Latest

*ಕೊಲೆಯಾಗಿದ್ದ ಮಹಿಳೆ ದಿಢೀರ್ ಪ್ರತ್ಯಕ್ಷ*; *ಎರಡೂವರೆ ವರ್ಷ ಜೈಲುಶಿಕ್ಷೆ ಅನುಭವಿಸಿದ ನಿರಪರಾಧಿ*

ಕೊಲೆಯಾಗಿದ್ದಾಳೆ ಎಂದು ಹೇಳಲಾಗಿದ್ದ ಮಹಿಳೆ ಇದೀಗ ದಿಢೀರ್ ಪ್ರತ್ಯಕ್ಷವಾಗಿದ್ದು, ಪೊಲೀಸರು ನಡೆಸಿದ ತನಿಖೆಯ ಲೋಪದಿಂದಾಗಿ ಆಕೆಯನ್ನು ಕೊಲೆ ಮಾಡಿದ ಆರೋಪದಲ್ಲಿ ನಿರಪರಾಧಿಯೊಬ್ಬರು ಎರಡೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆಈಗ ಪೊಲೀಸ್ ತನಿಖೆಯ ಹೊಣೆಗಾರಿಕೆ ಮತ್ತು ಅಮಾಯಕರಿಗೆ ನ್ಯಾಯ ಸಿಗುವ ವಿಚಾರವಾಗಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಿರಪರಾಧಿಯೊಬ್ಬ ಜೈಲು ಶಿಕ್ಷೆ ಅನುಭವಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಈ ಘಟನೆ ನಡೆದಿದೆ. ಪಾಂಡವಪುರದ ರಾಗಿಮುದ್ದನಹಳ್ಳಿ ನಿವಾಸಿ ರಾಜೇಶ್ ಎರಡುವರೆ ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದವರು.

ನಡೆದಿದ್ದೇನು?

2019ರಲ್ಲಿ ಪಾಂಡವಪುರ ಪಟ್ಟಣದಿಂದ ಮಂಜು ಎಂಬ ಮಹಿಳೆ ನಾಪತ್ತೆಯಾಗಿದ್ದರು. ಈ ಸಂಬಂಧ ಆಕೆಯ ತಂದೆ ನಾಗರಾಜು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ, ಮಂಜು ನಾಪತ್ತೆಯಾಗುವ ಮುನ್ನ ಪಾಂಡವಪುರ ಬಸ್ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಸಿಕ್ಕಿದ್ದ ರಾಜೇಶ್ ಎಂಬಾತನ ಮೊಬೈಲ್‌ನಿಂದ ಕೊನೆಯ ಕರೆ ಮಾಡಿರುವುದು ತಿಳಿದುಬಂದಿತ್ತು.

ಇದೇ ಸುಳಿವು ಆಧರಿಸಿ ಸುಮಾರು ಎರಡು ವರ್ಷಗಳ ಬಳಿಕ ಪಾಂಡವಪುರದ ರಾಗಿಮುದ್ದನಹಳ್ಳಿ ನಿವಾಸಿ ರಾಜೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜೇಶ್ ನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ತಾನು ನಿರಪರಾಧಿ ಎಂದು ಹೇಳಿದ್ದರೂ ಪೊಲೀಸರು ಬಿಟ್ಟಿರಲಿಲ್ಲ.

ಪ್ರಕರಣದ ತನಿಖೆ ವೇಳೆ ಪೊಲೀಸರು ರಾಜೇಶ್‌ಗೆ ಚಿತ್ರಹಿಂಸೆ ನೀಡಿ, ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬೂಟಿನಿಂದ ಒದ್ದು, ವಿದ್ಯುತ್ ಶಾಕ್ ನೀಡಿ, ಮನೆಯವರನ್ನೂ ಬಂಧಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಭಯಗೊಂಡ ರಾಜೇಶ್ ತಾನು ಮಾಡದ ತಪ್ಪನ್ನು ಒಪ್ಪಿಕೊಂಡಿದ್ದ ಎನ್ನಲಾಗಿದೆ. ಅಂದಿನ ಪಾಂಡವಪುರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾಕರ್ ಅವರ ತನಿಖಾ ವೈಖರಿಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಈ ಪ್ರಕರಣದಲ್ಲಿ 2021ರಿಂದ ಸುಮಾರು ಎರಡೂವರೆ ವರ್ಷ ಜೈಲಿನಲ್ಲಿದ್ದ ರಾಜೇಶ್, 2024ರ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ನಾಗಮಂಗಲ ಪಟ್ಟಣದಲ್ಲಿ ಮಂಜು ಜೀವಂತವಾಗಿರುವುದು ಪತ್ತೆಯಾಗಿದೆ. ರಾಜೇಶ್ ಪರ ವಕೀಲ ನಟೇಶ್ ಅವರಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಮಹಿಳೆಯನ್ನು ಪತ್ತೆಹಚ್ಚಲಾಗಿದೆ.

Related Articles

Back to top button