ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯಲ್ಲಿ ಇದೇ 10ರಿಂದ ನಡೆಯಲಿರುವ ವಿಧಾನಮಂಡಳದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಡಿ.12ರಂದು ಬೆಳಗಾವಿ ಚಲೋ ನಡೆಸಲು ರಾಜ್ಯ ಎನ್ ಪಿಎಸ್ ನೌಕರರ ಸಂಘ ನಿರ್ಧರಿಸಿದೆ.
ಈ ಕುರಿತು ನಡೆದ ಸಂಘದ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿ ಚಲೋಕ್ಕೆ ನಿರ್ಧರಿಸಲಾಗಿದ್ದು, ನಿಶ್ಚಿತ ಪಿಂಚಣಿ ನಮ್ಮ ಹಕ್ಕು, ಅದನ್ನು ಪಡೆದೇ ತೀರುತ್ತೇವೆ ಎನ್ನುವ ಘೋಷಣೆ ಕೂಗಲಾಯಿತು.
ಬೆಳಗಾವಿ ಚಲೋ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಭೆ ನಡೆಸಲಾಗುತ್ತಿದೆ. ಉತ್ತರ ಕರ್ನಾಟಕ ನೌಕರರ ಸಭೆ ಬೆಳಗಾವಿಯಲ್ಲಿ ನಡೆಯಿತು.
ಈ ಮಧ್ಯೆ ಎನ್ ಪಿಎಸ್ ರದ್ಧುಪಡಿಸಿ ಹಳೆಯ ಪಿಂಚಣಿ ಜಾರಿ ಸಂಬಂಧ ವರದಿ ನೀಡಲು ಸರಕಾರ ಉಪಸಮಿತಿಯೊಂದನ್ನು ರಚಿಸುವ ಸಾಧ್ಯತೆ ಇದೆ. ಆದರೆ ಯಾವುದೇ ಕಾರಣದಿಂದ ಎನ್ ಪಿಎಸ್ ರದ್ಧಾಗಲೇಬೇಕು ಎಂದು ಸಂಘ ಪಟ್ಟು ಹಿಡಿದಿದೆ. ಸಮಿತಿ ರಚಿಸುವುದು ಕೇವಲ ಕಾಲಹರಣ ಮತ್ತು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರ ಎಂದು ಎನ್ ಪಿಎಸ್ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
12ರಂದು ನಡೆಯಲಿರುವ ಬೆಳಗಾವಿ ಚಲೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘ ಕರೆ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ