Kannada NewsKarnataka NewsLatest

*ರಂಗಧಾಮದಲ್ಲಿ ಯಶಸ್ವಿಯಾಗಿ ನಡೆದ ಯಕ್ಷಗೆಜ್ಜೆಯ ವಾರ್ಷಿಕೋತ್ಸವ*

ಪ್ರಗತಿವಾಹಿನಿ ಸುದ್ದಿ: ಶಿರಸಿ: ವರುಷದಿಂದ ವರುಷಕ್ಕೆ ಹರುಷವನ್ನು ಹೆಚ್ಚಿಸುತ್ತಲಿರುವ ಯಕ್ಷಗೆಜ್ಜೆಯ ವಾರ್ಷಿಕೋತ್ಸವವು ಸಂಭ್ರಮದಲ್ಲಿ ನಡೆಯಿತು.

ನಗರದ ರಂಗಧಾಮದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅತ್ಯಂತ ಸಂಭ್ರಮದಿಂದ ಜರುಗಿತು. ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಮಕ್ಕಳಿಂದ ಪೂರ್ವ ರಂಗ, ಮಕ್ಕಳ ಯಕ್ಷಗಾನ ಹಾಗೂ ಮಹಿಳಾ ಯಕ್ಷಗಾನ ಇವೆಲ್ಲ ವಾರ್ಷಿಕೋತ್ಸವದ ಒಂದು ಭಾಗವಾಗಿ ಗಂಡುಕಲೆ ಎನಿಸಿದ ಯಕ್ಷಗಾನದ ಹಿರಿಮೆ ಗರಿಮೆಯನ್ನು ಮತ್ತಷ್ಟು ಉನ್ನತಿಗೇರಿಸಿತು.


ಯಕ್ಷಗೆಜ್ಜೆಯ ಮಾರ್ಗದರ್ಶಕ ಗಜಾನನ ಭಟ್ ತುಳಗೇರಿ ಹಾಗೂ ಶಂಕರ ಭಾಗವತ ಯಲ್ಲಾಪುರ ಅವರ ನೇತೃತ್ವದಲ್ಲಿ ಬೆಳಿಗ್ಗೆ ಕಲಿಕಾ ವಿದ್ಯಾರ್ಥಿಗಳಿಂದ ಭಾಗವತಿಕೆ, ಚಂಡೆ ಮತ್ತು ಮದ್ದಲೆಯ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು. ನಂತರ ಸಭಾ ಕಾರ್ಯಕ್ರಮದಲ್ಲಿ ಯಕ್ಷಗೆಜ್ಜೆಯ ಸಂಸ್ಥಾಪಕಿ, ಗುರು ನಿರ್ಮಲ ಹೆಗಡೆ ಗೋಳಿಕೊಪ್ಪ ಸ್ವಾಗತಿಸಿದರು. ಜನಾರ್ಧನ ಭಟ್ ಹೊಸ್ತೋಟ ಹಾಗೂ ಶರಾವತಿ ಭಟ್ ಹೊಸ್ತೋಟ ಉದ್ಘಾಟನೆ ಮಾಡಿದರು‌. ವಿ. ಜಿ. ಗಾಯತ್ರೀ , ಜಿ.ಎಸ್. ಭಟ್ಟ ವರ್ಗಾಸರ , ವಿ.ಪಿ.ಹೆಗಡೆ ವೈಶಾಲಿ ಇನ್ನಿತರರು ಇದ್ದರು. ಪ್ರಸಿದ್ಧ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ ರಮ್ಯಾ ಹೆಗಡೆ ಹಿಲ್ಲೂರು ದಂಪತಿಗಳು ಅತಿಥಿಗಳಾಗಿದ್ದರು‌ ಯಕ್ಷಗಾನ ಹಾಗೂ ಭರತನಾಟ್ಯ ಕಲಾವಿದೆಯಾದ ವಿದುಷಿ ಸೌಮ್ಯ ಪ್ರದೀಪ ಹೆಗಡೆ ಹಾಗೂ ಯಕ್ಷಗಾನ ಕ್ಷೇತ್ರದ ಭರವಸೆಯ ಯುವ ಪ್ರತಿಭೆ ನಿರಂಜನ ಜಾಗನಳ್ಳಿ ಅವರನ್ನು ಸಮ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ವಿದುಷಿ ಸೌಮ್ಯ ಹೆಗಡೆ, ಗುರು ಶಿಷ್ಯರ ಪರಂಪರೆ ನಮ್ಮ ಸನಾತನ ಸಂಸ್ಕೃತಿಯ ಹೆಮ್ಮೆಯಾಗಿದ್ದು ಅದನ್ನು ಉಳಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಅದನ್ನು ಸರಿಯಾಗಿ ಅರ್ಥೈಸಿಕೊಂಡು ಮುನ್ನಡೆಯೋಣ ಎಂದರು.


ಜಾಗನಳ್ಳಿ ಮಾತನಾಡಿ, ಯಕ್ಷಗೆಜ್ಜೆ ಉತ್ತಮ ಕಲಿಕಾ ಸಂಸ್ಥೆಯಾಗಿದ್ದು ತಾವೆಲ್ಲರೂ ಇದರ ಭಾಗವಾಗಿದ್ದು ತಮ್ಮೆಲ್ಲರ ಭಾಗ್ಯ. ಕಲೆಯನ್ನು ಕಲಿತು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಭಾಗವತರಾದ ರಾಮಕೃಷ್ಣ ಹೆಗಡೆ ಹಿಲ್ಲೂರು, ಯಕ್ಷಗೆಜ್ಜೆಯಿಂದ ನಡೆಯುವ ಯಕ್ಷಗಾನ, ತಾಳಮದ್ದಳೆ, ಶಿಬಿರಗಳಂತಹ ನಿರಂತರ ಕಾರ್ಯಕ್ರಮಗಳು ಕಲೆಯ ಬೆಳವಣಿಗೆಗೆ ಹಾಗೂ ಮಕ್ಕಳ ಬೆಳವಣಿಗೆಗೂ ಉತ್ತಮ ರಹದಾರಿಯಾಗಿದೆ ಎಂದರು. ಲ ನಂತರದಲ್ಲಿ ಮಕ್ಕಳಿಂದ ಬಾಲಗೋಪಾಲ ವೇಷ, ಒಡ್ಡೋಲಗ ವೈವಿಧ್ಯಗಳು ಜರುಗಿದವು . ಮಧ್ಯಾಹ್ನ ಯಕ್ಷಗೆಜ್ಜೆಯ ಪುಟ್ಟ ಪುಟ್ಟ ವಿದ್ಯಾರ್ಥಿಗಳ ದಿಟ್ಟ ಹೆಜ್ಜೆಯಿಂದ “ಸಮುದ್ರ ಮಥನ “ಎಂಬ ಯಕ್ಷಗಾನ ಪ್ರಸಂಗದ ಪ್ರಸ್ತುತಿ ಎಲ್ಲರ ಗಮನ ಸೆಳೆಯಿತು. ಕುಣಿತ, ಅಭಿನಯ, ಮಾತುಗಳು ಬಂದ ಪ್ರೇಕ್ಷಕರ ಮನ ಸೆಳೆದವು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜನಾರ್ಧನ್ ಭಟ್ ಹೊಸ್ತೋಟ ಶರಾವತಿ ಭಟ್ ಹೊಸ್ತೋಟ ದಂಪತಿಗಳು ಹಾಗೂ ರಮ್ಯಾ ಹೆಗಡೆ ಹಿಲ್ಲೂರು, ಯಕ್ಷಗೆಜ್ಜೆಯ ಅಧ್ಯಕ್ಷ ಎಮ್. ಕೆ. ಹೆಗಡೆ ಗೋಳಿಕೊಪ್ಪ ಇದ್ದರು. ಕಾರ್ಯಕ್ರಮದಲ್ಲಿ ಕಲಾ ಪೋಷಕ ಆರ್. ಎನ್. ಹೆಗಡೆ ಭಂಡಿಮನೆ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಶ್ರೀಧರ ಹೆಗಡೆ ನಕ್ಷೆ ಅವರನ್ನು ಸಂಮಾನಿಸಲಾಯಿತು. ಭಂಡಿಮನೆ ಮಾತನಾಡಿ ಯಕ್ಷಗೆಜ್ಜೆಯ ಕೀರ್ತಿ ದಶದಿಕ್ಕುಗಳಲ್ಲೂ ಪಸರಿಸಲಿ. ತನ್ಮೂಲಕ ಕಲೆಯ ಸೆಲೆ ನಿರಂತರವಾಗಲಿ ಎಂದರು. ಶ್ರೀಧರ ನಕ್ಷೆ ಮಾತನಾಡಿ, ಇಂತಹ ಸುವ್ಯವಸ್ಥಿತ ಸಂಘಟನೆ ಹಾಗೂ ನಿರಂತರ ಕಾರ್ಯಕ್ರಮಗಳು ಯಕ್ಷಗೆಜ್ಜೆಯ ವಿಶೇಷತೆಯಾಗಿದ್ದು ಈ ಸಂಸ್ಥೆ ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದರು‌. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜನಾರ್ಧನ ಭಟ್ ಹೊಸ್ತೋಟ, ಯಕ್ಷಗೆಜ್ಜೆಯ ಎಲ್ಲ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ರಮ್ಯಾ ಹೆಗಡೆ ಹಿಲ್ಲೂರು, ವಿದ್ಯಾರ್ಥಿಗಳು ಯಕ್ಷಗೆಜ್ಜೆಯಿಂದ ದೊರೆಯುವ ಜ್ಞಾನವನ್ನು ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದರು. ಅಧ್ಯಕ್ಷತೆ ವಹಿಸಿದ ಎಮ್. ಕೆ. ಹೆಗಡೆ ಗೋಳಿಕೊಪ್ಪ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ ಯಕ್ಷಗೆಜ್ಜೆಯ ಯಶಸ್ಸಿನ ಹೆಜ್ಜೆಗೆ ಕಾರಣರಾದ ಸರ್ವರನ್ನು ಸ್ಮರಿಸಿ ಮುಂದಿನ ನಡೆಗೆ ಎಲ್ಲರೂ ಒಂದಾಗಿ ಸಾಗೋಣ ಎಂದರು.

Home add -Advt


ಸುರೇಶ ಹೆಗಡೆ ಹಕ್ಕಿಮನೆ ಹಾಗೂ ಲತಾ ಗಿರಿಧರರವರು ನಿರೂಪಿಸಿ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿಸಿದರು. ನಂತರದಲ್ಲಿ ಯಕ್ಷಗೆಜ್ಜೆಯ ಮಹಿಳೆಯರಿಂದ ಕುಂಭಾಸುರ ಕಾಳಗ ಎಂಬ ಯಕ್ಷಗಾನ ಪ್ರದರ್ಶನಗೊಂಡು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಭಟ್ ತುಳಗೇರಿ, ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ, ಮಂಜುನಾಥ ಹೆಗಡೆ ಕಂಚಿಮನೆ ಹಾಗೂ ಚಂಡೆ ಪ್ರಶಾಂತ ಕೈಗಡಿ ಇದ್ದರು. ಉಮೇಶ ಹೆಗಡೆ ಕೊಂಕಣಕೇರಿ ಮತ್ತು ಸಂಗಡಿಗರು ವೇಷಭೂಷಣ ಸಹಕಾರ ನೀಡಿದರು. ದಿನದ ಎಲ್ಲ ಪ್ರದರ್ಶನಗಳು ಜನಮನ ರಂಜಿಸಿದವು. ಬೆಳಗಿನಿಂದ ಆರಂಭವಾದ ಕಾರ್ಯಕ್ರಮ ರಾತ್ರಿಯವರೆಗೂ ಕಳೆಗುಂದದೆ ಮತ್ತಷ್ಟು ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸುತ್ತ ನಮ್ಮ ಸಂಸ್ಕೃತಿಯ ಸೊಬಗನ್ನು ಸಾರುತ್ತ ಕಲೆಯ ವೈಭವವನ್ನು ಎತ್ತಿ ಹಿಡಿಯುವುದಕ್ಕೆ ಸಾಕ್ಷಿಯಾಯಿತು.

Related Articles

Back to top button