Latest
ಗುರುವಿನ ಪಾದಪೂಜೆಯಷ್ಟೆ ಯೋಧರ ಪಾದಪೂಜೆಯೂ ಶ್ರೇಷ್ಠ

ಪ್ರಗತಿವಾಹಿನಿ ಸುದ್ದಿ, ಚಮಕೇರಿ (ಅಥಣಿ) :
ಇಂದು ನಾವೆಲ್ಲ ಸಂಭ್ರಮದಲ್ಲಿರುವ ಕಾರಣ ನಮ್ಮ ಸೈನಿಕರು. ನಮಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ನಮ್ಮನ್ನು ಕಾಯುವ ಸೈನಿಕರ ಸಾಹಸಕ್ಕೆ ನಾವು ತಲೆಬಾಗಲೇಬೇಕು ಎಂದು ಹಳ್ಯಾಳದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಹೇಳಿದರು.
ಚಮಕೇರಿಯಲ್ಲಿ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆಶ್ರಯದಲ್ಲಿ ನಡೆದ ಗುರುವಂದನಾ ಮತ್ತು ಯೋಧರ ಪಾದಪೂಜೆ ಸಮಾರಂಭದಲ್ಲಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬದುಕಿನಲ್ಲಿ ಗುರುವಿನ ಪೂಜೆ, ತಂದೆಯ ಪೂಜೆ, ತಾಯಿಯ ಪೂಜೆ ಹೇಗೆ ಶ್ರೇಷ್ಠವೋ ಹಾಗೆಯೇ ಯೋಧರ ಪಾದಪೂಜೆಯು ಅಷ್ಟೇ ಶ್ರೇಷ್ಠವಾದದ್ದು ಎಂದರು.
ಸಮ್ಮುಖ ವಹಿಸಿದ್ದ ಹೊನವಾಡದ ಬಾಬು ಮಹಾರಾಜರು ಮಾತನಾಡಿ, ರಕ್ಷಕ, ಕೃಷಿಕ, ಶಿಕ್ಷಕರು ನಮ್ಮ ರಾಷ್ಟ್ರವನ್ನು ರಕ್ಷಿಸುವಂಥ ಮಹಾನ್ ಮೇರು ವ್ಯಕ್ತಿಗಳು. ಕೇವಲ ವ್ಯಕ್ತಿಯಲ್ಲ ಒಂದು ಮಹಾನ್ ಶಕ್ತಿ. ಈ ಮೂವರು ನಮ್ಮ ಭಾರತೀಯ ಸಂಸ್ಕೃತಿಯನ್ನು, ರಾಷ್ಟ್ರಪ್ರೇಮವನ್ನು ಹೆಚ್ಚಿಸುತ್ತಾರೆ. ಇದರಿಂದ ದೇಶದಲ್ಲಿ ಪ್ರಾಮಾಣಿಕತೆ ಮತ್ತು ಆತ್ಮಸ್ಥೈರ್ಯ ಆತ್ಮವಿಶ್ವಾಸ, ಆತ್ಮ ಬಲ ಹೆಚ್ಚುತ್ತದೆ ಎಂದರು.
ಪಾದ ಪೂಜೆ ಸ್ವೀಕರಿಸಿ ಮಾತನಾಡಿದ ಯೋಧ ರಾಜು ಜಮಖಂಡಿಕರ, ಮನುಷ್ಯ ಮನೆ ಮನೆಯಲ್ಲೂ ಜನಿಸುತ್ತಾನೆ. ಆದರೆ ಮನುಷ್ಯತ್ವ ಎಂಬುದು ಕೆಲವರಲ್ಲಿ ಮಾತ್ರ ಜನಿಸಲು ಸಾಧ್ಯ. ಅದೇ ರೀತಿ ಹೆತ್ತವರು ಮತ್ತು ಹೊತ್ತವರು ನಮ್ಮ ಭಾರತೀಯ ಪರಂಪರೆಯಲ್ಲಿ ಶ್ರೇಷ್ಠ ಎಂದರು.
ಮಹಾದೇವ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಯೋಧರಾದ ಮಹದೇವ ಮಾಳಿ, ಮನೋಹರ ಘಟನಟ್ಟಿ, ವಿಠ್ಠಲ್ ಕುಲಕರ್ಣಿ, ಬಸಗೌಡ ಪಾಟೀಲ್, ಸುರೇಶ್ ಕವಟೇಕರ್, ಪುಂಡಲಿಕ್ ಸೂರ್ಯವಂಶಿ, ಮುರುಗೇಶ್ ಸತ್ತಿ, ಬಿ ಮಠಪತಿ, ಶೇಗುಣಸಿ, ಬುರಲಟ್ಟಿಯ ಖೋತ, ರಾಜು ಕುಮಠಳ್ಳಿ ಇದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)




