Latest

ಕೆಎಲ್‌ಇ ಬೆಲ್ಲದ ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಕಾನೂನು ಉತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಇಲ್ಲಿಯ ಕೆಎಲ್‌ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಮಾರ್ಚ್ ೨೨, ೨೩, ೨೪ ರಂದು ರಾಷ್ಟ್ರಮಟ್ಟದ ಕಾನೂನು ಉತ್ಸವ ಏರ್ಪಡಿಸಲಾಗಿದೆ.
ಮಂಗಳವಾರ ಮಹಾವಿದ್ಯಾವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಜಯಸಿಂಹ ಅವರು, ಕೆ.ಎಲ್.ಇ. ಸಂಸ್ಥೆಯ ಕಾನೂನು ಅಕಾಡೆಮಿಯ ಐದು ಕಾನೂನು ಮಹಾವಿದ್ಯಾಲಯಗಳಾದ ಬೆಂಗಳೂರು, ಹುಬ್ಬಳ್ಳಿ, ಗದಗ, ಚಿಕ್ಕೋಡಿ ಹಾಗೂ ಬೆಳಗಾವಿಯ ಕಾನೂನು ಮಹಾವಿದ್ಯಾಲಯಗಳು ೨೦೦೬ ರಿಂದ ಅನುಕ್ರಮವಾಗಿ ಕಾನೂನು ಉತ್ಸವಗಳನ್ನು ಜರುಗಿಸಿಕೊಂಡು ಬರುತ್ತಿವೆ. ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಕಾನೂನು ಉತ್ಸವ ಪ್ರತಿಸಲವು ಅತ್ಯದ್ಭುತವಾದ ಯಶಸ್ಸು ಹೊಂದಿರುವುದು ವಿಶೇಷ. ಈ ವರ್ಷ ಬೆಳಗಾವಿಯ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯ ಕಾನೂನು ಉತ್ಸವವನ್ನು ಆಯೋಜಿಸಲಾಗುತ್ತಿದೆ. ದೇಶದ ೨೪ ಕಾನೂನು ಮಹಾವಿದ್ಯಾಲಯಗಳು ಈ ಉತ್ಸವದದಲ್ಲಿ ಭಾಗವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಮಾ.೨೨ ರಂದು ಸಂಜೆ ೪ ಗಂಟೆಗೆ ಉದ್ಘಾಟನೆಯನ್ನು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಈಶ್ವರ ಭಟ್ ನೆರವೇರಿಸುವರು. ಬೆಂಗಳೂರಿನ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ನ ಕಾರ್ಯಾಧ್ಯಕ್ಷ ಹಾಗೂ ನ್ಯಾಯವಾದಿ ಕೆ.ಬಿ.ನಾಯ್ಕ, ಬೆಳಗಾವಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ, ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಹಾಗೂ ನ್ಯಾಯವಾದಿ ರಾಜೇಂದ್ರ ಬೆಲ್ಲದ ಆಗಮಿಸಲಿದ್ದಾರೆ ಎಂದರು.
ಸಮಾರೋಪ ಸಮಾರಂಭ ಮಾ.೨೪ ರಂದು ಮಧ್ಯಾಹ್ನ ೩ ಗಂಟೆಗೆ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಾಧೀಶ, ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ, ಬೆಳಗಾವಿಯ ನ್ಯಾಯವಾದಿ ಎಂ.ಬಿ.ಜಿರಲಿ, ಧಾರವಾಡ ಉಚ್ಛನ್ಯಾಯಾಲಯದ ನ್ಯಾಯವಾದಿ ಬಸವಪ್ರಭು ಹೊಸಕೇರಿ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.
 ಮೂರು ಹಂತಗಳಲ್ಲಿ ಜರುಗಲಿರುವ ಕಾನೂನು ಉತ್ಸವದಲ್ಲಿ ಕಕ್ಷಿದಾರ ಸಂದರ್ಶನ, ಆಪ್ತ ಸಮಾಲೋಚನೆ, ಕಾನೂನು ರಸಪ್ರಶ್ನೆ ಮತ್ತು ಪ್ರಂಧ ಸ್ಫರ್ಧೆಗಳನ್ನು ಆಯೋಜಿಸಲಾಗಿದೆ. ಕಾನೂನು ಕೌಶಲ್ಯತೆ ಹಾಗೂ ಸಂಶೋಧನೆಗಳಲ್ಲಿ ತೊಡಗುವ ಪ್ರತಿಭಾವಂತ ಕಾನೂನು ವಿದ್ಯಾರ್ಥಿಗಳಿಗೆ ಉತ್ಸವ ಸಹಕಾರಿಯಾಗಲಿದೆ. ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ನಗದು ಬಹುಮಾನವನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button