ಮಂಗಳವಾರ ಮತ್ತು ಬುಧವಾರ ಕರೆ ನೀಡಲಾಗಿರುವ ರಾಷ್ಟ್ರವ್ಯಾಪಿ ಮುಷ್ಕರ ಕರ್ನಾಟಕದ ಮಟ್ಟಿಗೆ ಸರಕಾರಿ ಪ್ರಾಯೋಜಿತ ಬಂದ್ ರೀತಿ ಇರಲಿದೆ.
ಕೇಂದ್ರ ಸರಕಾರದ ವಿರುದ್ಧ, ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಾರ್ಮಿಕ ಸಂಘಟನೆಗಳು ಮತ್ತು ಸಾರಿಗೆ ಸಂಘಟನೆಗಳು ಬಂದ್ ಕರೆ ನೀಡಿವೆ. ಆದರೆ ಬಹುತೇಕ ಸಂಘಟನೆಗಳು ಈ ಬಂದೇ ಕರೆಗೆ ಬೆಂಬಲಿಸಿಲ್ಲ. ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನಷ್ಟೆ ಘೋಷಿಸಿವೆ. ಹಾಗಾಗಿ ಕರ್ನಾಟಕದಲ್ಲಂತೂ ಬಂದ್ ಬಿಸಿ ತಟ್ಟುತ್ತಿರಲಿಲ್ಲ. ಅದರಲ್ಲೂ 2 ದಿನದ ಬಂದ್ ಗಂತೂ ಬಹುತೇಕರ ಬಂಬಲವಿರಲಿಲ್ಲ.
ಆದರೆ ಬಂದ್ ಕರೆ ನೀಡಿರುವ ಸಿಐಟಿಯು ಅಧ್ಯಕ್ಷ ಅನಂತ ಸುಬ್ಬರಾವ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಂದ್ ಗೆ ಬೆಂಬಲಿಸುವಂತೆ ಕೋರಿದ್ದಾರೆ. ಅವರೂ ಒಪ್ಪಿದ್ದಾರೆ.
ರಾಜ್ಯ ಸರಕಾರ ಶಾಲೆ, ಕಾಲೇಜುಗಳಿಗೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ರಜೆ ಘೋಷಿಸುವ ಮೂಲಕ ಬಂದ್ ಗೆ ಈಗಾಗಲೆ ಬೆಂಬಲ ನೀಡಿದೆ. ಪರೋಕ್ಷವಾಗಿ ಸಾರಿಗೆ ಸಂಸ್ಥೆಗಳೂ ಬಂದ್ ನಲ್ಲಿ ಪಾಲ್ಗೊಳ್ಳಲು ಸರಕಾರವೇ ಪ್ರಚೋದನೆ ನೀಡುತ್ತಿದೆ ಎನ್ನುವ ಆರೋಪವಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಬುಧವಾರದ ಬಂದ್ ಸರಕಾರಿ ಪ್ರಾಯೋಜಿತ ಬಂದ್ ಆಗಲಿದೆ. ಹಾಗಾಗಿ ತುರ್ತಿ ಕೆಲಸದ ಹೊರತು ಮನೆಯಿಂದ ಹೊರಗೆ ಹೋಗದಿರುವುದೇ ಉತ್ತಮ.
ಬಂದ್ ಹಿನ್ನೆಲೆಯಲ್ಲಿ ತುರ್ತು ಸೇವೆಗೆ ಯಾವುದೇ ಅಡ್ಡಿ ಇಲ್ಲ ಎಂದು ಈಗಾಗಲೆ ಸರಕಾರ ಭರವಸೆ ನೀಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳು ಮತ್ತು ಆಟೋ ರಿಕ್ಷಾಗಳ ಓಡಾಟ ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಬಸ್ ಬಂದ್ ಮಾಡುವ ಬಗ್ಗೆ ಸೋಮವಾರ ರಾತ್ರಿಯವರೆಗೂ ಸ್ಪಷ್ಟತೆ ಇಲ್ಲ. ಮಂಗಳವಾರದ ಪರಿಸ್ಥಿತಿ ನೋಡಿ ನಿರ್ಧರಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಆಟೋ ಚಾಲಕರ, ಮಾಲೀಕರ ಸಂಘದಲ್ಲಿ ಸಹ ಬಂದ್ ಬಗ್ಗೆ ಒಮ್ಮತವಿಲ್ಲ. ಆಟೋ ಚಾಲಕರ ಸಂಘಗಳು ಬಂದ್ ಬೆಂಬಲಿಸುವ ಬಗ್ಗೆ ವಿಭಿನ್ನ ಹೇಳಿಕೆ ನೀಡುತ್ತಿವೆ. ಬೆಳಗಾವಿಯ ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರ ಸಂಘ ಭಾರತ ಬಂದ್‌ಗೆ ಬೆಂಬಲಿಸಿ ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಿದೆ. ಆರ್‌ಟಿಒ ದುಬಾರಿ ಶುಲ್ಕ, ದುಬಾರಿ ವಿಮೆ ಮತ್ತು ಪೆಟ್ರೋಲ್, ಎಲ್‌ಪಿಜಿಯನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಿ ಮುಷ್ಕರ ನಡೆಸುತ್ತಿರುವುದಾಗಿ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬ್ಯಾಂಕ್ ಸಿಬ್ಬಂದಿ, ಬಿಎಸ್‌ಎನ್‌ಎಲ್, ಬಿಸಿಯೂಟ ಅಡುಗೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಎಲ್‌ಐಸಿ ಸಿಬ್ಬಂದಿ ಬಂದ್ ಬೆಂಬಲಿಸಲಿದ್ದಾರೆ. ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಸಹ ಬಂದ್ ಬೆಂಬಲಿಸುವುದಾಗಿ ಹೇಳಿದೆ.
ಪರೀಕ್ಷೆಗಳು ಮುಂದಕ್ಕೆ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಜ.8 ಮತ್ತು 9 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿವೆ.
ತಾಂತ್ರಿಕ ಶಿಕ್ಷಣದ ವಿವಿಧ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ವಿಶ್ವವಿದ್ಯಾಲಯದ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ವಿಟಿಯು ತಿಳಿಸಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಜ.8, 9ರಂದು ನಡೆಯಬೇಕಿದ್ದ ಸ್ನಾತಕೋತ್ತರ ಪದವಿ ಒಂದನೇ ಮತ್ತು ಮೂರನೇ ಸೆಮಿಸ್ಟರ್ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ. ಈ ಪರೀಕ್ಷೆಗಳನ್ನು ಜ. 24 ಮತ್ತು 25 ರಂದು ನಡೆಸಲು ನಿರ್ಧರಿಸಲಾಗಿದೆ. ಜ.10 ಮತ್ತು ನಂತರ ನಿಗದಿಯಾಗಿರುವ ಎಲ್ಲ ಪರೀಕ್ಷೆಗಳು ಅದೇ ಪ್ರಕಾರ ನಡೆಯಲಿವೆ ಎಂದು ವಿಶ್ವವಿದ್ಯಾಲಯದ ಕುಲಪತಿ ಶಿವಾನಂದ ಹೊಸಮನಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಮಂಗಳವಾರ ಮಾತ್ರ ರಜೆ
ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಮಂಗಳವಾರ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರು ಆದೇಶ ಹೊರಡಿಸಿದ್ದಾರೆ. ಮಂಗಳವಾರದ ಪರಿಸ್ಥಿತಿ ಗಮನಿಸಿ ಬುಧವಾರ ರಜೆ ವಿಸ್ತರಣೆ ಬಗ್ಗೆ ನಿರ್ಧಾರ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ