ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿದೆ. ಸರ್ಕಾರಿ ಯೋಜನೆಗಳ ಪ್ರಚಾರ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಇರುವ ಎಲ್ಲ ಬಗೆಯ ರಾಜಕೀಯ ಹಾಗೂ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿರುವ ರಾಜಕೀಯ ಪಕ್ಷಗಳ ಫಲಕಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ (ಮಾ.10) ಸಂಜೆ ಎಲ್ಲ ತಹಶಿಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದ ಜಿಲ್ಲಾಧಿಕಾರಿ,
ರಾಜಕೀಯ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಸರ್ಕಾರದ ಸಾಧನೆಗಳ ಕುರಿತ ಗೋಡೆಬರಹಗಳು, ಬ್ಯಾನರ್, ಹೋರ್ಡಿಂಗ್ಸ್ ಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ತಿಳಿಸಿದರು.
ಕಾರ್ಯಾರಂಭಿಸಲು ಸೂಚನೆ:
ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಗುರುತಿಸಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ ಕೂಡಲೇ ಸಿಸಿಟಿವಿ ಅಳವಡಿಸುವ ಮೂಲಕ ಕಾರ್ಯಾರಂಭಿಸಬೇಕು ಎಂದು ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.
36 ಚೆಕ್ ಪೋಸ್ಟ್ ಗಳು ತಕ್ಷಣದಿಂದಲೇ ಕಾರ್ಯಾರಂಭ ಮಾಡಿದ್ದು, ಉಳಿದವು ಸೋಮವಾರ ಮಧ್ಯಾಹ್ನದ ವೇಳೆಗೆ ಆರಂಭಗೊಳ್ಳಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮಾದರಿ ನೀತಿ ಸಂಹಿತೆ ಜಾರಿಗಾಗಿ ಈಗಾಗಲೇ ರಚಿಸಲಾಗಿರುವ ಎಫ್ಎಸ್ ಟಿ/ ವಿಎಸ್ ಟಿ/ ವಿವಿಟಿ ತಂಡಗಳು ಕೂಡ ಇಂದಿನಿಂದಲೇ ಕೆಲಸವನ್ನು ಆರಂಭಿಸಬೇಕು. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪ್ರತಿಯೊಂದು ವರದಿಯನ್ನು ನಿಗದಿತ ಅವಧಿಯಲ್ಲಿ ಕಳುಹಿಸಲು ಕ್ರಮ ವಹಿಸುವಂತೆ ಸಹಾಯಕ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೂರು ನಿರ್ವಹಣಾ ಕೇಂದ್ರ:
ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಸ್ಥಾಪಿಸಲಾಗಿರುವ ದೂರು ನಿರ್ವಹಣಾ ಕೇಂದ್ರಗಳು ದಿನದ 24 ಘಂಟೆಗಳ ಕಾಲ ಚುನಾವಣೆ ಮುಕ್ತಾಯದವರೆಗೂ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಅದೇ ರೀತಿ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ, ಮಾಧ್ಯಮ ಕಣ್ಗಾವಲು ಕೇಂದ್ರಗಳು ಕೂಡ ಕಾರ್ಯಾರಂಭಿಸಲಿವೆ ಎಂದರು.
ಜಿಲ್ಲೆಯ ಎಲ್ಲ ಪ್ರವಾಸಿಮಂದಿರ(ಐಬಿ)ಗಳನ್ನು ತಹಶೀಲ್ದಾರರು ತಮ್ಮ ಸುಪರ್ದಿಗೆ ಪಡೆದುಕೊಳ್ಳಬೇಕು. ಯಾವುದೇ ಪ್ರವಾಸಿಮಂದಿರದಲ್ಲೂ ರಾಜಕೀಯ ಸಂಬಂಧಿತ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು.
ಯಾವುದೇ ಸರ್ಕಾರಿ ಅಧಿಕಾರಿಗಳು ತಮ್ಮ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಟ್ಟು ತೆರಳಬಾರದು ಎಂದು ಅವರು ತಿಳಿಸಿದರು.
ನೀತಿ ಸಂಹಿತೆ ಪಾಲನೆಗೆ ಸೂಚನೆ:
ಇದಕ್ಕೂ ಮುಂಚೆ ರಾಜ್ಯದ ಎಲ್ಲ ಪ್ರಾದೇಶಿಕ ಆಯುಕ್ತರು, ಐಜಿಪಿ, ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ್ ಅವರು, ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸೂಚನೆ ನೀಡಿದರು.
ಪ್ರಾದೇಶಿಕ ಆಯುಕ್ತರಾದ ಪಿ.ಎ.ಮೇಘಣ್ಣವರ, ಐಜಿಪಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ, ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



