*ಚಾಕುವಿನಿಂದ ಇರಿದು ಯುವಕನ ಕೊಲೆ: ಬೆಳಗಾವಿ ಪೊಲೀಸರಿಂದ ಇಬ್ಬರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಳೆಯ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ನಿಪ್ಪಾಣಿ ಬಸವೇಶ್ವರ ಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಜತ್ರಾಟವೇಸದ ನಿವಾಸಿಗಳಾದ ಸಾಯಿನಾಥ ಶುಭಮ್ ರಾಮನಾಥ ಬಾಮನೆ (19) ಹಾಗೂ ವಿಠಲ ರಾಮನಾಥ ಬಾಮನೆ (20) ಬಂಧಿತ ಆರೋಪಿಗಳು.
ಮೃತ ಅಭಿಷೇಕ ಅನಿಲ ಬಾಮನೆ (26) ಹಾಗೂ ಆತನ ತಮ್ಮ ಶುಭಮ್ ಬಾಮನೆ ಆರೋಪಿಗಳ ತಂಗಿಯಂದಿರೊಂದಿಗೆ ಮಾತನಾಡುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಇವರ ನಡುವೆ ವೈಷಮ್ಯ ಬೆಳೆದಿತ್ತು. ಸೆ. 17 ರಂದು ರಾತ್ರಿ 11:45 ರ ಸುಮಾರಿಗೆ ಜತ್ರಾಟವೇಸದ ಸಂತ ರೋಹಿದಾಸ ಭವನದ ಹತ್ತಿರ ಗಣೇಶ ಮೂರ್ತಿ ಬಳಿ ಗೌರಿ ಆಡಲು ಬಂದಿದ್ದ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿ, ಆರೋಪಿ ಸಾಯಿನಾಥ ಚಾಕುವಿನಿಂದ ಅಭಿಷೇಕನ ಹೊಟ್ಟೆಗೆ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಅಭಿಷೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದನು. ಈ ಕುರಿತು ನಿಪ್ಪಾಣಿ ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.



