
ಪ್ರಗತಿವಾಹಿನಿ ಸುದ್ದಿ: ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ರ‍್ಯಾಲಿಯ ವೇಳೆ ಬಸ್‌ನಲ್ಲಿ ಕುಳಿತಿದ್ದ ಸಂಸದೆಗೆ ಕಾಂಗ್ರೆಸ್ ಸಂಸದರಿಬ್ಬರು ಕೆನ್ನೆಗೆ ಹೊಡೆದಿರುವ ಘಟನೆ ನಡೆದಿದೆ.
ಬಸ್ ನಲ್ಲಿ ಸಂಸದ ಮಾತನಾಡುತ್ತಾ ಮಹಿಳಾ ಸಂಸದೆ ಕೆನ್ನೆಗೆ ಹೊಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಅಲ್ಲದೇ ಈ ಬಗ್ಗೆ ಭಾರಿ ಚರ್ಚೆ ಕೂಡ ನಡೆಯುತ್ತಿದೆ.
ಚಂದ್ರಪುರದ ಕಾಂಗ್ರೆಸ್ ಮಹಿಳಾ ಸಂಸದೆ ಪ್ರತಿಭಾ ಧನೋರ್ಕರ್ ಅವರ ಕೆನ್ನೆಗೆ ಕಾಂಗ್ರೆಸ್ ಸಂಸದ ಶ್ಯಾಮ್‌ಕುಮಾರ್ ಬರ್ವೆ ಮೆಲ್ಲನೆ ಹೊಡೆದಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಂಸದೆ ಸ್ಪಷ್ಟನೆ ನೀಡಿದ್ದಾರೆ.
ಸಂಸದೆ ಪ್ರತಿಭಾ ಧನೋರ್ಕರ್, “ಅದು ಕೇವಲ ತಮಾಷೆಯಷ್ಟೇ. ಶ್ಯಾಮ್‌ಕುಮಾರ್ ಬರ್ವೆ ನನಗೆ ಅಣ್ಣನಿದ್ದಂತೆ” ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ನವೆಂಬರ್ 1ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳು ಹಮ್ಮಿಕೊಂಡಿದ್ದ ‘ವೋಟ್ ಬಚಾವೋ ದೇಶ್ ಬಚಾವೋ’ ರ‍್ಯಾಲಿಗೆ ತೆರಳಲು ಸಂಸದರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸಂಸದೆ ವರ್ಷಾ ಗಾಯಕ್ವಾಡ್ ಅವರೊಂದಿಗೆ ಪ್ರತಿಭಾ ಧನೋರ್ಕರ್ ಕುಳಿತು ನಗುತ್ತಾ ಮಾತನಾಡುತ್ತಿದ್ದಾಗ, ಪಕ್ಕದಲ್ಲೇ ನಿಂತಿದ್ದ ಸಂಸದ ಶ್ಯಾಮ್‌ಕುಮಾರ್ ಬರ್ವೆ ಪ್ರತಿಭಾ ಅವರ ಕೆನ್ನೆಗೆ ಮೆಲ್ಲನೆ ಹೊಡೆದಿದ್ದಾರೆ.
ಸಂಸದೆ ಪ್ರತಿಭಾ ಇದನ್ನು ತಮಾಷೆ ಎಂದು ತಳ್ಳಿಹಾಕಿದ್ದರೂ, ಈ ಘಟನೆಯ ವೀಡಿಯೊದ ಆಧಾರದ ಮೇಲೆ ಕಾಂಗ್ರೆಸ್‌ನ ಕೆಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಪಕ್ಷದ ಶಿಸ್ತು ಮತ್ತು ಮಹಿಳಾ ನಾಯಕರ ಗೌರವದ ಹಿತದೃಷ್ಟಿಯಿಂದ ಈ ಕುರಿತು ಶಿಸ್ತು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.




