*
ಆಯ್ಕೆಯಾದ ಶ್ರೇಷ್ಠ ಐದು ಪ್ರಾಜೆಕ್ಟ್ ಗಳಿಗೆ ಪುಣೆಯ ಟಾಟಾ ಟೆಕ್ನಾಲಜಿಯಿಂದ ತಲಾ 2 ಲಕ್ಷ ರೂ ಅನುದಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ(ಜಿಐಟಿ)ದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಪುಣೆಯ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ನಡೆಸಿದ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಸೋಹಮ್ ಕಲಘಟಗಿ, ಸಾಗರ್ ಕೆ. ಸಿರ್ಬ, ಸೌರಭ್ ತಂಬೆ ಮತ್ತು ಚೇತನ್ ಜೋಶಿ ಅವರನ್ನು ಒಳಗೊಂಡ ತಂಡವು ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ಡಾ ಎಸ್. ಎಲ್. ಗೊಂಬಿ ಮಾರ್ಗದರ್ಶನದಲ್ಲಿ ವಿನ್ಯಾಸಗೊಳಿಸಿದ “ಸ್ಪೇಸಿಯಲಿ ಎಬಲ್ಡ್ ಯುಟಿಲಿಟಿ ವೈಕಲ್” ಎಂಬ ಪ್ರಾಜೆಕ್ಟ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಶ್ರೇಷ್ಠ ಐದು ತಂಡಗಳಲ್ಲಿ ಸ್ಥಾನವನ್ನು ಪಡೆದು 2 ಲಕ್ಷ ರೂ. ಗಳನ್ನೂ ಸಹಾಯಧನವನ್ನಾಗಿ ಪಡೆದುಕೊಂಡಿದೆ.
ಈ ಪ್ರಾಜೆಕ್ಟ್ ನ್ನು ಮುಖ್ಯವಾಗಿ ವಿಕಲಚೇತನರಿಗೆ ರೂಪಿಸಿದ್ದು ನಿರ್ದಿಷ್ಟವಾಗಿ ಡಬಲ್ ಲೆಗ್ ಅಂಪೂಟಿ, ವಿಶೇಷವಾಗಿ ಬಾಗಿರುವ, ಕಿವುಡ ಮತ್ತು ಮೂಕ ಜನರಿಗೆ ಸಹಾಯವಾಗುವಂತೆ ವಿನ್ಯಾಸಗೊಳಿಸಿದ್ದು ಸ್ಟೇರಿಂಗ್ ನ್ನು ಒಂದು ಕೈಯಿಂದ ಇನ್ನೊಂದು ಕೈಯನ್ನು ವೇಗವರ್ಧಕ, ಬ್ರೇಕ್ ಗಳು, ಕ್ಲಚ್ ಮತ್ತು ಗೇರ್ ಬದಲಾಯಿಸಲು ಸಹಕಾರಿಯಾಗುವಂತೆ ಇದನ್ನು ವಿನ್ಯಾಸಗೊಳಿಸಿದ್ದಾರೆ. ಇದರಿಂದ ಅವರು ನಾಲ್ಕು ಚಕ್ರ ವಾಹನವನ್ನು ಸುರಕ್ಷಿತವಾಗಿ ಓಡಿಸಬಹುದಾಗಿದೆ.
ಈ ಸ್ಪರ್ಧೆಯಲ್ಲಿ 200 ಕ್ಕಿಂತ ಹೆಚ್ಚು ತಾಂತ್ರಿಕ ಸಂಸ್ಥೆಗಳು ಭಾಗವಹಿಸಿದ್ದು, ಈ ಪೈಕಿ ಶ್ರೇಷ್ಟವಾಗಿರುವ ಕೇವಲ ಐದು ಯೋಜನೆಗಳನ್ನು ಮಾತ್ರ ಆಯ್ಕೆಮಾಡಲಾಗಿದೆ. ಅದರಲ್ಲಿ ಜಿ ಐ ಟಿ ತಂಡವು ಒಂದಾಗಿದೆ. ಎಸ್. ಬಿ. ಪ್ರಧಾನ, ಹಬ್ಬೂ, ಕೇದಾರ ಹೆಂಡ್ರೆ ಮತ್ತು ಸಿದ್ಧಾರ್ಥ್ ಯಾವಾಲ್ಕರ್ ಅವರನ್ನು ಒಳಗೊಂಡ ತಾಂತ್ರಿಕ ತಜ್ಞರ ತಂಡ ಜಿ ಐ ಟಿ ಗೆ ಭೇಟಿಕೊಟ್ಟು ಈ ಪ್ರೊಜೆಕ್ಟ್ ನ ಹೊಸತನದ ಪರಿಕಲ್ಪನೆ ಮತ್ತು ನಾವೀನ್ಯತೆಯನ್ನು ಶ್ಲಾಘಿಸಿತು.
ಜಿ ಐ ಟಿ ವಿದ್ಯಾರ್ಥಿಗಳ ಈ ಸಾಧನೆಯನ್ನು ಕೆ ಎಲ್ ಎಸ್ ಚೇರಮನ್ ಎಂ ಆರ್ ಕುಲಕರ್ಣಿ, ಜಿ ಐ ಟಿ ಆಡಳಿತ ಮಂಡಳಿ ಅಧ್ಯಕ್ಷ ಯು. ಎನ್. ಕಾಲಕುಂದ್ರಿಕರ, ಕರ್ನಾಟಕ್ ಲಾ ಸೊಸೈಟಿಯ ಎಲ್ಲ ಸದ್ಯಸರು, ಪ್ರಾಚಾರ್ಯ ಡಾ ಎ. ಎಸ್. ದೇಶಪಾಂಡೆ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಜಯಂತ ಕಿತ್ತೂರ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಶ್ಲಾಘಿಸಿ, ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ