ನೀರನ್ನು ಮಿತವಾಗಿ, ಜವಾಬ್ದಾರಿಯಿಂದ ಬಳಸಿಕೊಳ್ಳಲು ಮನವಿ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಹಿಡಕಲ್ ಜಲಾಶಯದಿಂದ 2026-27ನೇ ಸಾಲಿನ ನೀರಾವರಿ ಉದ್ದೇಶಕ್ಕಾಗಿ ಮೂರು ಹಂತಗಳಲ್ಲಿ ನೀರು ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದ್ದು, ರೈತರು ಹಾಗೂ ಸಾರ್ವಜನಿಕರು ಲಭ್ಯವಿರುವ ನೀರನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳುವ ಜೊತೆಗೆ ಮಿತವಾಗಿ ಮತ್ತು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಜಲಾಶಯದಿಂದ ಜಿಆರ್ಬಿಸಿ, ಜಿಎಲ್ಬಿಸಿ ಹಾಗೂ ಘಟಪ್ರಭಾ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. 2026-27ನೇ ಸಾಲಿನ ನೀರು ಬಿಡುಗಡೆ ಪ್ರಕ್ರಿಯೆಯನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ರೈತರು ನೀರಾವರಿ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ನೀರನ್ನು ಅನಗತ್ಯವಾಗಿ ವ್ಯರ್ಥ ಮಾಡದೆ, ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ನೀರು ವ್ಯರ್ಥ ಮಾಡದಂತೆ ಸಾರ್ವಜನಿಕರಿಗೆ ಕರೆ: ಜಲ ಸಂಪನ್ಮೂಲವು ಕೃಷಿ ಹಾಗೂ ಸಾರ್ವಜನಿಕ ಜೀವನದ ಪ್ರಮುಖ ಆಧಾರವಾಗಿದ್ದು, ಅದರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ರೈತರು ಮತ್ತು ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕು. ನೀರನ್ನು ಅನಗತ್ಯವಾಗಿ ಹರಿಸುವುದು, ವ್ಯರ್ಥ ಮಾಡುವುದು ಹಾಗೂ ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.




