Kannada NewsLatestNational

*ಸುರಂಗದ ಬಳಿ ಭೀಕರ ಭೂಕುಸಿತ: ಏಳು ಜನ ಸಾವು*

ಪ್ರಗತಿವಾಹಿನಿ ಸುದ್ದಿ: ಸುರಂಗದ ಬಳಿ ಭೀಕರ ಭೂಕುಸಿತ ಸಂಭವಿಸಿ ಏಳು ಜನ ಸಾವನ್ನಪ್ಪಿರುವ ಘಟನೆ ಸಿಕ್ಕಿಂನ ನಾಮ್ಮಿ ಜಿಲ್ಲೆಯಲ್ಲಿ ಸಂಭವಿಸಿದೆ.

Home add -Advt

ನಿರ್ಮಾಣ ಹಂತದಲ್ಲಿದ್ದ ಸುರಂಗದ ಪ್ರವೇಶದ್ವಾರ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಈ ಘಟನೆಯ ಬೆನ್ನಲ್ಲೇ ಸುರಂಗದೊಳಗೆ ಅಪಾಯಕಾರಿ ಮಿಥೇನ್ ಅನಿಲ ಸೋರಿಕೆಯಾಗಿ ದುರಂತವಾಗಿ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರು ಸುರಂಗದ ಕತ್ತಲಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ಹೊರತರಲು ಎನ್‌ಡಿಆರ್‌ಎಫ್ ಸಮರೋಪಾದಿ ಕಾರ್ಯಾಚರಣೆ ನಡೆಸುತ್ತಿದೆ.

ನಾಮ್ಮಿ ಜಿಲ್ಲೆಯ ಸಮರ್ದುಂಗ್ ಮತ್ತು ಜೋಲುಂಗೆ ಪ್ರದೇಶದ ಬಳಿ ಎನ್‌ಎಚ್‌ಪಿಸಿ ಸಂಸ್ಥೆಯ ತೀಸ್ತಾ ಹಂತ-VI ಜಲವಿದ್ಯುತ್ ಯೋಜನೆಗಾಗಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿತ್ತು. ದಿಢೀರನೆ ಭೂಸಸಿತ ಸಂಭವಿಸಿ ಸುರಂಗದ ಪ್ರವೇಶದ್ವಾರ ಬಂದ್ ಆಯಿತು. ಭೂಸಸಿತದ ತೀವ್ರತೆಗೆ ಭೂಮಿಯ ಅಡಿಯಲ್ಲಿದ್ದ ಬಂಡೆಗಳ ಪದರಗಳು ನಜ್ಜುಗುಜ್ಜಾಗಿ, ಅಲ್ಲಿಂದ ಯಥೇಚ್ಛವಾಗಿ ವಿಷಕಾರಿ ಮಿಥೇನ್ ಅನಿಲ ಹೊರಹೊಮ್ಮಲು ಆರಂಭವಾಯಿತು. ಪರಿಣಾಮವಾಗಿ ಒಳಗಿದ್ದ ಕಾರ್ಮಿಕರಿಗೆ ಉಸಿರಾಡಲು ಸಾಧ್ಯವಾಗದೆ ದುರಂತ ಸಂಭವಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ರಾಜ್ಯ ವಿಪತ್ತು ಸ್ಪಂದನಾ ಪಡೆ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ನೆರೆಯ ಪಶ್ಚಿಮ ಬಂಗಾಳದಿಂದಲೂ ವಿಶೇಷ ಉಪಕರಣಗಳನ್ನೊಳಗೊಂಡ ರಕ್ಷಣಾ ತಂಡವನ್ನು ಕರೆಯಿಸಿಕೊಳ್ಳಲಾಗಿದೆ. ಆದರೆ ಸುರಂಗದೊಳಗೆ ದಟ್ಟವಾಗಿ ಆವರಿಸಿರುವ ಮಿಥೇನ್ ಅನಿಲ, ಬೆಳಕಿನ ಕೊರತೆ ಹಾಗೂ ಕಿರಿದಾದ ಹಾದಿಯಿಂದಾಗಿ ಕಾರ್ಯಾಚರಣೆಗೆ ಭಾರೀ ಅಡಚಣೆ ಉಂಟಾಗಿದೆ. ಪ್ರವೇಶಿಸಲುತ್ನಿಸಿದ ಕೆಲ ರಕ್ಷಣಾ ಸಿಬ್ಬಂದಿಗೂ ಉಸಿರಾಟದ ತೊಂದರೆಯಾಗಿ ತಲೆತಿರುಗಿ ಬಿದ್ದ ಘಟನೆಯೂ ನಡೆದಿದೆ.

ದುರಂತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಹೊರತೆಗೆದು ನಾಮ್ಮಿ ಸಿಂಗ್‌ತಮ್ ಹಾಗೂ ಗ್ಯಾಂಗ್‌ಟಕ್‌ನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ರಕ್ಷಣಾ ಸಿಬ್ಬಂದಿ ಗ್ಯಾಸ್ ಮಾಸ್ಕ್ ಹಾಗೂ ಅಗತ್ಯ ರಕ್ಷಣಾ ಕವಚಗಳನ್ನು ಧರಿಸಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸ್ಥಳದಲ್ಲಿ ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ತಂಡಗಳನ್ನು ಸನ್ನದ್ದವಾಗಿಡಲಾಗಿದ್ದು, ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪರಿಸ್ಥಿತಿಯ ಮೇಲೆ ನಿಕಟ ನಿಗಾ ವಹಿಸಿದೆ. 

ಸುರಂಗದಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರನ್ನು ಆದಷ್ಟು ಬೇಗ ಸುರಕ್ಷಿತವಾಗಿ ಹೊರತರುವುದೇ ಪ್ರಸ್ತುತ ಮೊದಲ ಆದ್ಯತೆಯಾಗಿದೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button