Latest

ಪ್ರಧಾನಿ ಸೇರಿ ಹಲವು ಸಚಿವರ ಭೇಟಿ: ರಾಜ್ಯದ ಅಭಿವೃದ್ಧಿಗೆ ಹತ್ತಾರು ಮನವಿ ಸಲ್ಲಿಸಿದ ಸಿಎಂ

    ಪ್ರಗತಿವಾಹಿನಿ ಸುದ್ದಿ, ನವದೆಹಲಿ
ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಹಾಗೂ ಗುರುವಾರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಕುರಿತಂತೆ ಚರ್ಚಿಸಿ, ಮನವಿ ಸಲ್ಲಿಸಿದರು.
ಗುರುವಾರ ಸಂಜೆ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ಈ ಸಂಬಂಧ ಎಲ್ಲ ವಿವರಗಳನ್ನು ನೀಡಿದರು. 
1.   ಪ್ರಧಾನ ಮಂತ್ರಿಗಳು, ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ವಿತ್ತ ಸಚಿವ  ಅರುಣ್ ಜೇಟ್ಲಿ, ಕಲ್ಲಿದ್ದಲು ಮತ್ತು ರೈಲ್ವೆ ಸಚಿವ  ಪಿಯುಷ್ ಗೋಯಲ್, ಕೇಂದ್ರ ವಾಣಿಜ್ಯ ಸಚಿವ  ಸುರೇಶ್ ಪ್ರಭು ಅವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
2.    ಪ್ರಧಾನಿಯವರನ್ನು ಭೇಟಿಯಾಗಿ ವಿವಿಧ ನೀರಾವರಿ ಯೋಜನೆಗಳು, ರಾಜ್ಯದ ಬರ ಪರಿಸ್ಥಿತಿ ಹಾಗೂ ಉದ್ಯೋಗ ಖಾತರಿ ಯೋಜನೆಗೆ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಚರ್ಚಿಸಿ, ಮನವಿಗಳನ್ನು ಸಲ್ಲಿಸಲಾಯಿತು.
3.    ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ಆದೇಶ ಹಾಗೂ ನಂತರ ಸುಪ್ರೀಂ ಕೋರ್ಟಿನಲ್ಲಿ ಮಾರ್ಪಡಿಸಿದ ಆದೇಶಗಳ ಅನ್ವಯ ತಮಿಳುನಾಡಿಗೆ ಪ್ರತಿ ತಿಂಗಳು ನೀರು ಹರಿಸುವುದನ್ನು ಕ್ರಮಬದ್ಧವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯು ನೆರವಾಗಲಿದೆ. ಈ ಯೋಜನೆಯು ಸುಮಾರು 67 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಸುಪ್ರೀಂ ಕೋರ್ಟ್ ಬೆಂಗಳೂರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿರುವ 4.75 ಟಿಎಂಸಿ ನೀರನ್ನು ಬಳಸಿಕೊಳ್ಳಲು ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ತಮಿಳು ನಾಡು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸುವಂತೆ ಮನವಿ ಮಾಡಲಾಗಿದೆ.
4.    ಕೃಷ್ಣಾ ನ್ಯಾಯಾಧಿಕರಣ-2ರಡಿ ಕರ್ನಾಟಕಕ್ಕೆ ನೀರಾವರಿ ಉದ್ದೇಶಕ್ಕೆ 166 ಟಿಎಂಸಿ ನೀರು ಹಂಚಿಕೆಯಾಗಿದ್ದು, ಈ ನೀರಿನ ಬಳಕೆಗಾಗಿ ಕೃಷ್ಣ ಮೇಲ್ದಂಡೆ ಯೋಜನೆ- ಹಂತ 3 ಮತ್ತಿತರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.  ಸರ್ಕಾರ ಈಗಾಗಲೇ ಈ ಯೋಜನೆಗಳಿಗೆ ಸಾಕಷ್ಟು ಹಣ ಹೂಡಿಕೆ ಮಾಡಿದ್ದು, ನ್ಯಾಯಾಧಿಕರಣದ ತೀರ್ಪು ನೀಡಿ 5 ವರ್ಷ ಕಳೆದರೂ ಇನ್ನೂ ಗಜೆಟ್ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ ರಾಜ್ಯಕ್ಕೆ ಹಂಚಿಕೆಯಾದ ನೀರಿನ ಪಾಲನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸುವಂತೆ ಮನವಿ ಮಾಡಲಾಯಿತು.
5.    ಮಹದಾಯಿ ಜಲ ವಿವಾದ ನ್ಯಾಯಾಧಿಕರಣವು ತನ್ನ ಅಂತಿಮ ಆದೇಶದಲ್ಲಿ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿದ್ದು,  ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಹಾಗೂ ಈ ಮಾರ್ಗದಲ್ಲಿರುವ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ ನಾಲಾ ಯೋಜನೆ ಮತ್ತು ಇತರ ಹೊಸ ಯೋಜನೆಗಳನ್ನು  ಕೈಗೆತ್ತಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ನೀರು ಹಂಚಿಕೆಯ ಗಜೆಟ್ ನೋಟಿಫಿಕೇಷನ್ ಶೀಘ್ರವೇ ಹೊರಡಿಸುವಂತೆ ಮನವಿ ಮಾಡಲಾಗಿದೆ.
6.    ಕೃಷ್ಣಾ ಮೇಲ್ದಂಡೆ ಯೋಜನೆ- ಮೂರನೇ ಹಂತವನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಈ ಯೋಜನೆಯಿಂದ ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳ 5.30 ಲಕ್ಷ ಹೆಕ್ಟೇರ್‍ಗೂ ಹೆಚ್ಚು ಪ್ರದೇಶದ ನೀರಾವರಿ ಸೌಲಭ್ಯ ಒದಗಿಸುವ ನಿರೀಕ್ಷೆ ಇದ್ದು, ಇದು ರಾಷ್ಟ್ರೀಯ ಯೋಜನೆಯ ಮಾನದಂಡಕ್ಕಿಂತ ಹೆಚ್ಚಾಗಿದೆ. ಈ ಯೋಜನೆಯ ಅಂದಾಜು ವೆಚ್ಚ 51,148 ಕೋಟಿ ರೂ. ಗಳಾಗಿದ್ದು, ರಾಜ್ಯದ ಸಂಪನ್ಮೂಲವೊಂದರಿಂದಲೇ ಭರಿಸಿದರೆ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗಬಹುದು. ಭೂಸ್ವಾಧೀನಕ್ಕೆ ಇಂದು ಅತಿ ಹೆಚ್ಚು ಅನುದಾನದ ಅಗತ್ಯವಿರುವುದರಿಂದ ಇದನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವಂತೆ ಜಲಸಂಪನ್ಮೂಲ ಸಚಿವಾಲಯಕ್ಕೆ ಸೂಚನೆ ನೀಡುವಂತೆ ಪ್ರಧಾನಿಗಳಿಗೆ ಮನವಿ ಮಾಡಲಾಯಿತು.
7.   ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜನರು ಗುಳೆ ಹೋಗುವುದನ್ನು ತಡೆಯಲು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ 2538 ಕೋಟಿ ರೂ. ಗಳನ್ನು ಬಿಡುಗಡೆ ಮಾಡುವಂತೆ ಪ್ರಧಾನಿಗಳನ್ನು ಮನವಿ ಮಾಡಿದ್ದೇನೆ.
8.    ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರಿಗೆ ಎನ್‍ಡಿಆರ್ ಎಫ್ ಮಾನದಂಡಗಳನ್ವಯ ಶೇ. 33ಕ್ಕೂ ಹೆಚ್ಚು ನಷ್ಟ ಅನುಭವಿಸಿದ ರೈತರಿಗೂ ಇನ್‍ಪುಟ್ ಸಬ್ಸಿಡಿ ನೀಡುವಂತೆ ಹಾಗೂ ಎನ್‍ಡಿಆರ್‍ಎಫ್ ಅಡಿ ಮುಂಗಾರು ಹಂಗಾಮಿನ ಬರ ಪರಿಹಾರ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಪ್ರಧಾನ ಮಂತ್ರಿಯವರನ್ನು ಮನವಿ ಮಾಡಲಾಯಿತು.
9.    ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಮುಂಗಾರು ಹಂಗಾಮಿನಲ್ಲಿ ಕೃಷಿ ಮತ್ತು ತೋಟಗಾರಿಕಾ ವಲಯಗಳಲ್ಲಿ 16,662.48 ಕೋಟಿ ರೂ. ನಷ್ಟವಾಗಿದ್ದು,  ಎಸ್‍ಡಿಆರ್ ಎಫ್ ಮಾನದಂಡಗಳ ಪ್ರಕಾರ ಕೇಂದ್ರದಿಂದ 2434 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ.
10.   ಬರ ನಿರ್ವಹಣೆ ಕುರಿತ ಕೈಪಿಡಿಗೆ ಇತ್ತೀಚೆಗೆ ಮಾಡಿರುವ ತಿದ್ದುಪಡಿಯನ್ವಯ ಕೇವಲ ಶೇ. 50ಕ್ಕೂ ಹೆಚ್ಚು ಬೆಳೆ ನಷ್ಟ ಹೊಂದಿದವರಿಗೆ ಮಾತ್ರ ಇನ್‍ಪುಟ್ ಸಬ್ಸಿಡಿ ನೀಡಲು ಅವಕಾಶವಿದೆ. ಇದರಿಂದ ಶೇ. 33 ರಿಂದ ಶೇ. 50 ರಷ್ಟು ಬೆಳೆ ನಷ್ಟ ಹೊಂದಿದ ರೈತರು ಇನ್‍ಪುಟ್ ಸಬ್ಸಿಡಿಯಿಂದ ವಂಚಿತರಾಗುತ್ತಾರೆ. ಈ ಕ್ರಮದಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಯಾವುದೇ ಪರಿಹಾರ ದೊರಕದಂತಾಗುತ್ತದೆ ಹಾಗೂ ಅವರಿಗೆ ತಾರತಮ್ಯ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಶೇ. 33ಕ್ಕೂ ಹೆಚ್ಚು ನಷ್ಟ ಅನುಭವಿಸಿದ ರೈತರಿಗೂ ಇನ್‍ಪುಟ್ ಸಬ್ಸಿಡಿ ನೀಡಲು ಸಂಬಂಧಿಸಿದವರಿಗೆ ನಿರ್ದೇಶನ ನೀಡುವಂತೆ ಕೋರಲಾಗಿದೆ.
11.     2015-16 ಹಾಗೂ 2016-17 ರಲ್ಲಿ ಕೇಂದ್ರದ ಪಾಲಿನ ಅನುದಾನ ಸುಮಾರು 2175 ಕೋಟಿ ರೂ. ಗಳಷ್ಟು ರಾಜ್ಯ ಸರ್ಕಾರವೇ ಭರಿಸಿತ್ತು. ಇದರಲ್ಲಿ 935.51 ಕೋಟಿ ರೂ. ಬಾಕಿ ಇದೆ. ಜೊತೆಗೆ 2017-18 ಹಾಗೂ 2018-19 ನೇ ಸಾಲಿನ ಈ ವರೆಗಿನ ಬಾಕಿ 539.75 ಕೋಟಿ ರೂ. ಹಾಗೂ 2018-19 ನೇ ಸಾಲಿನ ಅಂತ್ಯದ ವರೆಗೆ 8.50 ಕೋಟಿ ಮಾನವ ದಿನಗಳ ಸೃಜನೆಗೆ  11.96.08 ಕೋಟಿ ರೂ. ಅನುದಾನ ಅಗತ್ಯವಿದೆ.
12.  ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಹಿಂದಿನ ಬಾಕಿ ಸೇರಿ ರಾಜ್ಯಕ್ಕೆ ಒಟ್ಟು 2538 ಕೋಟಿ ರೂ. ಅನುದಾನ ಬರಬೇಕಾಗಿದೆ. ಇದನ್ನು ಶೀಘ್ರವೇ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ  ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.

13.   ಮಹಾದಾಯಿ ನ್ಯಾಯಾಧಿಕರಣ ತೀರ್ಪಿಗೆ ಸಂಬಂಧಿಸಿದಂತೆ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದರಿಂದ ರಾಜ್ಯದ ಪಾಲಿನ ನೀರಿನ ಬಳಕೆಗೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದು, ಈ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಗಡ್ಕರಿ ಅವರು ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.

14.   ಮೇಕೆದಾಟು ಯೋಜನೆ ಕುರಿತು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸುವುದಾಗಿ ಕೇಂದ್ರ ಭೂಸಾರಿಗೆ, ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.
20. ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ವಾಸ್ತವವಾಗಿ  ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೆ, ಅದರಲ್ಲೂ ತಮಿಳುನಾಡಿಗೇ ಹೆಚ್ಚು ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ. ಈ ಕುರಿತು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ, ಈ ವಿಷಯವನ್ನು ಬಗೆಹರಿಸುವಂತೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ನಿತಿನ್ ಗಡ್ಕರಿ ಅವರು ಸಭೆ ನಡೆಸಲು ಸಹಮತಿ ವ್ಯಕ್ತಪಡಿಸಿದರು.
15.  ಕೇಂದ್ರ ಭೂ ಹೆದ್ದಾರಿ ಮತ್ತು ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ಹೆದ್ದಾರಿಗಳ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.
16. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ನಡುವೆ ಎಲಿವೇಟೆಡ್ ರಸ್ತೆ ನಿರ್ಮಿಸುವ ಕುರಿತು ಕೇಂದ್ರ ಭೂಸಾರಿಗೆ, ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು ಸಮ್ಮತಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ ಕೂಡಲೇ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
17. ಈ ಸಂದರ್ಭದಲ್ಲಿ ಕರ್ನಾಟಕ ಗೋವಾ ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ಎ ಪ್ರಸ್ತುತ ಎರಡು ಪಥಗಳದ್ದಾಗಿದ್ದು ಇದರ ಅಗಲೀಕರಣಕ್ಕಾಗಿ ಮುಂದಿನ 18 ತಿಂಗಳ ಕಾಲ ಬಂದ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಳಸಬಹುದಾದ ಪರ್ಯಾಯ ಸಂಪರ್ಕ ಮಾರ್ಗಗಳ ಅಭಿವೃದ್ಧಿಯನ್ನು ಈ ಯೋಜನೆಯಡಿಯಲ್ಲಿಯೇ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರ್ ಅವರನ್ನು ಮನವಿ ಮಾಡಲಾಯಿತು.
18. ಇದಲ್ಲದೆ ಈ ಸಂದರ್ಭದಲ್ಲಿ ಬೇಲೂರು ಹಾಸನ ನಡುವೆ ರಾಷ್ಟ್ರೀಯ ಹೆದ್ದಾರಿ 373ರ ಅಭಿವೃದ್ಧಿ, ಹಾಸನ-ಹೊಳೆನರಸೀಪುರ ಚತುಷ್ಪಥ ರಸ್ತೆ, ಚನ್ನರಾಯಪಟ್ಟಣ-ಹೊಳೆನರಸೀಪುರ-ಅರಕಲಗೂಡು-ಕೊಡ್ಲಿಪೇಟೆ-ಮಡಿಕೇರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸುವ ಬಗ್ಗೆ ಚರ್ಚಿಸಲಾಯಿತು.

19. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ನಾಗರಿಕ ವಿಮಾನ ಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಿ ರಾಜ್ಯದ ವಿವಿಧ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.

20. ಕಲಬುರಗಿ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ವಿವಿಧ ವಿಮಾನ ಯಾನ ಕಂಪೆನಿಗಳು ಕಾರ್ಯಾಚರಣೆ ಆರಂಭಿಸಲು ಉತ್ಸಾಹ ತೋರಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸೂಚನೆಯಂತೆ ವಿಶೇಷ ಉದ್ದೇಶ ವಾಹಕ (ಎಸ್‍ಪಿವಿ)ದ ರಚನೆಯ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಅಗತ್ಯ ಪರವಾನಗಿ ಹಾಗೂ ತಾಂತ್ರಿಕ ಅನುಮತಿಗಳನ್ನು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಎಸ್‍ಪಿವಿ ರಚನೆಯಾಗುವ ವರೆಗೆ ಕಾಯದೆ, ಕೂಡಲೇ ಕಲಬುರಗಿ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಂತೆಯೂ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.

21.  ಈ ಎಸ್‍ಪಿವಿ ಮೂಲಕ ರಾಜ್ಯ ಸರ್ಕಾರವು ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯಪುರ ಮತ್ತು ಕಾರವಾರಗಳಲ್ಲಿಯೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ ಎಂದು ಅವರು ವಿವರಿಸಿದ್ದೇನೆ.

22. ಬೀದರ್ ವಿಮಾನ ನಿಲ್ದಾಣ ನಿರ್ಮಾಣ ಪೂರ್ಣಗೊಂಡು ಕಾರ್ಯಾಚರಣೆಗೆ ಸಜ್ಜಾಗಿದ್ದು, ಈ ಕುರಿತು ಜಿಹೆಚ್‍ಈಎಎಲ್‍ನೊಂದಿಗೆ ಪರಸ್ಪರ ಒಪ್ಪಂದ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಒಪ್ಪಂದ ಸಹಿ ಮಾಡುವಂತೆ ಸಂಬಂಧಿತರಿಗೆ ಸೂಚನೆ ನೀಡುವಂತೆ ಕೋರಲಾಗಿದೆ.
23. ಭಾರತೀಯ ವಾಯುಪಡೆಯು ಬೆಂಗಳೂರಿನ ಯಲಹಂಕದಲ್ಲಿರುವ ತನ್ನ ಹೆಲಿಕಾಪ್ಟರ್ ತರಬೇತಿ ವಿಭಾಗವನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲು ಪ್ರಸ್ತಾವನೆ ಸಲ್ಲಿಸಿದೆ. ಪುಣೆ, ಶ್ರೀನಗರ, ಚಂಡೀಘಢ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಮೈಸೂರು ವಿಮಾನ ನಿಲ್ದಾಣವನ್ನು ಸಹ ತನ್ನದೇ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ, ನಾಗರಿಕರ ಬಳಕೆ ಹಾಗೂ ಮಿಲಿಟರಿ ಬಳಕೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಮ್ಮತಿಸಿದೆ. ಇದರಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲಿನ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು.
24. ರಾಜ್ಯ ಸರ್ಕಾರವು ಈ ಸ್ಥಳಾಂತರಕ್ಕೆ ನಿರಾಕ್ಷೇಪಣಾ ಪತ್ರ ನೀಡಿದ್ದು, ಮೈಸೂರು ವಿಮಾನ ನಿಲ್ದಾಣ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸ್ವಾಧೀನದಲ್ಲಿದ್ದು, ಅವರೇ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಗೆ ಮೈಸೂರು ವಿಮಾನ ನಿಲ್ದಾಣವನ್ನು ಅವರ ಹೆಲಿಕಾಪ್ಟರ್ ಬೇಸ್‍ಗೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ  ಮನವಿ ಮಾಡಲಾಗಿದೆ.
25. ಕೇಂದ್ರ ಕಲ್ಲಿದ್ದಲು ಮತ್ತು ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿ ಮಾಡಿ ರಾಜ್ಯದ ಆರ್‍ಟಿಪಿಎಸ್, ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರ ಹಾಗೂ ಯರಮರಸ್ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಗಣಿ ಘಟಕಗಳನ್ನು ಶೀಘ್ರವೇ ಹಂಚಿಕೆ ಮಾಡುವಂತೆ ಮನವಿ ಮಾಡಲಾಯಿತು.
26.  ರಾಯಚೂರಿನ ಆರ್‍ಟಿಪಿಎಸ್‍ನಲ್ಲಿ ಕಲ್ಲಿದ್ದಲ್ಲು ಸಂಗ್ರಹ ಕಡಿಮೆ ಇರುವ ಹಿನ್ನಲೆಯಲ್ಲಿ ಕೂಡಲೇ ಕಲ್ಲಿದ್ದಲು ಒದಗಿಸುವಂತೆ ವೆಸ್ಟರ್ನ್ ಕೋಲ್‍ಫೀಲ್ಡ್ಸ್ ಲಿಮಿಟೆಡ್ ಹಾಗೂ ಕೋಲ್ ಇಂಡಿಯಾ ಲಿ. ಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಲಾಯಿತು.
27. ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಅತ್ಯಂತ ಹಿಂದುಳಿದ ಬೀದರ್‍ನಿಂದ ನಾಂದೇಡ್‍ಗೆ ರೈಲ್ವೆ ಸಂಪರ್ಕ ಕಲ್ಪಿಸುವಂತೆಯೂ ಮನವಿ ಮಾಡಿದರು. ನಾಂದೇಡ್ ಯಾತ್ರಾರ್ಥಿ ಮಾರ್ಗದ ವ್ಯಾಪ್ತಿಯಲ್ಲಿರುವ ಬೀದರ್ ಸಿಖ್ಖರ ಯಾತ್ರಾ ಸ್ಥಳವೂ ಹೌದು. ಬೀದರ್ –ಔರಾದ್- ದೀಗುಲ-ನಾಂದೇಡ್ 154 ಕಿ.ಮೀ. ಉದ್ದದ ಹೊಸ ರೈಲು ಮಾರ್ಗ ಕುರಿತ ಸಮೀಕ್ಷಾ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ. ಈ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸುವಂತೆಯೂ ಮುಖ್ಯಮಂತ್ರಿಗಳು ಸಚಿವ ಪಿಯುಷ್ ಗೋಯಲ್ ಅವರಿಗೆ ಮನವಿ ಮಾಡಿದ್ದೇನೆ.
28. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಭೇಟಿ ಮಾಡಿ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ ಟಿ) ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯವು ದೇಶದ ಉಳಿದ ರಾಜ್ಯಗಳಿಗೆ ಮಾದರಿಯಾಗಿದೆ. ಆದರೂ, ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪರೋಕ್ಷ ತೆರಿಗೆ ಸಂಗ್ರಹಣೆಯಾಗುತ್ತಿಲ್ಲ. ಇಂದರಿಂದಾಗಿ ರಾಜ್ಯದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅನುದಾನದ ಕೊರತೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಜಿಎಸ್ಟಿ ಪರಿಹಾರದ ಅನುದಾನದ ನೆರವನ್ನು 2025ರ ವರೆಗೆ ವಿಸ್ತರಿಸುವಂತೆ ಒತ್ತಾಯಿಸಲಾಯಿತು.
29. ರಾಜ್ಯದಲ್ಲಿ ಜಿಎಸ್ ಟಿ ಅನುಷ್ಠಾನ ಕುರಿತಂತೆ ರಾಜ್ಯವು ಕೈಗೊಂಡಿರುವ ಕ್ರಮಗಳು ಮತ್ತು  ತೆರಿಗೆ ಸಂಗ್ರಹಣೆ ಕುರಿತು ಅಂಕಿ-ಅಂಶಗಳ ಸಹಿತ ಮನವರಿಕೆ ಮಾಡಿಕೊಡಲಾಯಿತು.
30. ಜಿಎಸ್ ಟಿ ಜಾರಿಗೊಳ್ಳುವ ಮುನ್ನ ರಾಜ್ಯದ ತೆರಿಗೆ ಸಂಗ್ರಹವು ವಾರ್ಷಿಕವಾಗಿ ಏರುಗತಿಯಲ್ಲಿತ್ತು. ಮೌಲ್ಯ ವರ್ಧಿತ ತೆರಿಗೆ ವ್ಯವಸ್ಥೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ತೆರಿಗೆ ಸಂಗ್ರಹದಲ್ಲಿ ಸರಾಸರಿ ಶೇ. 10-12 ರಷ್ಟು ವಾರ್ಷಿಕ ವೃದ್ಧಿದರವನ್ನು ಹೊಂದಿತ್ತು. ಆದರೆ ರಾಜ್ಯದಲ್ಲಿ ಜಿಎಸ್ಟಿ  ವ್ಯವಸ್ಥೆಯನ್ನು ಅಳವಡಿಸಿಕೊಂಡ ಬಳಿಕ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ರಾಜ್ಯವು ನಿರೀಕ್ಷಿಸಿದ್ದ ತೆರಿಗೆ ಸಂಗ್ರಹಕ್ಕಿಂತಲೂ ಶೇ. 20 ರಷ್ಟು ಕೊರತೆ ಕಂಡುಬಂದಿದೆ. ಹೀಗಾಗಿ, ವಿವಿಧ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತದೆ ಎನ್ನುವ ಅಂಶವನ್ನು ವಿತ್ತ ಸಚಿವರಿಗೆ ವಿವರಿಸಿದ್ದೇನೆ.
31. ರಾಜ್ಯದಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಎಲ್ಲ ಪ್ರಯತ್ನಗಳ ಹೊರತಾಗಿಯೂ ಪ್ರಸಕ್ತ ತೆರಿಗೆ ದರಗಳು, ಸೇವಾ ವಲಯದಲ್ಲಿ ನಿರೀಕ್ಷೆಗಿಂತ ಕಡಿಮೆ ತೆರಿಗೆ ಸಂಗ್ರಹ ಮತ್ತಿತರ ಮೂಲಭೂತ ಕಾರಣಗಳಿಂದ ಈ ಕೊರತೆ ಕಂಡುಬರುತ್ತಿದೆ. 2017-18ಕ್ಕೆ ಹೋಲಿಸಿದರೆ 2018-19ರಲ್ಲಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಆದರೆ ಈ ಏರಿಕೆಯು ರಾಜ್ಯ ಸರ್ಕಾರವು ನಿರೀಕ್ಷಿಸಿದ್ದ ಪ್ರಮಾಣಕ್ಕಿಂತಲೂ ಕಡಿಮೆ ಇದೆ. ಈ ಚಿತ್ರಣವು 2022ರ ನಂತರವೂ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ, ಜಿಎಸ್ ಟಿ ಅನುಷ್ಠಾನಕ್ಕಾಗಿ ಕೇಂದ್ರವು ನೀಡುವ ಪರಿಹಾರ ನೆರವನ್ನು 2022ರ ಬಳಿಕವೂ 2025ರ ವರೆಗೆ ಮುಂದುವರಿಸುವುದು ರಾಜ್ಯ ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚಿನ ಪ್ರಯೋಜನ ತಂದುಕೊಡಲಿದೆ ಎಂದು ಮನವಿ ಮಾಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button