ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ತಂತ್ರಜ್ಞಾನ ಕ್ಷೇತ್ರದ ಕ್ರಾಂತಿಕಾರ ಬದಲಾವಣೆಯ ಕಾರಣ ವಿಶ್ವದಾದ್ಯಂತ ಎಂಜಿನಿಯರಿಂಗ್ ಪದವೀಧರರಿಗೆ ಹೆಚ್ಚಿನ ಬೇಡಿಕೆ ಇದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಇಂಜಿನಿಯರಿಂಗ್ ಕ್ಷೇತ್ರದ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಆದರೆ ಅದಕ್ಕೆ ತಕ್ಕಂತೆ ಇಂದಿನ ವಿದ್ಯಾರ್ಥಿಗಳು ಆಯಾ ಕ್ಷೇತ್ರದಲ್ಲಿ ನಿಪುಣರಾಗುವುದು ಅವಶ್ಯವಾಗಿದೆ ಎಂದು ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿ ಐ ಟಿ ) ಆಡಳಿತ ಮಂಡಳಿ ಅಧ್ಯಕ್ಷ ಯು. ಏನ್. ಕಾಲಕುಂದ್ರಿಕರ ಅಭಿಪ್ರಾಯ ಪಟ್ಟರು.
ಅವರು ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಅನ್ವಯಿಕ ವಿಜ್ಞಾನ ವಿಭಾಗ ರವಿವಾರ ಸಂಯೋಜಿಸಿದ್ದ “ಇಂಜಿನಿಯರಿಂಗ್ ಕೋರ್ಸ್ ಗಳ ಹಾಗೂ ಸಿ ಇ ಟಿ/ಕಾಮೆಡ್ -ಕೆ ಸೀಟ್ ಆಯ್ಕೆ ಪ್ರಕ್ರಿಯೆಯ” ಜಾಗೃತಿ ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ಆಕಾಂಕ್ಷಿಗಳನ್ನ ಉದ್ದೇಶಿಸಿ ಮಾತನಾಡುತಿದ್ದರು.
ಕಾಲೇಜ್ ಆಯ್ಕೆಯ ಮಾನದಂಡಗಳ ಬಗ್ಗೆ ಮಾತನಾಡುತ್ತ, ಇಂಜಿನಿಯರಿಂಗ್ ಮಾಡ ಬಯಸುವ ವಿದ್ಯಾರ್ಥಿ ಆಯ್ಕೆ ಮಾಡುವ ಕಾಲೇಜಿನ ಕಲಿಕಾ ವಿಧಾನ, ಆ ಕಾಲೇಜು ಹೊಂದಿರುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಒಡಂಬಡಿಕೆ, ಮೂಲ ಸೌಲಭ್ಯಗಳು, ನ್ಯಾಕ್ ನಿಂದ ಮಾನ್ಯತೆ ಪಡೆದಿದೆಯೋ ಅಥವಾ ಇಲ್ಲವೊ ಮತ್ತು ಮುಖ್ಯವಾಗಿ ಕ್ಯಾಂಪಸ್ ಸಂದರ್ಶನಕ್ಕೆ ಯಾವೆಲ್ಲ ಕಂಪನಿಗಳು ಭೇಟಿ ಕೊಡುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಅಷ್ಟೇ ಅಲ್ಲದೆ ಆ ಕಾಲೇಜ್ ನಿಂದ ಕಲಿತ ಹಳೆಯ ವಿದ್ಯಾರ್ಥಿಗಳೆಲ್ಲ ಈಗ ಯಾವೆಲ್ಲ ಸ್ಥಾನದಲ್ಲಿ ಇದ್ದಾರೆ… ಹೀಗೆ ಈ ಎಲ್ಲ ಅಂಶಗಳನ್ನು ಒಂದು ಇಂಜಿನಿಯರಿಂಗ್ ಕಾಲೇಜ್ ಆಯ್ಕೆ ಮಾಡುವುದಕ್ಕಿಂತ ಮುಂಚೆ ಗಮನಿಸುವುದು ಮುಖ್ಯ ಎಂದು ಅವರು ಹೇಳಿದರು.
ನಂತರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ. ಎಸ. ದೇಶಪಾಂಡೆ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಎಷ್ಟು ವಿಭಾಗಗಳಿವೆ ಮತ್ತು ಅವುಗಳ ಪ್ರಾಮುಖ್ಯತೆ ಹಾಗೂ ಅವುಗಳಿಗೆ ಸಂಭಂದಿಸಿದ ವೃತ್ತಿ ಮಾರ್ಗಗಳನ್ನು ಆಕಾಂಕ್ಷಿಗಳಿಗೆ ತಿಳಿಸಿಕೊಟ್ಟರು.
ನಂತರ ಶೈಕ್ಷಣಿಕ ವಿಭಾಗದ ಡೀನ್ ಡಾ. ಎಂ. ಎಸ್. ಪಾಟೀಲ್ ಸಿ.ಇ.ಟಿ / ಕಾಮೆಡ್ -ಕೆ ಸೀಟ್ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದುನ್ನು ವಿವರವಾಗಿ ತಿಳಿಸಿದರು.
ಪ್ರೊ. ಸುಪ್ರಿಯಾ ಕುಲಕರ್ಣಿ ನಿರೂಪಿಸಿದರು, ಸಂಯೋಜಕರಾದ ಡಾ. ಎಂ. ಕೆ. ರೆಂದಾಳೆ, ಡಾ. ಪಿ. ಆರ್. ಹಂಪಿಹೊಳಿ, ಡಾ. ಎಸ. ವಿ. ದಿವೇಕರ್ ಹಾಗೂ ಗೋವಾ, ಮಹಾರಾಷ್ಟ್ರ ಹಾಗೂ ರಾಜ್ಯದ ಬೇರೆ ಬೇರೆ ಕಡೆಗಳಿಂದ ಸುಮಾರು ೫೦೦ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಆಗಮಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ