*ಯಶ್-ರಣಬೀರ್ ರಾಮಾಯಣಕ್ಕೆ ಭರ್ಜರಿ ಕ್ರೇಜ್*: *ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಅಭಿಮಾನಿಗಳ ಹಬ್ಬ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮತ್ತು ಸಂಭ್ರಮ ಮನೆಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ಕಾಂಬಿನೇಷನ್ನ ಈ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಪಾತ್ರಗಳು, ಅದ್ಧೂರಿ ನಿರ್ಮಾಣ ಮತ್ತು ತಾರಾಗಣ ಈಗಾಗಲೇ ಸಿನಿಪ್ರೇಮಿಗಳ ಗಮನ ಸೆಳೆದಿವೆ.
ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದರೆ, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಇನ್ನು ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದು, ಅವರ ಲುಕ್ ಮತ್ತು ಅಭಿನಯದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇದೆ.
ಸುಮಾರು 4,000 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ವಿಶ್ವದಾದ್ಯಂತ 50 ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಿದ್ದು, ಭಾರತದಲ್ಲಿ 9 ಸಾವಿರ ಸ್ಕ್ರೀನ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲೂ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಮುಂಗಡ ಬುಕಿಂಗ್ನಲ್ಲೇ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ರಾಮಾಯಣ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಇನ್ನು ಬೆಂಗಳೂರಿನಲ್ಲಿ ಸಿನಿಮಾ ಬಿಡುಗಡೆಯ ಸಂಭ್ರಮ ವಿಶೇಷವಾಗಿತ್ತು. ಗಾಂಧಿನಗರದ ಸಂತೋಷ್ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಮೊದಲ ಪ್ರದರ್ಶನ ಆರಂಭವಾಗಿದ್ದು, ಯಶ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.
ಚಿತ್ರಮಂದಿರದ ಆವರಣದಲ್ಲಿ ಯಶ್ ಅವರ ಬೃಹತ್ ಕಟೌಟ್ ಅಳವಡಿಸಲಾಗಿದ್ದು, ಅಭಿಮಾನಿಗಳು ಕಟೌಟ್ಗೆ ಆರತಿ ಬೆಳಗಿ, ದೃಷ್ಟಿ ತೆಗೆದು, ಕುಂಬಳಕಾಯಿ ಒಡೆದು ಸಂಭ್ರಮಿಸಿದ್ದಾರೆ. ಪಟಾಕಿ ಸಿಡಿಸಿ, ಜೈಕಾರ ಕೂಗಿದ್ದು, ಡೊಳ್ಳು ಕುಣಿತದ ಮೂಲಕವೂ ತಮ್ಮ ನೆಚ್ಚಿನ ನಟನಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.
ಒಟ್ಟಿನಲ್ಲಿ ‘ರಾಮಾಯಣ’ ಚಿತ್ರದ ಸುತ್ತ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದ್ದು, ಯಶ್ ಅವರ ರಾವಣನ ಪಾತ್ರದ ಬಗ್ಗೆ ವಿಶೇಷ ಕುತೂಹಲ ವ್ಯಕ್ತವಾಗಿದೆ.




