ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಸಂದರ್ಭದಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ತಪ್ಪಾಗಿ ಬಳಸಿಕೊಂಡು ಯಡವಟ್ಟು ಮಾಡಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿ ಇಂದು ಸುಪ್ರೀಂಕೋರ್ಟ್‌ನಲ್ಲಿ ಕ್ಷಮೆ ಯಾಚಿಸಿದ್ದಾರೆ.
ಕೇಂದ್ರ ಸರ್ಕಾರದ ಪರವಾಗಿ ನೀಡಲಾಗಿದ್ದ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಲು ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ಒಪ್ಪಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಇದನ್ನು ದಾಳವಾಗಿ ಬಳಸಿಕೊಂಡಿದ್ದ ರಾಹುಲ್, ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ಪ್ರಧಾನಿ ಕಳ್ಳತನ ಮಾಡಿದ್ದಾರೆ ಎಂದು ಸುಪ್ರೀಂಕೋರ್ಟ್ ಕೂಡ ಹೇಳಿದೆ’ ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ದೂರಿದ್ದರು.
ತಮ್ಮ ಹೇಳಿಕೆಯು ರಾಜಕೀಯ ಪ್ರಚಾರದ ಕಾವಿನ ಆವೇಶದಲ್ಲಿ ಹೇಳಿರುವಂಥದ್ದು. ಈ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ನೀಡಿರುವುದಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟೀಕರಣ ನೀಡಿದ್ದಾರೆ.
ರಫೇಲ್ ಒಪ್ಪಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯಲ್ಲಿ ಸುಪ್ರೀಂಕೋರ್ಟ್ ಹೆಸರನ್ನು ಉಲ್ಲೇಖಿಸಿದ್ದಕ್ಕೆ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಅಫಿಡವಿಟ್ ಸಲ್ಲಿಸಿದ ಅವರು, ತಮ್ಮ ಹೇಳಿಕೆಯು ಪ್ರಚಾರದ ಆವೇಶದಲ್ಲಿ ಹೊರಬಂದಿರುವಂಥದ್ದು.
ನನ್ನ ಮನಸ್ಸಿನಲ್ಲಿ ಅಂತಹ ಯಾವುದೇ ಉದ್ದೇಶಪೂರ್ವಕ ಯೋಚನೆಗಳು ಇರಲಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಏಪ್ರಿಲ್ 10ರಂದು ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ತಾವು ನೋಡಿರಲಿಲ್ಲ ಅಥವಾ ಓದಿರಲಿಲ್ಲ. ರಾಜಕೀಯ ಪ್ರಚಾರದ ಸಂದರ್ಭದಲ್ಲಿ ಮೋದಿ ಅವರ ವಿರುದ್ಧ ಹೇಳಿಕೆ ನೀಡಿದ್ದೇನೆ. ನ್ಯಾಯಾಲಯದ ವಿಚಾರಣೆಗೆ ಸಂಬಂಧಿಸಿದಂತೆ ಯಾವುದನ್ನೂ ತಿರುಚುವ ಉದ್ದೇಶ ಇರಲಿಲ್ಲ. ಚೌಕಿದಾರ್ ಚೋರ್ ಹೈ ಎಂಬ ಪದವನ್ನು ಸುಪ್ರೀಂಕೋರ್ಟ್ ಬಳಸಿರಲಿಲ್ಲ. ನ್ಯಾಯಾಲಯವು ಅಂತಹ ಅಭಿಪ್ರಾಯ, ಗ್ರಹಿಕೆ ಅಥವಾ ಸಂಗತಿಗಳನ್ನು ಕಂಡುಕೊಂಡು ದಾಖಲಿಸದ ಹೊರತು ಭವಿಷ್ಯದಲ್ಲಿ ಮಾಧ್ಯಮಗಳಿಗೆ ನೀಡುವ ರಾಜಕೀಯ ಹೇಳಿಕೆಗಳಲ್ಲಿ ಮತ್ತು ಸಾರ್ವಜನಿಕ ಭಾಷಣಗಳಲ್ಲಿ ನ್ಯಾಯಾಲಯವನ್ನು ಉಲ್ಲೇಖಿಸಿ ಯಾವುದೇ ಅಭಿಪ್ರಾಯಗಳನ್ನು ನೀಡುವುದಿಲ್ಲ ಎಂದು ವಾಗ್ದಾನ ಮಾಡಿದರು.
ಮೀನಾಕ್ಷಿ ಲೇಖಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಆರೋಪದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಯಾವುದೇ ಹೇಳಿಕೆಯನ್ನು ಪ್ರಸ್ತಾಪಿಸಿಲ್ಲ ಎಂದು ಹೇಳಿತ್ತು. ರಾಹುಲ್ ಆರೋಪ ಮಾಡಿರುವ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ಯಾವುದೇ ವಿಚಾರಣೆ ನಡೆಸುತ್ತಿಲ್ಲ. ಅದು ರಫೇಲ್ ಪ್ರಕರಣದ ದಾಖಲೆಗಳ ಬಗ್ಗೆ ಮಾತ್ರ ವಿಚಾರಣೆ ನಡೆಸಿದೆ. ಆದರೆ, ರಾಹುಲ್ ಗಾಂಧಿ ಅವರು ಮಾಧ್ಯಮ/ಸಾರ್ವಜನಿಕವಾಗಿ ರಫೇಲ್ ತೀರ್ಪಿನ ಕುರಿತು ಸುಪ್ರೀಂಕೋರ್ಟ್ ಅನ್ನು ಉಲ್ಲೇಖಿಸಿರುವುದು ಸರಿಯಲ್ಲ ಎಂದು ಕಿರಿಕಾರಿತ್ತು. ತಮ್ಮ ಹೇಳಿಕೆಯ ಬಗ್ಗೆ ಸೋಮವಾರದ (ಏ. 22) ಒಳಗೆ ವಿವರಣೆ ನೀಡಬೇಕು ಎಂದು ಅದು ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿತ್ತು.
ಚೌಕಿದಾರ್ ಚೋರ್ ಹೈ ಹೇಳಿಕೆಗೆ ಸುಪ್ರಿಂ ಸಪೋರ್ಟ್ ಪಡೆಯಲೆತ್ನಿಸಿದ ರಾಹುಲ್ ಗೆ ನೋಟೀಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ