Latest

ಫೇಸ್‌ಬುಕ್, ಟ್ವೀಟರ್, ಯೂಟ್ಯೂಬ್ ಚಾನೆಲ್‌ಗಳ ಮೇಲೂ ನಿಗಾಕ್ಕೆ ಸೂಚನೆ

ಮಾಧ್ಯಮ ಕಣ್ಗಾವಲು ಕೇಂದ್ರಕ್ಕೆ ಭೇಟಿ ನೀಡಿದ ಚುನಾವಣಾ ವೆಚ್ಚ ವೀಕ್ಷಕರು 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಮೊಹಮ್ಮದ್ ಅಲಿ ಅವರು ವಾರ್ತಾ ಇಲಾಖೆಯ ವಾರ್ತಾಭವನದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಕೇಂದ್ರ (ಮೀಡಿಯಾ ಮಾನಿಟರಿಂಗ್ ಸೆಂಟರ್)ಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಪತ್ರಿಕೆ ಅಥವಾ ಟಿವಿಗಳಲ್ಲಿ ನೀಡುವ ಚುನಾವಣಾ ಜಾಹೀರಾತುಗಳ ಮೇಲೆ ನಿಗಾ ವಹಿಸಬೇಕು. ಪತ್ರಿಕೆ ಹಾಗೂ ಟಿವಿಗಳಲ್ಲಿ ನೀಡಲಾಗುವ ಜಾಹೀರಾತು ವೆಚ್ಚಕ್ಕೆ ಸಂಬಂಧಿಸಿದ ವರದಿಯನ್ನು ವೆಚ್ಚ ವೀಕ್ಷಕ ನೋಡಲ್ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ತಂಡಗಳಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಚುನಾವಣೆಗೆ ಸಂಬಂಧಿಸಿದಂತೆ ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳ ಕಡತವನ್ನು ಪರಿಶೀಲಿಸಿದ ಅವರು, ಸಿವಿಜಿಲ್ ಮತ್ತು ಸ್ವೀಪ್ ಚಟುವಟಿಕೆಗಳ ಕುರಿತ ಪತ್ರಿಕಾ ತುಣುಕುಗಳನ್ನು ವೀಕ್ಷಿಸಿದರು.


ಜಾಹೀರಾತು, ಪೇಡ್ ನ್ಯೂಸ್ ಮತ್ತು ಸುದ್ದಿಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ, ನಿಗದಿತ ನಮೂನೆಗಳಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ ಅವರು, ಈಗಾಗಲೇ ಸಲ್ಲಿಸಲಾಗಿರುವ ಬಿ-೧೨ ವರದಿಗಳ ರಿಜಿಸ್ಟರ್ ಪರಿಶೀಲಿಸಿದರು.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವೀಟರ್, ಯೂಟ್ಯೂಬ್ ಚಾನೆಲ್‌ಗಳ ಮೇಲೂ ನಿಗಾ ವಹಿಸುವಂತೆ ಮೊಹಮ್ಮದ್ ಅಲಿ ತಿಳಿಸಿದರು.
ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಗುರುನಾಥ ಕಡಬೂರ ಅವರು ಮಾಧ್ಯಮ ಕಣ್ಗಾವಲು ಕೇಂದ್ರದ ದೈನಂದಿನ ಕಾರ್ಯಚಟುವಟಿಕೆಗಳ ಕುರಿತು ಚುನಾವಣಾ ವೆಚ್ಚ ವೀಕ್ಷಕರಿಗೆ ಮಾಹಿತಿ ನೀಡಿದರು.

ರಾಣಿ ಚನ್ನಮ್ಮ ವಿವಿ ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ ಈ ಸಂದರ್ಭದಲ್ಲಿ ಇದ್ದರು.
ಮಾಧ್ಯಮ ಕಣ್ಗಾವಲು ಕೇಂದ್ರದ ಸಿಬ್ಬಂದಿ ವಿನಾಯಕ ವನ್ನೂರ, ಕೆ.ಎನ್.ಮಿರಜಕರ, ಎಂ.ಸಿ.ಪತ್ತಾರ, ಅನಂತ ಪಪ್ಪು, ಎಂ.ಎಲ್.ಜಮಾದಾರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button