ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಸಚಿವಸಂಪುಟ ಪುನಾರಚನೆ ಆಸೆ ಮತ್ತೆ ಚಿಗುರೊಡೆದಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಮುಗಿಯುತ್ತಿದ್ದಂತೆ ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬುಲಾವ್ ಬಂದಿದೆ. ಹಾಗಾಗಿ ಡಿಸೆಂಬರ್ 28 ಅಥವಾ 29ಕ್ಕೆ ಅವರು ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಚರ್ಚಿಸುವ ಸಾಧ್ಯತೆ ಇದೆ.
ಈ ಬಾರಿ ಸಚಿವ ಸಂಪುಟ ವಿಸ್ತರಣೆಯಷ್ಟೆ ಅಲ್ಲ, ಪುನಾರಚನೆ ಖಚಿತ. ಸಧ್ಯಕ್ಕೆ 7 ಸ್ಥಾನಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಜೊತೆಗೆ 2 ಅಥವಾ 3 ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ಕೊಡುವ ಸಾಧ್ಯತೆ ಇದೆ.
ಈಗಿನ ಮಾಹಿತಿ ಪ್ರಕಾರ ಉಮೇಶ ಕತ್ತಿ, ಸಿ.ಪಿ.ಯೋಗೇಶ್ವರ, ಎಂ.ಟಿ.ಬಿ. ನಾಗರಾಜ, ಆರ್.ಶಂಕರ್, ಮುನಿರತ್ನ ಅವರು ಸಂಪುಟ ಸೇರಲಿದ್ದಾರೆ. ಜೊತೆಗೆ ಪೂರ್ಣಿಮಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ಇವರ ಜೊತೆಗೆ ಶಶಿಕಲಾ ಜೊಲ್ಲೆ ಅವರನ್ನೂ ಮುಂದುವರಿಸಲಿದ್ದಾರಾ ಅಥವಾ ಅವರನ್ನು ಕೈಬಿಡಲಿದ್ದಾರಾ ಎನ್ನುವುದು ಖಚಿತವಾಗಿಲ್ಲ. ಸಂಪುಟದಲ್ಲಿ ಇಬ್ಬರು ಮಹಿಳೆಯರಿಗೆ ಸ್ಥಾನ ನೀಡಬೇಕೆ ಎನ್ನುವ ಬಗ್ಗೆ ತೀರ್ಮಾನವಾಗಿಲ್ಲ.
ಹೈಕಮಾಂಡ್ ಮುಂದೆ ಎರಡೂ ಆಯ್ಕೆಯನ್ನು ಯಡಿಯೂರಪ್ಪ ಇಟ್ಟಿದ್ದಾರೆ. ಆದರೆ ಉಮೇಶ ಕತ್ತಿ ಸೇರ್ಪಡೆಯಿಂದಾಗಿ ಬೆಳಗಾವಿ ಜಿಲ್ಲೆಯ ಕೋಟಾ ಮತ್ತು ಲಿಂಗಾಯತ ಕೋಟಾ ಮಿತಿ ಮೀರುವ ಕಾರಣಕ್ಕಾಗಿಯೂ ಜೊಲ್ಲೆ ಅವರನ್ನು ಕೈಬಿಡಬೇಕಾದ ಅನಿವಾರ್ಯತೆ ಬರಬಹುದು. ಈಗಾಗಲೆ ಬೆಳಗಾವಿ ಜಿಲ್ಲೆಯ ನಾಲ್ವರು ಸಂಪುಟದಲ್ಲಿದ್ದಾರೆ.
ಇನ್ನೂ 2 -3 ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಹೊಸ ವರ್ಷಕ್ಕೆ ಹೊಸ ಸಂಪುಟ ಸಾಧ್ಯತೆ ಹೆಚ್ಚಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ