ಜಿಐಟಿಯಲ್ಲಿ ಮಾ. 30 ರಿಂದ “ಔರಾ -19” -ರಾಷ್ಟ್ರೀಯ ಸಾಂಸ್ಕೃತಿಕ ಮೇಳ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯವು ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಮೇಳ “ಔರಾ”ವನ್ನು ಹಮ್ಮಿಕೊಂಡಿದೆ. ಮಾರ್ಚ್ 30 ರಿಂದ ಏಪ್ರಿಲ್ 1 ರವರೆಗೆ ಉತ್ಸವ ನಡೆಯಲಿದೆ.
ಔರಾ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಉತ್ಸವವಾಗಿದ್ದು ಮಹಾವಿದ್ಯಾಲಯ ನಡೆಸುವ ರಾಷ್ಟ್ರ ಮಟ್ಟದ ತಾಂತ್ರಿಕ ಮೇಳಗಳಾದ ಅವಲಾಂಚ, ಪಾಂಚಜನ್ಯ, ಒಕುಲಸ್ ಹಾಗೂ ಮುಂತಾದ ಅನೇಕ ಶೆಕ್ಷಣಿಕ ಕಾರ್ಯಕ್ರಮಗಳ ಜೊತೆಗೆ ನಡೆಸಲಾಗುತ್ತಿದೆ. ಈ ತಾಂತ್ರಿಕ ಮೇಳಗಳಲ್ಲಿ ಉದ್ಯಮ ತಜ್ಞರು, ಸಂಶೋಧಕರು ಮತ್ತು ಕಾರ್ಪೋರೆಟ್ ನಾಯಕರ ಜೊತೆಗೆ ಸಂವಾದವನ್ನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಡಾ. ರಘುನಾಥ್ ಮಹಾಶೆಲ್ಕರ್, ಭರತ್ ಧಬೋಲ್ಕಾರ್, ಚೇತನ್ ಭಗತ್, ಸಂತೋಷ್ ಹೆಗ್ಡೆ, ಸುಧೀಂದ್ರ ಹಾಲ್ದೊಡ್ಡೇರಿ, ನಿತಿನ್ ಗೋಖಲೆ, ಸುಬ್ರತೋ ಬಾಗಚಿ ಮುಂತಾದವರು ಕಳೆದ ವರ್ಷಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಅತ್ಯದ್ಭುತವಾಗಿ ಸಂವಹನ ನಡೆಸಿದ್ದಾರೆ.
ಮಹಾವಿದ್ಯಾಲಯ ಎಲ್ಲ ತಾಂತ್ರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಈ ಎಲ್ಲ ಮೇಳಗಳನ್ನು ವಿದ್ಯಾರ್ಥಿಗಳೇ ಸಂಯೋಜಿಸಿ ನಡೆಸಿಕೊಡುತ್ತಾರೆ. ಇದು ವಿದ್ಯಾರ್ಥಿಗಳಲ್ಲಿ ನಿರ್ವಹಣೆ ಮತ್ತು ಸಹಕಾರ ಸಾಮರ್ಥ್ಯಗಳನ್ನು ಬೆಳೆಸುತ್ತದೆ. ಈ ಕೌಶಲ್ಯಗಳು ವಿದ್ಯಾರ್ಥಿಗಳ ನಡುವೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತವೆ ಮತ್ತು ತಂಡದಲ್ಲಿ ಕಾರ್ಯನಿರ್ವಹಿಸುವ ಮನೋಭಾವವನ್ನು ಬೆಳೆಸುತ್ತವೆ.
ಈ ಉದ್ದೇಶದೊಂದಿಗೆ ಜಿ ಐ ಟಿ ಯು ಶೈಕ್ಷಣಿಕ ವರ್ಷದ ಮೊದಲ ಭಾಗದಲ್ಲಿ ತಾಂತ್ರಿಕ ಮೇಳವನ್ನು ನಡೆಸಿದಂತೆ ತಾಂತ್ರಿಕ ಮತ್ತು ಸಾಂಸ್ಕೃತಿಕ ಪ್ರತಿಭೆಗಳಿಗೆ ಸಮಾನವಾಗಿ ಅವಕಾಶವನ್ನು ಕಲ್ಪಿಸಿಕೊಡಲು ಸಾಂಸ್ಕೃತಿಕ ಮೇಳ “ಔರಾ” ವನ್ನು ಪ್ರತಿ ವರ್ಷ ಬೇಸಿಗೆಯಲ್ಲಿ ಹಮ್ಮಿಕೊಳ್ಳುತ್ತದೆ. ದೇಶದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇದು ವಿದ್ಯಾರ್ಥಿಗಳಲ್ಲಿರುವ ಬಹುಮುಖ ಪ್ರತಿಭೆಗೆ ಒಂದು ಶ್ರೇಷ್ಠ ವೇದಿಕೆಯಾಗಿದೆ.
ಈ ವರ್ಷ ಇದೆ ಮಾರ್ಚ್ 30 ರಿಂದ “ಔರಾ” ಆರಂಭವಾಗಲಿದ್ದು, ಈ ವರ್ಷ ರಾಜ್ಯ ಸೇರಿದಂತೆ ದೇಶದ ಪ್ರತಿಷ್ಠಿತ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಸುಮಾರು ೨೦೦೦ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ. ಈ ಸಾಂಸ್ಕೃತಿಕ ಮೇಳದಲ್ಲಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಬೀದಿನಾಟಕ, ಫ್ಯಾಷನ್ ಶೋ, ಸಾಹಿತ್ಯ, ಸಂಗೀತ, ಟ್ರೇಸರ ಹಂಟ್, ಹಾಗೂ ಮೀಸ್ಟರ ಮತ್ತು ಮಿಸ್ ಔರಾ, ರಕ್ಷಣಾ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಶೌರ್ಯ ವ್ಯೂಹ, ಪ್ರಾದೇಶಿಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡುವ ರೀಜನಲ್ ಫ್ಲೇವರ್ಸ್ ಹೀಗೆ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಹಲವು ವೈವಿಧ್ಯಮಯಗಳಿಂದ ಕೂಡಿದ ಈ “ಔರಾ -೧೯” ತನ್ನ ಈ ಬಾರಿಯ ಉಪ ಶೀರ್ಷಿಕೆ “ಶೋರ್ ಇನ್ ದಿ ಸಿಟಿ”.




