Latest

ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಹಸಿವು ಇರಬೇಕು -ಶಿವಾನಂದ ಹೊಸಮನಿ

 

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಹಸಿವು ಇರಬೇಕು. ಅಧ್ಯಾಪಕರು ಅಧ್ಯಯನ ಮಾಡಿಕೊಂಡು ಪರಿಣಾಮಕಾರಿಯಾಗಿ ಪಠ್ಯಬೋಧಿಸಬೇಕು. ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕರಾಗಬೇಕು ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ. ಶಿವಾನಂದ ಬಿ. ಹೊಸಮನಿ ಹೇಳಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಿನೇಟ್ ಸಭಾಂಗಣದಲ್ಲಿ, ಬೆಳಗಾವಿಯ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದ ಗಣಿತಶಾಸ್ತ್ರ ಸಂಖ್ಯಾಶಾಸ್ತ್ರ ವಿಭಾಗ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನ ಪೂರ್ವ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.

ಜಾಗತೀಕರಣ ಸಂದರ್ಭದಲ್ಲಿ ಗುಣಾತ್ಮಕ ವಿಷಯಗಳ ಸಮ್ಮೇಳನಗಳು ಜರುಗಬೇಕು. ಗಣಿತಶಾಸ್ತ್ರ ವಿಷಯಗಳನ್ನು ಸವಾಲಾಗಿ ಸ್ವೀಕರಿಸಬೇಕು. ಗಣಿತಶಾಸ್ತ್ರ ಮಾನವನ ದೈನಂದಿನ ಕಾರ್ಯಚಟುವಟಿಕೆಗಳಿಗೆ ಅವಶ್ಯಕವಾಗಿದೆ. ಯಾಂತ್ರೀಕೃತ ಯುಗದಲ್ಲಿ ನಾವು ಎಷ್ಟು ಮುಂದುವರೆದರೂ ಗಣಿತಶಾಸ್ತ್ರ ಕಡ್ಡಾಯವಾಗಿ ಬೇಕೆಬೇಕು. ಸಂಶೋಧನಾ ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಹೆಸರು ಪಡೆದುಕೊಂದು ಗಣಿತಶಾಸ್ತ್ರಕ್ಕೆ ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ಕಲಿಯುವುದರಲ್ಲಿ ಹೆಚ್ಚು ಆಸಕ್ತಿ ತೋರಿಸಬೇಕು. ಗಣಿತಶಾಸ್ತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ. ಪ್ರಪಂಚದ ಯಾವ ಭಾಗದಲ್ಲಿಯೂ ಜೀವನ ನಿರ್ವಹಣೆ ಮಾಡಬಹುದು ಎಂದು ಅವರು ಹೇಳಿದರು.
ಈ ಸಮಾರಂಭ ಮುಖ್ಯ ಅತಿಥಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ಸತೀಶ ಅಣ್ಣಿಗೇರಿ ಆಗಮಿಸಿ, ಗಣಿತಶಾಸ್ತ್ರವು ಮಾನವನ ಕಾರ್ಯಚಟುವಟಿಕೆಗಳಿಗೆ ಆಧಾರಸ್ತಂಬವಾಗಿದೆ. ಗಣಿತ ವಿಷಯವನ್ನು ಮುಂದಿನ ಜನತೆಗೆ ಸರಳವಾಗಿ ತಿಳಿಸಿಕೊಡಬೇಕು. ಗಣಿತಶಾಸ್ತ್ರವು ಎಲ್ಲ ವಿಷಯಗಳಿಗೆ ಬೆನ್ನುಲುಬುವಾಗಿದೆ ಎಂದರು.
ಅತಿಥಿಗಳಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಿದ್ದು ಅಲಗೂರ ಆಗಮಿಸಿದ್ದರು. ಸಮಾರಂಭದ ನಂತರ ತಾಂತ್ರಿಕ ಅಧಿವೇಶನಗಳು ನಡೆದವು. ಈ ಅಧಿವೇಶನದಲ್ಲಿ100ಕ್ಕೂ ಹೆಚ್ಚು ಸ್ನಾತಕೊತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯಲಕ್ಷಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ. ಮಹಾಂತೇಶ ಬಿರ್ಜೆ ಸ್ವಾಗತಿಸಿದರು. ಪ್ರೊ. ಎಮ್.ಎಸ್. ಚೌಧರಿ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟರು. ಪ್ರೊ. ಸಿ.ಎಸ್. ಮಾಂಜರೇಕರ ವಂದಿಸಿದರು. ನಯನಾ ಜೈನ್ ಮತ್ತು ಅಕ್ಷಯ ಬಕೆಡಿ ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button