ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ಹತ್ತರಗುಂಜಿ ಮತಗಟ್ಟೆ ವ್ಯಾಪ್ತಿಯ 483 ಮತದಾರರ ಪೈಕಿ 477 ಮತದಾರರು ಮತ ಚಲಾಯಿಸಿದ್ದು, ಈ ಮತಗಟ್ಟೆಯಲ್ಲಿ ಶೇ.98.76ರಷ್ಟು ದಾಖಲೆಯ ಮತದಾನವಾಗಿದೆ.
ಮಂಗಳವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನ 255 ಮತಗಟ್ಟೆಗಳ ಪೈಕಿ 20 ಮತಗಟ್ಟೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮತ್ತು 83 ಮತಗಟ್ಟೆಗಳಲ್ಲಿ ಶೇ.75ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ತಾಲ್ಲೂಕಿನ ಎರಡು ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನಕ್ಕೆ ಬಹಿಷ್ಕಾರ ಹಾಕಿದ್ದು ಹೊರತುಪಡಿಸಿದರೆ ಉಳಿದೆಡೆ ಮತದಾನದ ಬಗ್ಗೆ ಜಾಗೃತಿ ಕೈಗೊಂಡಿದ್ದರ ಫಲವಾಗಿ ಕಳೆದ ಚುನಾವಣೆಗಿಂದ ಈ ಬಾರಿ ಶೇ.6.86ರಷ್ಟು ಮತದಾನದ ಪ್ರಮಾಣ ಹೆಚ್ಚಿದೆ ಎಂದು ಸ್ವೀಪ್ ಸಮಿತಿಯ ಅಧ್ಯಕ್ಷ ಲಕ್ಷ್ಮಣರಾವ್
ಯಕ್ಕುಂಡಿ ಅಭಿಪ್ರಾಯ ಪಟ್ಟಿದ್ದಾರೆ.
ಜೊತೆಗೆ ಈ ಸಲದ ಚುನಾವಣೆಯಲ್ಲಿ ಚುನಾವಣಾ ಆಯೋಗ ವಿಶೇಷ ಅಗತ್ಯತೆಯುಳ್ಳ ಮತದಾರರು ತಮ್ಮ ಮನೆಯಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿ ಮರಳಿ ಮನೆಗೆ ತಲುಪಿಸಲು ವಾಹನಗಳ ವ್ಯವಸ್ಥೆಯನ್ನು ಮಾಡಿದ್ದರಿಂದ ತಾಲ್ಲೂಕಿನ 2594 ವಿಶೇಷ ಅಗತ್ಯತೆಯುಳ್ಳ ಮತದಾರರ ಪೈಕಿ 2467 (ಶೇ.95) ವಿಕಲಚೇತನ ಮತದಾರರು ಮತದಾನ ಮಾಡಿದ್ದಾರೆ.
ತಾಲ್ಲೂಕಿನ 1,07,221 ಪುರುಷ ಮತದಾರರ ಪೈಕಿ 76,888 ಮತ್ತು 1,00,421 ಮಹಿಳಾ ಮತದಾರರ ಪೈಕಿ 69,964 ಮತ್ತು 12 ಇತರೆ ಮತದಾರರ ಪೈಕಿ ಓರ್ವ ಸೇರಿದಂತೆ ಒಟ್ಟು 2,07,654 ಮತದಾರರ ಪೈಕಿ 1,46,853 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ತಾಲ್ಲೂಕಿನ ಒಟ್ಟಾರೆ ಮತದಾನ ಶೇ.70.72ರಷ್ಟಾಗಿದೆ. ಹತ್ತರಗುಂಜಿಯಲ್ಲಿ ಅತೀ ಹೆಚ್ಚು (ಶೇ.98.76) ಮತ್ತು ಚಾಪೋಲಿಯ ಮತಗಟ್ಟೆ ನಂ.14ರಲ್ಲಿ ಅತೀ ಕಡಿಮೆ (ಶೇ.0.00) ಮತದಾನವಾಗಿದೆ ಎಂದು ತಹಸೀಲ್ದಾರ್ ವಿದ್ಯಾಧರ್ ಗುಳಗುಳಿ ಮಾಹಿತಿ ನೀಡಿದ್ದಾರೆ.
ಸೂತಕದ ಛಾಯೆಯಲ್ಲೂ ಮತದಾನ
ಪಟ್ಟಣದ ನಿವಾಸಿ ಪ್ರಕಾಶ ಹಾರುಗೊಪ್ಪ ಮಂಗಳವಾರ ಮುಂಜಾನೆ ಬೆಳಗಾವಿಯ ಖಾಸಗಿ
ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ಮಧ್ಯಾಹ್ನ ಅವರ ಪಾರ್ಥೀವ
ಶರೀರವನ್ನು ಪಟ್ಟಣಕ್ಕೆ ತಂದು ಅಂತ್ಯಕ್ರಿಯೆ ಕೈಗೊಂಡ ಮೃತರ ಸಂಬಂಧಿಗಳು ಸಂಜೆ
5.30ಕ್ಕೆ ಪಟ್ಟಣದ ಮಿಲಾಗ್ರಿ ಶಾಲೆಯ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಮನೆಯಲ್ಲಿ
ಸೂತಕದ ಛಾಯೆಯಿದ್ದರೂ ದೇಶಕ್ಕಾಗಿ ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ
ನಿಭಾಯಿಸಿದರು.
ಮತದಾನ ಮಾಡಿದ ವಧು-ವರ
ತಾಲ್ಲೂಕಿನ ಬೇಕವಾಡ ಗ್ರಾಮದ ನಿವಾಸಿ ವಿಠ್ಠಲ ಮಳವಿ ಅವರ ವಿವಾಹ
ತಾಲ್ಲೂಕಿನ ವಡ್ಡೇಬೈಲ ಗ್ರಾಮದ ಯುವತಿಯೊಂದಿಗೆ ಮಂಗಳವಾರ ವಧುವಿನ ಸ್ವಗ್ರಹದಲ್ಲಿ
ಜರುಗಿತು. ಮದುವೆ, ಆರರಕ್ಷತೆ ಮತ್ತು ಇತರೆ ಶಾಸ್ತ್ರಗಳನ್ನು ಮುಗಿಸಿದ ವಧು-ವರರು
ಸಂಜೆ 5 ಗಂಟೆಗೆ ತಾವು ವಾಸಿಸುವ ವ್ಯಾಪ್ತಿಯ ಮತಗಟ್ಟೆಗಳಿಗೆ ಧಾವಿಸಿ ಮತ
ಚಲಾಯಿಸಿದರು. ಇದೇ ಸಂದರ್ಭದಲ್ಲಿ ಮದುವೆ ಸಂಭ್ರಮದಲ್ಲಿದ್ದ ವಧು-ವರರ ಪಾಲಕರು ಮತ್ತು
ಸಂಬಂಧಿಗಳೂ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿ ತಮ್ಮ ಕರ್ತವ್ಯಪ್ರಜ್ಞೆ ಮೆರೆದಿದ್ದು
ವಿಶೇಷವಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ