Latest

ವಿಕಲಚೇತನ, ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಈಜು ತರಬೇತಿ ಶಿಬಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಸ್ವಿಮ್ಮರ್ಸ ಕ್ಲಬ್ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್‌ಗಳ ವತಿಯಿಂದ ನಗರದ ಗೋವಾವೇಸ್‌ನಲ್ಲಿರುವ ರೋಟರಿ ಕಾರ್ಪೊರೇಶನ್ ಸ್ಪೋರ್ಟ್ಸ್ ಅಕಾಡೆಮಿಯ ಈಜುಗೊಳದಲ್ಲಿ ವಿಕಲಚೇತನ ಹಾಗೂ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಈಜು ತರಬೇತಿ ಶಿಬಿರ ಆರಂಭಿಸಲಾಯಿತು.
ಸೌಥ್ ಕೊಂಕಣ ಎಜ್ಯುಕೇಶನ್ ಸೊಸೈಟಿಯ ಚೇರಮನ್ ಆರ್.ಡಿ. ಶಾನಭಾಗ, ಬೆಳಗಾವಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಮುಕುಂದ ಉಡಚಣಕರ, ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ಅಸೋಸಿಯೇಶನ್ ಸಂಸ್ಥಾಪಕಿ ಶಕ್ಕುತಾಯಿ ಪರಾಂಜಪೆ ಜಂಟಿಯಾಗಿ ಶಿಬಿರ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಾತನಾಡಿದ ಆರ್.ಡಿ. ಶಾನಭಾಗ, ಕಳೆದ ೧೮ ವರ್ಷಗಳಿಂದ ವಿಕಲಚೇತನ ಹಾಗೂ ಬಡ ವಿದ್ಯಾರ್ಥಿಗಳಿಗಾಗಿ ಈಜು ತರಬೇತಿ ಶಿಬಿರ ಆಯೋಜಿಸುತ್ತಿರುವ ಕ್ರಮ ಶ್ಲಾಘನೀಯವಾಗಿದೆ. ಇಂಥ ಉಚಿತ ತರಬೇತಿ ಶಿಬಿರಗಳಿಂದ ಬಡ ಹಾಗೂ ವಿಕಲಚೇತನ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಲು ಸಹಕಾರಿಯಾಗುತ್ತದೆ. ದಾಸಪ್ಪ ಶಾನಭಾಗ ಟ್ರಸ್ಟ್ ಹಾಗೂ ಸೌಥ್ ಕೊಂಕಣ ಎಜ್ಯುಕೇಶನ್ ಸೊಸೈಟಿಯಿಂದ ಆಯೋಜಕರಿಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಹೇಳಿದರು.
ಪ್ರದೀಪ ಕುಲಕರ್ಣಿ, ಬಸವರಾಜ ವಿಭೂತಿ, ದಿನೇಶ ಶಾಹ, ಉಮೇಶ ಕಲಘಟಗಿ, ಸುಧೀರ ಕುಸಣೆ, ಪ್ರಕಾಶ ಕಕಮರಿ, ಆನಂದೇಶ್ವರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಮಾರು ೨೦೦ ವಿಕಲಚೇತನ ಹಾಗೂ ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇವರೆಲ್ಲರಿಗೂ ಉಚಿತ ತರಬೇತಿಯೊಂದಿಗೆ ಉಚಿತ ಸಾರಿಗೆ, ಸ್ವಿಮ್ಮಿಂಗ್ ಕಿಟ್, ಉಪಹಾರ ನೀಡಲಾಗುತ್ತಿದೆ. ಫೆ.೨೩ ರವರೆಗೆ ಪ್ರತಿದಿನ ಸಂಜೆ ೬.೩೦ ರಿಂದ ೭.೩೦ ರವರೆಗೆ ತರಬೇತಿ ಶಿಬಿರ ನಡೆಸಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button