ ಮಾಡಿಯೇ ಮುಂದೆ ಬರಬೇಕಾಗಿದೆ. ಪುರುಷರು 100 ಮೀಟರ್ ಓಡಿದರೆ ನಾಯಕರಾಗುತ್ತಾರೆ. ಮಹಿಳೆ ಸಾವಿರ ಮೀಟರ್ ಓಡಿದರೆ ಮಾತ್ರ ಸಮಾಜ ನಾಯಕಿ ಎಂದು ಒಪ್ಪಿಕೊಳ್ಳುತ್ತೆ. ಜೀವನ ಎನ್ನುವುದು ಆಕಸ್ಮಿಕ. ಇದು ಶಾಶ್ವತವಲ್ಲ. ಇದ್ದಷ್ಟು ದಿನ ಬೇರೆಯವರ ಬೆಳವಣಿಗೆಯನ್ನು ಹಾರೈಸುತ್ತ, ಸಂಕಟಪಡದೆ ನಾಲ್ಕು ಜನರಿಗೆ ಆದರ್ಶವಾಗಿ ಬದುಕಿದರೇ ಅದೇ ಜೀವನ ಎಂದು ಅವರು ಹೇಳಿದರು.
ಸಮಾವೇಶದ ಸಾನಿಧ್ಯವನ್ನು ಚಿತ್ರದುರ್ಗದ ಡಾ.ಶಿವಮುರ್ತಿ ಮುರುಘಾ ಶರಣರು ವಹಿಸಿದ್ದರು. ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿದರು. ರಾಜ್ಯ ಮುಜರಾಯಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ, ಕೃಷಿ ಸಾಧಕಿ ಕವಿತಾ ಮಿಶ್ರಾ, ಬೀದರನ ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಮಾತಾಜಿ, ರೇಷ್ಮೇ ಮಾರಾಟ ಮಂಡಳಿ ನಿಗಮದ ಅಧ್ಯಕ್ಷೆ ಸವೀತಾ ಅಮರಶೆಟ್ಟಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಸೇರಿದಂತೆ ನಾಡಿನ ಅನೇಕ ಮಠಗಳ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ ಸ್ವಾಗತಿಸಿದರು, ಶಿಕ್ಷಕಿ ಪ್ರಿಯಂವದಾ ಅಣೆಪ್ಪನವರ ನಿರೂಪಿಸಿದರು. ಝೀ ಕನ್ನಡ ವಾಹಿನಿಯ ಸರಿಗಮಪ ಚಾಂಪಿಯನ್ನರಿಂದ ಸಂಗೀತ ಸಂಭ್ರಮ ನಡೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ