ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ
ಸಹಕಾರಿ ಕ್ಷೇತ್ರದ `ಸುಕೋ ಬ್ಯಾಂಕ್’ ತನ್ನ `ಬೆಳ್ಳಿ ಹಬ್ಬ’ದ ಆಚರಣೆಯ ಸಂದರ್ಭದಲ್ಲಿ 2018 – 19ರ ಆರ್ಥಿಕ ಸಾಲಿನಲ್ಲಿ ಒಟ್ಟು 1122 ಕೋಟಿ ರೂಪಾಯಿ ವಹಿವಾಟನ್ನು ನಡೆಸಿ, ಶೇ. 40 ರಷ್ಟು ಪ್ರಗತಿ ಸಾಧಿಸಿದೆ.
ಒಟ್ಟು ಲಾಭ 9 ಕೋಟಿ ರೂಪಾಯಿ ಆಗಿದ್ದು, ತೆರಿಗೆ ಪಾವತಿಯ ನಂತರ ನಿವ್ವಳ ಲಾಭ 4.93 ಕೋಟಿ ರೂಪಾಯಿ ಆಗಿದೆ.
ಸುಕೋ ಬ್ಯಾಂಕ್‍ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಬ್ಯಾಂಕ್‍ನ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಸಹಕಾರಿ ಕ್ಷೇತ್ರದಲ್ಲಿ ಸುಕೋ ಬ್ಯಾಂಕ್ ಭದ್ರವಾಗಿ ತಳವೂರಿ, ಪ್ರತೀ ವರ್ಷವೂ ತನ್ನ ಒಟ್ಟಾರೆ ವ್ಯವಹಾರವನ್ನು ವೃದ್ಧಿಗೊಳಿಸಿಕೊಳ್ಳುತ್ತಿದೆ ಎಂದರು.
ಸುಕೋ ಬ್ಯಾಂಕ್ ಕರ್ನಾಟಕದ 16 ಜಿಲ್ಲೆಗಳಲ್ಲಿ ಕಾರ್ಯ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದ್ದು 28 ಶಾಖೆಗಳಲ್ಲಿ ತನ್ನ ವ್ಯವಹಾರವನ್ನು ನಡೆಸಿದೆ. ಶೇ. 40 ರಷ್ಟು ಪ್ರಗತಿ ಸಾಧಿಸಿರುವ ಬ್ಯಾಂಕ್ ಒಟ್ಟು 669 ಕೋಟಿ ರೂಪಾಯಿ ಠೇವಣಿ ಹೊಂದಿ, ಒಟ್ಟು 453 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿದೆ ಎಂದರು.
ಬ್ಯಾಂಕ್‍ನ ಎನ್‍ಪಿಎ (ನಿವ್ವಳ ಅನುತ್ಪಾದಕ ಆಸ್ತಿ) ಶೇ. 1.97 ರಷ್ಟಿದ್ದು, ಇದು ಸುಕೋ ಬ್ಯಾಂಕ್‍ನ ಆರ್ಥಿಕ ಭದ್ರತೆ ಮತ್ತು ಆರೋಗ್ಯವನ್ನು ಸೂಚಿಸುತ್ತದೆ ಎಂದು ಹೇಳಿದರು.
`ಸುಕೋ ಸೋಲಾರ್ ಶಕ್ತಿ’:-
ಸುಕೋ ಬ್ಯಾಂಕ್ ತನ್ನ ಬೆಳ್ಳಿ ಹಬ್ಬದ ಅಂಗವಾಗಿ ಹೊಸದಾಗಿ `ಸುಕೋ ಸೋಲಾರ್ ಶಕ್ತಿ’ ಯೋಜನೆಯನ್ನು ಜಾರಿ ಮಾಡಿದ್ದು, 25 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಅತಿ ಕಡಿಮೆ ಸಮಾನ ಮಾಸಿಕ ಕಂತುಗಳಲ್ಲಿ ಸೋಲಾರ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ 300 ಕ್ಕೂ ಹೆಚ್ಚಿನ ಜನರು ಹೆಸರು ನೋಂದಣಿ ಮಾಡಿಕೊಂಡು, ಸೋಲಾರ್ ತಂತ್ರಜ್ಞಾನದ ಮೂಲಕ ವಿದ್ಯುತ್ ಉತ್ಪಾದನೆಗೆ ಆಸಕ್ತಿ ತೋರಿದ್ದಾರೆ ಎಂದರು.
ಯುಪಿಐ ಹಣ ಪಾವತಿ ತಂತ್ರಜ್ಞಾನ
ಸುಕೋ ಬ್ಯಾಂಕ್ ಕೇಂದ್ರ ಸರ್ಕಾರದ ಯುಪಿಐ ಹಣ ಪಾವತಿ ತಂತ್ರಜ್ಞಾನದ ವ್ಯವಸ್ಥೆಗೆ ಒಳಪಟ್ಟ ಕರ್ನಾಟಕದ ಪ್ರಪ್ರಥಮ ಸಹಕಾರಿ ಬ್ಯಾಂಕ್ ಎನ್ನುವ ಕೀರ್ತಿಯನ್ನು ಹೊಂದಿದ್ದು, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಅನೇಕ ಪ್ರಥಮಗಳ ಗೌರವಕ್ಕೆ ಪ್ರಾಪ್ತಿಯಾಗಿದೆ ಎಂದರು.
ರುಪೇ – ಪ್ಲಾಟಿನಂ ಕಾರ್ಡ್:-
ಸುಕೋ ಬ್ಯಾಂಕ್, ರುಪೇ ಪ್ಲಾಟಿನಂ ಕಾರ್ಡ್ ವಿತರಣೆ ಮಾಡುತ್ತಿರುವ ಕರ್ನಾಟಕದ ಪ್ರಥಮ ಸಹಕಾರಿ ಬ್ಯಾಂಕ್ ಆಗಿದೆ. ಬ್ಯಾಂಕ್‍ನ ಯಾವುದೇ ಖಾತೆದಾರರು ಈ ಕಾರ್ಡ್ ಪಡೆಯಲು ಅರ್ಹರು. ಈ ಕಾರ್ಡ್ ಪಡೆಯುವ ಖಾತೆದಾರರು ಕನಿಷ್ಠ ಹಣವನ್ನು ಖಾತೆಯಲ್ಲಿ ಹೊಂದಿರಬೇಕಾದ ಅನಿವಾರ್ಯತೆ ಇಲ್ಲ. ಎಲ್ಲಾ ಗ್ರಾಹಕರು ಈ ಕಾರ್ಡ್‍ನ ಸೌಲಭ್ಯ ಪಡೆಯಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಎಸ್. ಅಗ್ನಿಹೋತ್ರಿ ಹಾಗೂ ಆಡಳಿತ ಮಂಡಳಿಯ ಕಾರ್ಯದರ್ಶಿ ವೆಂಕಟೇಶ್‍ರಾವ್ ಅವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ