ಜಾರಕಿಹೊಳಿ ಸಾಮ್ರಾಜ್ಯದಲ್ಲಿ ಯಾವುದೇ ಒಡಕಿಲ್ಲ, ಐವರು ಸಹೋದರರು ಒಂದೇ : ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ :
ದೇವರು ಹಾಗೂ ಜನರ ಆಶೀರ್ವಾದದಿಂದ ನಾನು ಹಾಗೂ ಸಹೋದರರಾದ ರಮೇಶ, ಸತೀಶ, ಭೀಮಶಿ, ಲಖನ್ ಎಲ್ಲರೂ ಒಂದಾಗಿ ಇದ್ದೇವೆ. ಮೂರು ದಶಕಗಳ ಹಿಂದೆ ಜನರ ಆಶೀರ್ವಾದದಿಂದ ಕಟ್ಟಿದ ನಮ್ಮ ಸಾಮ್ರಾಜ್ಯದಲ್ಲಿ ಯಾವುದೇ ಬಿರುಕಿಲ್ಲ-ಒಡಕಿಲ್ಲ ಎಂದು ಅರಭಾವಿ ಶಾಸಕ, ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಕೆಲವು ನಮ್ಮ ವಿರೋಧಿಗಳು ನಮ್ಮ ಕುಟುಂಬದ ಏಳ್ಗೆ ಸಹಿಸದೇ ಒಡೆಯುವ ಯತ್ನ ಮಾಡುತ್ತಿದ್ದಾರೆ. ನಮ್ಮ ಕುಟುಂಬ ಜನಸೇವೆ ಮಾಡುತ್ತಿದೆ. ಒಂದೇ ಮನೆಯಲ್ಲಿ ಮೂವರು ಶಾಸಕರು ಇರುವುದು ರಾಜ್ಯದಲ್ಲಿಯೇ ಅಪರೂಪದ ಸಂಗತಿಯಾಗಿದೆ. ರಾಜಕೀಯ ಬೇರೆ ಬೇರೆಯಾದರೂ ಕೌಟುಂಬಿಕವಾಗಿ ನಾವು ಐವರು ಸಹೋದರರು ಒಗ್ಗಟ್ಟಾಗಿಯೇ ಇದ್ದೇವೆ. ಆದರೆ ಕೆಲವರು ನಮ್ಮ ಕುಟುಂಬದಲ್ಲಿ ಜಗಳ ಹಚ್ಚುವ ಕೆಲಸದಲ್ಲಿ ಮಗ್ನರಾಗಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಕೊಣ್ಣೂರ ಪಟ್ಟಣದ ಹನಮಂತ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಟುಂಬ ಎಂದ ಮೇಲೆ ಭಿನ್ನಾಭಿಪ್ರಾಯಗಳು ಇರುವುದು ಸ್ವಾಭಾವಿಕ. ನಮ್ಮ ಕುಟುಂಬದ ಸಮಸ್ಯೆಗಳನ್ನು ನಾವೇ ಕುಳಿತು ಪರಿಹರಿಸಿಕೊಳ್ಳುತ್ತೇವೆ. ಜಾರಕಿಹೊಳಿ ಕುಟುಂಬ ಯಾವಾಗ ಒಡೆದೀತು ಎಂದು ಕೆಲವರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಅವರ ಬಯಕೆ ಎಂದಿಗೂ ಈಡೇರುವುದಿಲ್ಲ ಎಂದು ಅವರು ವಿರೋಧಿಗಳನ್ನು ಕುಟುಕಿದರು.
ಮತ ನೀಡಿ ಆಶೀರ್ವದಿಸಿ ಈ ಮಟ್ಟಕ್ಕೆ ಬೆಳೆಸಿರುವ ನಮ್ಮೆಲ್ಲ ಮತದಾರ ಪ್ರಭುಗಳು, ಅಭಿಮಾನಿಗಳು, ಕಾರ್ಯಕರ್ತರು, ಹಿತೈಸಿಗಳು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ. ನಾವೆಲ್ಲ ಸಹೋದರರು ನಿಮ್ಮ ಸೇವೆಗೆ ಸದಾ ಬದ್ಧರಿದ್ದೇವೆ. ನಿಮ್ಮ ಆಶೀರ್ವಾದವೇ ನಮ್ಮ ಕುಟುಂಬಕ್ಕೆ ಶ್ರೀರಕ್ಷೆಯಾಗಿದೆ. ಮುಂದೆಯೂ ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ-ಹರಕೆ ಎಂದೆಂದಿಗೂ ಇರಲಿ ಎಂದು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.
ನಮ್ಮ ತಂದೆ ದಿ. ಲಕ್ಷ್ಮಣರಾವ್ ಜಾರಕಿಹೊಳಿ ಅವರು ಕಷ್ಟಪಟ್ಟು ಕಟ್ಟಿದ ಸಾಮ್ರಾಜ್ಯದಲ್ಲಿ ಯಾವುದೇ ಒಡಕಿಲ್ಲ. ಎಲ್ಲಿಯವರೆಗೆ ದೇವರು ಹಾಗೂ ಜನರ ಆಶೀರ್ವಾದ ನಮ್ಮ ಕುಟುಂಬದ ಮೇಲಿರುತ್ತೋ ಅಲ್ಲಿಯವರೆಗೆ ನಮ್ಮನ್ನು ಯಾರೂ ಏನೂ ಮಾಡಲಿಕ್ಕೆ ಆಗುವುದಿಲ್ಲ. ಜಾರಕಿಹೊಳಿ ಸಾಮ್ರಾಜ್ಯದಲ್ಲಿ ಯಾರೊಬ್ಬರೂ ಹುಳಿ ಹಿಂಡುವ ಕೆಲಸ ಮಾಡಬೇಡಿ ಎಂದು ತಮ್ಮ ವಿರೋಧಿಗಳಿಗೆ ಬಾಲಚಂದ್ರ ಜಾರಕಿಹೊಳಿ ಟಾಂಗ್ ನೀಡಿದರು.
ಕೊಣ್ಣೂರ ಪಟ್ಟಣದ ಅಭಿವೃದ್ಧಿಗೆ ನಾವು ಒಂದಾಗಿ, ಒಗ್ಗಟ್ಟಾಗಿ ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ. ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ಯಾವ ತಾರತಮ್ಯ ಮಾಡುವುದಿಲ್ಲವೆಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಕೊಣ್ಣೂರ ಹನಮಂತ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಪುಣ್ಯಕ್ಷೇತ್ರವಾಗಿದೆ ಎಂದು ಅವರು ಬಣ್ಣಿಸಿದರು.
ಮುಖಂಡರಾದ ವಿನೋದ ಕರನಿಂಗ, ಅಪ್ಪಾಸಾಬ ಪಾಟೀಲ, ಕಲ್ಲಪ್ಪ ಚೌಗಲಾ, ಗೋಕಾಕ ಗ್ರಾಮೀಣ ಬಿಜೆಪಿ ಅಧ್ಯಕ್ಷ ವಿರುಪಾಕ್ಷಿ ಯಲಿಗಾರ, ಭುಜಪ್ಪ ಖನಗಾಂವಿ, ನೇಮಿನಾಥ ಚೌಗಲಾ, ಸುಧೀರ ಹುಲ್ಲೋಳಿ, ರಾಮಪ್ಪ ದೇಮನ್ನವರ, ಭರಮಣ್ಣಾ ಖನಗಾಂವಿ, ಸತ್ತೆಪ್ಪ ಬೇಡರಹಟ್ಟಿ, ಭರಮಣ್ಣಾ ಮಲ್ಲಾಪೂರ, ಅಶ್ವಿನ ಯಡಹಳ್ಳಿ, ಮಹಾವೀರ ಚೌಗಲಾ, ಕಲಗೌಡ ಪಾಟೀಲ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ