ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ಮಾಳ ಮಾರುತಿ ಪೊಲೀಸ್ ಠಾಣೆ ಪೊಲೀಸರು ಇಬ್ಬರು ಮನೆಗಳ್ಳತನದ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಕಳುವು ಮಾಡಲಾದ 8.59 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ರುಕ್ಮಿಣಿ ನಗರ ಜನತಾ ಪ್ಲಾಟ್ ನಿವಾಸಿಗಳಾದ ಸಾಗರಸಿಂಗ್ ಗುರುದೇವಸಿಂಗ ಸಿಖಲೇನ್ ಉರ್ಫ್ ಸಿಖ್ ಸರದಾರಜಿ (26) ಹಾಗೂ ಅರ್ಜುನ ಸಿಂಗ್ ಲಾಲಸಿಂಗ್ ಸಿಖಲೇನ್ ಉರ್ಫ್ ಸಿಖ್ ಸರದಾರಜಿ (30) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ, ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಮಾಳ ಮಾರುತಿ ಬಡಾವಣೆಯಲ್ಲಿ ನಡೆದ 6 ಮನೆ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಂಧಿತರಿಂದ 256 ಗ್ರಾಮ್ ಚಿನ್ನ, 100 ಗ್ರಾಮ್ ಬೆಳ್ಳಿ ಹಾಗೂ ಸೋನಿ ಕಂಪನಿಯ ಕ್ಯಾಮೆರಾ, ಕಳ್ಳತನಕ್ಕೆ ಉಪಯೋಗಿಸಿದ ಹೀರೊ ಸ್ಕೂಟರ್ ಹೀಗೆ ಒಟ್ಟು 8,59,800 ರೂ. ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ