ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ೭ನೆಯ ಘಟಿಕೋತ್ಸವ ಮೇ 29ರಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು)ದ ಮುಖ್ಯ ಸಭಾಂಗಣದಲ್ಲಿ ನಡೆಯಲಿದೆ.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಬಿ. ಹೊಸಮನಿ, ಕುಲಸಚಿವ ಪ್ರೊ. ಸಿದ್ದು.ಪಾ. ಅಲಗೂರ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ. ರಂಗರಾಜ ವನದುರ್ಗ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯಗಳ ಸಮಕುಲಾಧಿಪತಿ ಮತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೆಗೌಡರ ಅಧ್ಯಕ್ಷತೆಯಲ್ಲಿ ಘಟಿಕೋತ್ಸವ ನಡೆಯಲಿದೆ. ಘಟಿಕೋತ್ಸವ ಭಾಷಣವನ್ನು ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್ ಮಾಡುವರು. ಕುಲಪತಿ ಪ್ರೊ. ಶಿವಾನಂದ ಬಿ. ಹೊಸಮನಿ, ಕುಲಸಚಿವ ಪ್ರೊ. ಸಿದ್ದು.ಪಾ. ಅಲಗೂರ, ಮೌಲ್ಯಮಾಪನ ಕುಲಸಚಿವ ಪ್ರೊ. ರಂಗರಾಜ ವನದುರ್ಗ, ಹಣಕಾಸು ಅಧಿಕಾರಿಗಳಾದ ಶಂಕರಾನಂದ ಬನಶಂಕರಿ ಹಾಗೂ ಸಿಂಡಿಕೇಟ್ ಸದಸ್ಯರುಗಳು ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಉಪಸ್ಥಿತರಿರಲಿದ್ದಾರೆ.
ಗೌರವ ಡಾಕ್ಟರೇಟ್
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೆಯ ಘಟಿಕೋತ್ಸವದಲ್ಲಿ ಇಬ್ಬರು ಗಣ್ಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಸಾಧನೆಗಾಗಿ ಸಿಂದಗಿಯ ಸಾರಂಗ ಮಠದ ಪೀಠಾಧಿಪತಿ ಶ್ರೀ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿಯವರಿಗೆ ಹಾಗೂ ಸಾಮಾಜಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಭಾವೇಷ ಭಾಟಿಯಾ ಅವರಿಗೆ ಗೌರವ ಡಾಕ್ಟರೇಟ ನೀಡಿ ಗೌರವಿಸಲಾಗುತ್ತಿದೆ.
ಒಟ್ಟಾರೆ ಸದರಿ ಘಟಿಕೋತ್ಸವದಲ್ಲಿ ೬೭ ಪಿಹೆಚ್.ಡಿ ವಿದ್ಯಾರ್ಥಿಗಳು, ೨೯,೮೨೪ ಸ್ನಾತಕ ವಿದ್ಯಾರ್ಥಿಗಳು ಹಾಗೂ, ೨,೪೫೭ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ೧೪೧ ಸರ್ಟಿಪಿಕೇಟ್ ಕೋರ್ಸ್‌ನ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲಿದ್ದಾರೆ.
ಆಶಾ ಮಲಕಪ್ಪನವರ್, ವಿಮಲಕುಮಾರ ಬನಸಾಲಿ ಮತ್ತು ರೇಶ್ಮಾ ತಲಾ 3 ಬಂಗಾರದ ಪದಕ ಪಡೆದಿದ್ದಾರೆ.
ಇದರಲ್ಲಿ ೧೦ ಸ್ನಾತಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು, ೨೨ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಲಾಗುತ್ತದೆ. ಇದರ ಜೊತೆಗೆ ವಿಭಿನ್ನ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ೧೫ ಬಿ.ಎ. ವಿದ್ಯಾರ್ಥಿಗಳಿಗೆ, ೩೩ ಬಿ.ಕಾಂ. ವಿದ್ಯಾರ್ಥಿಗಳಿಗೆ, ಹಾಗೂ ೧೦ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಗುತ್ತದೆ.
ವಿಶ್ವವಿದ್ಯಾಲಯದ ೭ನೇ ಘಟಿಕೋತ್ಸವಕ್ಕೆ ಸಂಬಂಧಿಸಿದಂತೆ ಎಲ್ಲಾ ಕಾರ್ಯಕಲಾಪಗಳನ್ನು ನೋಡಿಕೊಳ್ಳಲು ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಒಳಗೊಂಡ ೧೭ ಸಮಿತಿಗಳನ್ನು ರಚಿಸಲಾಗಿದೆ. ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕ-ಪೋಷಕರಿಗೆ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ