ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ
ವಿಧಾನಸಭೆಯಲ್ಲಿ ಅಂಗಿ ಹರಿದುಕೊಂಡು ರಂಪ ಮಾಡಿದ್ದ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ ಇದೀಗ ಪೊಲೀಸ್ ಠಾಣೆ ಬಳಿಯೇ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದಾರೆ.
ಅಕ್ರಮ ಮರಳು ಸಾಗಣೆ ಮಾಡುವವರನ್ನು ಬಂಧಿಸುವಲ್ಲಿ ವಿಫಲರಾಗಿರುವ ಪೊಲೀಸರು ಅಮಾಯಕರನ್ನು ಬಂಧಿಸುತ್ತಿದ್ದಾರೆ ಎನ್ನುವುದು ಗೂಳಿಹಟ್ಟಿ ಆರೋಪ.
ದೇವಸ್ಥಾನ ನಿರ್ಮಾಣಕ್ಕೆಂದು ಮರಳು ತರಲು ಹೋಗಿದ್ದ ಲಾರಿಯನ್ನು ಪೊಲೀಸರು ಹಿಡಿದಿದ್ದರು. ಅವರನ್ನು ಹಿಡಿಯುವ ಬದಲು ಮರಳು ದಂಧೆಕೊರರನ್ನು ಬಂಧಿಸಿ ಎಂದು ಶೇಖರ್ ಪೊಲೀಸರಿಗೆ ಕರೆ ಮಾಡಿ ಸೂಚಿಸಿದ್ದರು.
ಆದರೆ ತಮ್ಮ ಮಾತನ್ನು ಕೇಳದ ಪೊಲೀಸರು ಪ್ರಕರಣ ದಾಖಲಿಸಲು ಮುಂದಾದಾಗ ಕ್ಯಾನ್ ನಲ್ಲಿ ಪೆಟ್ರೋಲ್ ತುಂಬಿಕೊಂಡು ಪೊಲೀಸ್ ಠಾಣೆಗೆ ತೆರಳಿದ ಗೂಳಿಹಟ್ಟಿ, ಠಾಣೆಯ ಮುಂಬಾಗವೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು. ತಕ್ಷಣವೇ ಸ್ಥಳದಲ್ಲಿದ್ದವರು ಬೆಂಕಿ ನಂದಿಸಿದ್ದು, ಗೂಳಿಹಟ್ಟಿಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಾಣಾಪಾಯದಿಂದ ಪಾರಾಗಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉದ್ದೇಶಪೂರ್ವಕವಾಗಿಯೇ ಪೊಲೀಸರು ತಮ್ಮ ಬೆಂಬಲಿಗರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವುದು ಶಾಸಕರ ಆರೋಪ.
ಪ್ರಕರಣ ಖಂಡಿಸಿ ಗೂಳಿಹಟ್ಟಿ ಬೆಂಬಲಿಗರು ಸೋಮವಾರ ಚಿತ್ರದುರ್ಗ ಬಂದ್ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ