ಕಬ್ಬು ಬ್ನೆಳೆಗೆ ಸೂಕ್ತ ಬೆಲೆ ನಿಗದಿಗೆ ಆಗ್ರಹಿಸಿ ಕಳೆದ ಒಂದುವರೆ ತಿಂಗಳಿಂದ ಬೆಳಗಾವಿಯಲ್ಲಿ ರೈತರು ಬೃಹತ್ ಹೋರಾಟ ನಡೆಸಿದ್ದ ಬೆನ್ನಲ್ಲೇ ಇದೀಗ ಬಾಗಲಕೋಟೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಬೆಳಗಾವಿಯಲ್ಲಿ ರೈತರ ಹೋರಾಟ ಮುಕ್ತಾಯದ ಬೆನ್ನಲ್ಲೇ, ಮುಧೋಳ ಭಾಗದ ರೈತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಸಾವಿರಾರು ರೈತರು ಟ್ರ್ಯಾಕ್ಟರ್, ಪಾದಯಾತ್ರೆ ಮೂಲಕ ತಹಶೀಲ್ದಾರ್ ಕಚೇರಿಗೂ ತೆರಳಿ ಮನವಿ ಸಲ್ಲಿಸಿದ್ದಾರೆ.
ಟನ್ ಕಬ್ಬಿಗೆ 4200 ಬೆಲೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಕಬ್ಬು ಬೆಳೆಗಾರ ರೈತರು, ಕಬ್ಬು ಬೆಲೆ ಏರಿಕೆಗಾಗಿ ಘೋಷಣೆ ಕೂಗಿದರು. ನಂತರ ಸ್ಥಳದಲ್ಲೇ ಅಡುಗೆ ಮಾಡಿ ಊಟ ಮಾಡಿದರು. ತಹಶೀಲ್ದಾರ್ ಕಚೇರಿ ಎದುರು ಸೇರಿದ ರೈತರು ಡಿಸಿ ಅವರೇ ಸ್ಥಳಕ್ಕೆ ಬಂದು ನಮ್ಮ ಅಹವಾಲು ಆಲಿಸಬೇಕು. ಇಲ್ಲದಿದ್ದರೆ ಗುರುವಾರ ಹೋರಾಟ ಉಗ್ರವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಮಾತಾಡಿದ ಕಬ್ಬು ಬೆಳೆಗಾರರ ಸಂಘದ ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ‘ಪ್ರತಿ ಟನ್ ಕಬ್ಬಿಗೆ 3600 ಬೆಲೆ ಒಪ್ಪುವುದಿಲ್ಲ. ಬೆಳಗಾವಿ ಜಿಲ್ಲೆಯ ಎರಡು ಕಾರ್ಖಾನೆಗಳು 4200 ರೂ ಘೋಷಣೆ ಮಾಡಿವೆ. ನಮ್ಮಲ್ಲಿ ಏಕೆ ಘೋಷಣೆ ಮಾಡುತ್ತಿಲ್ಲ’ ಎಂದು ಆಕ್ರೋಶ ಹೊರಹಾಕಿದರು.
ಮುಧೋಳ ನಗರದಲ್ಲಿ ರೈತರ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ, ನಗರದಾದ್ಯಂತ ಖಾಕಿ ಕಟ್ಟೆಚ್ಚರ ವಹಿಸಿದೆ. ಸಂಗೊಳ್ಳಿ ರಾಯಣ್ಣ ಸರ್ಕಲ್, ನಿರಾಣಿ ಶುಗರ್ಸ್ ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವೆಡೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಿಲಾಗಿದೆ.



