
ಪ್ರಗತಿವಾಹಿನಿ ಸುದ್ದಿ; ಉಡುಪಿ: ಎದೆಹಾಲು ಶ್ವಾಸಕೋಶದಲ್ಲಿ ಸಿಲುಕಿ 10 ತಿಂಗಳ ಮಗು ಸಾವನ್ನಪ್ಪಿರುವ ಧಾರುಣ ಘಟನೆ ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದೆ.
ಏಪ್ರಿಲ್ ತಿಂಗಳಲ್ಲಿ ವಿಜಯಪುರಕ್ಕೆ ಹೋದ ಕಾರ್ಕಳದ ಮಿಯಾರು ಗ್ರಾಮದ ದಂಪತಿ 10 ದಿನಗಳ ಹಿಂದೆ ವಾಪಸ್ ಆಗಿದ್ದರು. ಜೂನ್ 28 ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ತಾಲೂಕು ಆಸ್ಪತ್ರೆಗೆ ಮಗುವನ್ನು ಕರೆ ತರುವಾಗ ಸಾವು ಸಂಭವಿಸಿದೆ.
ಕೊರೊನಾ ಸಂದರ್ಭದಲ್ಲಿ ಮೃತಪಟ್ಟಿರುವ ಕಾರಣ ಮಗುವಿನ ಗಂಟಲ ದ್ರವ ಪರೀಕ್ಷೆಗಾಗಿ ರವಾನಿಸಲಾಗಿತ್ತು. ಕೆಎಂಸಿ ಲ್ಯಾಬ್‍ನ ವರದಿ ಜಿಲ್ಲಾಡಳಿತದ ಕೈಸೇರಿದೆ. ತಾಯಿ 10 ತಿಂಗಳ ಮಗುವಿಗೆ ಮಲಗಿದಲ್ಲಿ ಎದೆಹಾಲು ಕೊಟ್ಟಿದ್ದರು. ಹಾಲು ಮಗುವಿನ ಶ್ವಾಸಕೋಶದಲ್ಲಿ ಸಿಕ್ಕಿಹಾಕಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಪುಟ್ಟ ಮಕ್ಕಳಿಗೆ ಮಲಗಿದಲ್ಲಿ ಎದೆಹಾಲು ಕೊಡಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.